
ಅಹ್ಮದಾಬಾದ್: ಟೀಮ್ ಇಂಡಿಯಾದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಗುರುವಾರ (ಮಾರ್ಚ್ 18) ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಟಿ20ಐ ಪಂದ್ಯದಲ್ಲಿ ಐಪಿಎಲ್ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಚುಟುಕು ಕ್ರಿಕೆಟ್ ಮಾದರಿ ಟಿ20ಯಲ್ಲಿ 9000 ರನ್ ದಾಖಲೆ ನಿರ್ಮಿಸಿದ್ದಾರೆ. 12 ಎಸೆತಗಳಿಗೆ 12 ರನ್ ಬಾರಿಸಿದ ರೋಹಿತ್, ಜೋಫ್ರಾ ಆರ್ಚರ್ ಓವರ್‌ನಲ್ಲಿ ಕಾಟ್ ಆ್ಯಂಡ್ ಬೌಲ್ಟ್ ಆಗಿ ನಿರ್ಗಮಿಸಿದರಾದರೂ ಅಷ್ಟರಲ್ಲಾಗಲೇ ದಾಖಲೆ ನಿರ್ಮಾಣವಾಗಿತ್ತು.
ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಟಿ20ನಲ್ಲಿ 9650* ರನ್ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ರೋಹಿತ್ 9000+ ರನ್ ಬಾರಿಸಿದ್ದಾರೆ. ತೃತೀಯ ಸ್ಥಾನಿ ಸುರೇಶ್ ರೈನಾ 8494 ರನ್ ದಾಖಲೆ ಹೊಂದಿದ್ದಾರೆ.
33ರ ಹರೆಯದ ರೋಹಿತ್ 38 ಟೆಸ್ಟ್ ಪಂದ್ಯಗಳಲ್ಲಿ 2615 ರನ್, 224 ಏಕದಿನ ಪಂದ್ಯಗಳಲ್ಲಿ 9115 ರನ್, 110 ಟಿ20ಐ ಪಂದ್ಯಗಳಲ್ಲಿ 2800 ರನ್, 200 ಐಪಿಎಲ್ ಪಂದ್ಯಗಳಲ್ಲಿ 5230 ರನ್ ದಾಖಲೆ ಹೊಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ರನ್ (264 ರನ್) ವಿಶ್ವದಾಖಲೆ ರೋಹಿತ್ ಹೆಸರಿನಲ್ಲಿದೆ.