
ಬೆಂಗಳೂರು: ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್, ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಹೊಸದಾಗಿ ಪರಿಚಯಿಸಿರುವ 2 ಕಿ.ಮೀ. ರನ್ ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಸ್ ಆಗಿದ್ದಾರೆ. ಯೋ-ಯೋ ಟೆಸ್ಟ್‌ನ ಭಾಗವಾಗಿ ಈ ಟೆಸ್ಟ್ ಮಾಡಲಾಗುತ್ತದೆ. ಈ ಟೆಸ್ಟ್ ವೇಳೆ ಆಟಗಾರರು 2 ಕಿ.ಮೀ. ದೂರವನ್ನು 8.30 ಸೆಕೆಂಡ್‌ಗಳಲ್ಲಿ ಕ್ರಮಿಸಬೇಕಿರುತ್ತೆ.
ಶುಕ್ರವಾರವಷ್ಟೇ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ನಡೆದಿದ್ದ ಬಿಸಿಸಿಐ 2 ಕಿ.ಮೀ. ರನ್ ಫಿಟ್ನೆಸ್ ಟೆಸ್ಟ್‌ನಲ್ಲಿ ಸಂಜು ಸ್ಯಾಮ್ಸನ್ ಫೇಲ್ ಆಗಿದ್ದರು. ಸಂಜು ಮಾತ್ರ ಅಲ್ಲ, ಇಶಾನ್ ಕಿಶನ್, ನಿತೀಶ್ ರಾಣಾ, ರಾಹುಲ್ ತೆವಾಟಿಯಾ, ಸಿದ್ಧಾರ್ಥ್ ಕೌಲ್, ಜಯದೇವ್ ಉನಾದ್ಕತ್ ಕೂಡ ಫೇಲ್ ಆಗಿದ್ದರು.
2 ಕಿ.ಮೀ. ರನ್ ಟೆಸ್ಟ್ ನೂತನವಾಗಿ ಪರಿಚಯಿಸಲಾಗಿರುವುದರಿಂದ ಆರಂಭದಲ್ಲಿ ನಡೆಸಿದ ಟೆಸ್ಟ್‌ನಲ್ಲಿ ಫೇಲ್ ಆದರೂ ಎರಡನೇ ಅವಕಾಶ ನೀಡಲಾಗುತ್ತದೆ ಎಂದು ಬಿಸಿಸಿಐ ಹೇಳಿತ್ತು. ಅದರಂತೆ ಎರಡನೇ ಅವಕಾಶದಲ್ಲಿ ಸ್ಯಾಮ್ಸನ್ ಪಾಸ್ ಆಗಿದ್ದಾರೆ. ಫಿಟ್ನೆಸ್ ಟೆಸ್ಟ್‌ನಲ್ಲಿ ತಾನು ಪಾಸ್ ಆಗಿರುವ ವಿಚಾರವನ್ನು ಸ್ವತಃ ಸಂಜು ಸ್ಯಾಮ್ಸನ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಟ್ವಿಟರ್‌ನಲ್ಲಿ ಚಿತ್ರ ಹಾಕಿಕೊಂಡಿರುವ 'ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಸ್ ಆಗಿದ್ದೇನೆ. ಇನ್ನು ವಿಜಯ್ ಹಜಾರೆಯತ್ತ ನಡೆಯಲಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಫೆಬ್ರವರಿ 20ರಿಂದ ಆರಂಭಗೊಳ್ಳಲಿರುವ ವಿಜಯ್ ಹಜಾರೆಯಲ್ಲಿ ಸ್ಯಾಮ್ಸನ್ ಪಾಲ್ಗೊಳ್ಳಲಿದ್ದಾರೆಯಾದರೂ ಮುಂಬರಲಿರುವ ಇಂಗ್ಲೆಂಡ್ ಟೆಸ್ಟ್ ಪಂದ್ಯಗಳ ಆಯ್ಕೆಗೂ ಲಭ್ಯರಿರಲಿದ್ದಾರೆ.