
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಈ ವರ್ಷ ಭಾರತದಲ್ಲಿ ಟಿ20 ವಿಶ್ವಕಪ್ ನಡೆಯುವ ಹಿನ್ನೆಲೆಯಲ್ಲಿ ಈ ಟೂರ್ನಿ ಬಹಳ ಮಹತ್ವ ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ವಿಶ್ವಕಪ್‌ಗೆ ಪೂರ್ವ ತಯಾರಿಯನ್ನು ನಡೆಸುವುದಕ್ಕಿಂತ ಸರಣಿಯನ್ನು ಗೆಲ್ಲುವುದು ಮುಖ್ಯ ಎಂದು ಹೇಳಿದ್ದಾರೆ.
"ಈಗ ಪೂರ್ವಸಿದ್ದತೆಗೆ ಸಮಯವಿಲ್ಲ. ಟಿ20 ವಿಶ್ವಕಪ್ ನಡೆಯಲು ಇನ್ನೂ ಕೆಲ ಸಮಯಗಳು ಇದೆ. ಭವಿಷ್ಯದ ಬಗ್ಗೆ ಯೋಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಸರಣಿಯನ್ನು ಗೆಲ್ಲುವುದು ಹಾಗೂ ವರ್ತಮಾನದತ್ತ ಗಮನಹರಿಸುವುದು ಅತ್ಯಂತ ಮುಖ್ಯ." ಎಂದು ರೋಹಿತ್ ಶರ್ಮಾ ಮೊದಲ ಟಿ20 ಪಂದ್ಯದ ಹಿನ್ನೆಲೆಯಲ್ಲಿ ಬುಧವಾರ ನಡೆದ ವರ್ಚುವಲ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಬಲಿಷ್ಠ ತಂಡವಾಗಿದೆ. ಆದರೆ ಇಂಗ್ಲೆಂಡ್ ತಂಡ ಚುಟುಕು ಮಾದರಿಯಲ್ಲಿ ನಂಬರ್ 1 ತಂಡ ಎನಿಸಿಕೊಂಡಿದೆ. ಹೀಗಾಗಿ ಎರಡು ತಂಡಗಳ ಸಂಯೋಜನೆಯನ್ನು ಪರೀಕ್ಷಿಸಲು ಇದು ಉತ್ತಮವಾದ ಮುಖಾಮುಖಿಯಾಗಿದೆ. ಆದರೆ ಇಂತಾ ಮಹತ್ವದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದು ಹಾಗೂ ಸರಣಿಯನ್ನು ಗೆಲ್ಲುವುದು ಮುಖ್ಯ ಎಂದು ರೋಹಿತ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಭವಿಷ್ಯದ ಬಗ್ಗೆ ಹೆಚ್ಚಾಗಿ ಯೋಚನೆಯನ್ನು ಮಾಡಲು ಯಾವುದೇ ಸಂಗತಿಗಳು ಇಲ್ಲ. ಪ್ರಸಕ್ತ ಕಾಲದ ಬಗ್ಗೆ ನೀವು ಎಚ್ಚರಿಕೆ ವಹಿಸಿದರೆ ಭವಿಷ್ಯದ ಬಗ್ಗೆ ಅದುವೇ ಎಚ್ಚರಿಕೆ ವಹಿಸುತ್ತದೆ. ಇದಕ್ಕಿಂತ ಹೆಚ್ಚಿನದಾಗಿ ಯೋಚಿಸಲು ಸಮಯವಿಲ್ಲ" ಎಂದು ರೋಹಿತ್ ಶರ್ಮಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಸರಣಿಯಲ್ಲಿ ಇಬ್ಬರು ಯುವ ಆಟಗಾರರು ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಇಶಾನ್ ಕಿಶನ್ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಕಾಯಬೇಕಾಗಿ ಬಂದರೂ ಸೂರ್ಯಕುಮಾರ್ ಯಾದವ್ ಈ ಸರಣಿಯಲ್ಲಿ ಆಡುವ ಅವಕಾಶ ಪಡೆಯಬಹುದು. ಆದರೆ ಈ ವಿಚಾರವಾಗಿ ರೋಹಿತ್ ಶರ್ಮಾ ಯುವ ಆಟಗಾರರ ಮೇಲೆ ಶೀಘ್ರವಾಗಿ ಒತ್ತಡವನ್ನು ಹೇರಲು ಬಯಸುವುದಿಲ್ಲ. ಮೊದಲಿಗೆ ಸ್ಥಿರವಾಗಿ ಪರಿಸ್ಥಿತಿಗಳನ್ನು ಆವರು ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ.