ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಳೆಯಿಂದ ಟಿ20 ಸರಣಿ: ಆರಂಭಿಕರ ಆಯ್ಕೆಯೇ ತಲೆನೋವು

india vs england t20 series preview

ಮ್ಯಾಂಚೆಸ್ಟರ್, ಜುಲೈ 2: ತವರು ನೆಲದಲ್ಲಿ ಇತ್ತೀಚೆಗೆ ಗಮನಾರ್ಹ ಪ್ರದರ್ಶನ ನೀಡಿದ್ದ ಭಾರತದ ಕ್ರಿಕೆಟ್ ತಂಡ ಇಂಗ್ಲೆಂಡ್‌ನ ಬೌನ್ಸಿ ಪಿಚ್‌ಗಳಲ್ಲಿ ನಿಜವಾದ ಪರೀಕ್ಷೆಗೆ ಒಳಗಾಗಲಿದೆ.

ಮಂಗಳವಾರದಿಂದ ಆರಂಭವಾಗಲಿರುವ ಟಿ20 ಸರಣಿ ಭಾರತದ ಪಾಲಿಗೆ ಮಹತ್ವದ್ದಾಗಿದೆ. ಏಕೆಂದರೆ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಪಾರಮ್ಯ ಮೆರೆಯುತ್ತಿರುವ ಇಂಗ್ಲೆಂಡ್ ತಂಡವನ್ನು ಅದರ ನೆಲದಲ್ಲಿಯೇ ಮಣಿಸುವುದು ಸುಲಭದ ಮಾತಲ್ಲ. ಅದರ ಬೆನ್ನಲ್ಲೇ ಏಕದಿನ ಹಾಗೂ ಟೆಸ್ಟ್ ಸರಣಿಗಳೂ ನಡೆಯಲಿವೆ. ಟಿ20 ಸರಣಿ ಗೆದ್ದರೆ ಭಾರತೀಯ ತಂಡದ ಆತ್ಮವಿಶ್ವಾಸ ಹೆಚ್ಚಲಿದೆ.

ಭಾರತ ತಂಡದಲ್ಲಿ ಉತ್ತಮ ಬ್ಯಾಟ್ಸ್‌ಮನ್‌ಗಳಿದ್ದರೂ, ಇಂಗ್ಲೆಂಡ್ ವೇಗದ ಬೌಲರ್‌ಗಳನ್ನು ಅಲ್ಲಿನ ಪುಟಿದೇಳುವ ಪಿಚ್‌ನಲ್ಲಿ ಎದುರಿಸುವುದು ಕಷ್ಟಕರ. ಅಲ್ಲದೆ, ಟೀಂ ಇಂಡಿಯಾದ ಆಧಾರ ಸ್ತಂಭ, ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಭಾರತಕ್ಕೆ ದೊಡ್ಡ ತಲೆನೋವಾಗಿದೆ.

ಎಲ್ಲ ದೇಶಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರೂ, ಇಂಗ್ಲೆಂಡ್ ನೆಲದಲ್ಲಿ ಕೊಹ್ಲಿ ವೈಫಲ್ಯ ಕಂಡಿದ್ದಾರೆ. ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳಲ್ಲಿಯೂ ಕೊಹ್ಲಿ ವಿಫಲರಾಗಿದ್ದರು.

ಬ್ಯಾಟ್ಸ್‌ಮನ್‌ಗಳ ಆಯ್ಕೆ ವಿಚಾರದಲ್ಲಿ ಕೊಹ್ಲಿ ಚಿಂತೆಗೀಡಾಗಿದ್ದಾರೆ. ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲ ಕಾಡುತ್ತಿದೆ. ಆರಂಭಿಕರಾಗಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅವರನ್ನು ಆಡಿಸುವುದು ಬಹುತೇಕ ಖಚಿತ. ಆದರೆ, ಅತ್ಯುತ್ತಮ ಫಾರ್ಮ್‌ನಲ್ಲಿರುವ ಕೆ.ಎಲ್. ರಾಹುಲ್ ಅವರನ್ನು ಕಡೆಗಣಿಸುವಂತಿಲ್ಲ.

ಅದೇ ರೀತಿ ದಿನೇಶ್ ಕಾರ್ತಿಕ್ ಕೂಡ ಉತ್ತಮ ಲಯದಲ್ಲಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಕಾರ್ತಿಕ್ ಅವರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ, ರಾಹುಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವುದು ಅನಿವಾರ್ಯ.

ಐರ್ಲೆಂಡ್‌ ಎದುರಿನ ಎರಡನೆಯ ಪಂದ್ಯದಲ್ಲಿ ಅರ್ಧಶತಕ ಗಳಿಸಿರುವ ಸುರೇಶ್ ರೈನಾ ಅವರನ್ನು ಹೊರಗೆ ಕೂರಿಸುವುದು ಕಷ್ಟ. ಇಂಗ್ಲೆಂಡ್ ಪಿಚ್‌ಗಳಲ್ಲಿ ಆಡಿದ ಅನುಭವ ಅವರಿಗಿದೆ. ವಾಷಿಂಗ್ಟನ್ ಸುಂದರ್ ಸ್ಥಾನಕ್ಕೆ ಆಯ್ಕೆಯಾಗಿರುವ ಕೃನಾಲ್ ಪಾಂಡ್ಯ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಭಾರತಕ್ಕೆ ನೆರವಾಗಬಲ್ಲರು

ಬೌಲಿಂಗ್‌ನಲ್ಲಿಯೂ ಸವಾಲು

ಬೌಲಿಂಗ್‌ನಲ್ಲಿಯೂ ಸವಾಲು

ಭಾರತಕ್ಕೆ ಬೌಲಿಂಗ್ ವಿಭಾಗ ದೊಡ್ಡ ಸವಾಲಾಗಿದೆ. ಅಲ್ಲಿನ ಪಿಚ್‌ಗಳಲ್ಲಿ ವೇಗಿ ಭುವನೇಶ್ವರ್ ಹೆಚ್ಚು ಪ್ರಭಾವಿಯಾಗಬಹುದು. ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್ ಮತ್ತು ಯಜುರ್ವೇಂದ್ರ ಚಾಹಲ್ ಇಬ್ಬರ ಜತೆ ಮತ್ತೊಬ್ಬರನ್ನು ತರುವುದು ಕಷ್ಟ.

ವೇಗದ ಬೌಲಿಂಗ್ ವಿಭಾಗದ ಶಕ್ತಿ ಕುಂದಿದೆ. ಚುಟುಕು ಕ್ರಿಕೆಟ್‌ನ ಪರಿಣತ ಬೌಲರ್ ಜಸ್‌ಪ್ರೀತ್ ಬೂಮ್ರಾ ಗಾಯಗೊಂಡಿರುವುದು ಭಾರತಕ್ಕೆ ತುಸು ಹಿನ್ನಡೆಯುಂಟು ಮಾಡಲಿದೆ.

ಅವರ ಬದಲು ಆಯ್ಕೆಯಾಗಿರುವ ದೀಪಕ್ ಚಾಹರ್, ಇತ್ತೀಚೆಗೆ ಇಂಗ್ಲೆಂಡ್ ಎ ವಿರುದ್ಧದ ಸರಣಿಯಲ್ಲಿ ಗಮನ ಸೆಳೆದಿದ್ದಾರೆ. ಹೀಗಾಗಿ ಅವರಿಗೆ ಭುವನೇಶ್ವರ್ ಕುಮಾರ್ ಅವರ ಜೋಡಿಯಾಗಿ ಬೌಲಿಂಗ್ ಸಾರಥ್ಯ ವಹಿಸಬಹುದು. ಅನುಭವಿ ಉಮೇಶ್ ಯಾದವ್ ಅವರಿಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ.

ಬಲಿಷ್ಠವಾಗಿದೆ ಇಂಗ್ಲೆಂಡ್ ತಂಡ

ಇಂಗ್ಲೆಂಡ್ ತಂಡ ಎಲ್ಲಾ ವಿಭಾಗಗಳಲ್ಲಿಯೂ ಪ್ರಬಲವಾಗಿದೆ.

ಜೋಸ್ ಬಟ್ಲರ್, ಜೋ ರೂಟ್ ಮತ್ತು ಜೇಸನ್ ರಾಯ್ ಎದುರಾಳಿಗಳನ್ನು ಮನಬಂದಂತೆ ಚಚ್ಚಿ ಹಾಕುವ ಸಾಮರ್ಥ್ಯ ಹೊಂದಿದ್ದಾರೆ.

ಬೆನ್ ಸ್ಟೋಕ್ಸ್ ತಂಡಕ್ಕೆ ಮರಳಿರುವುದರಿಂದ ಅವರ ಬಲ ಹೆಚ್ಚಿದೆ. ಜಾನಿ ಬೈರ್‌ಸ್ಟೋ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಡೇವಿಡ್ ವಿಲ್ಲಿ, ಲಿಯಾಮ್ ಪ್ಲಂಕೆಟ್, ಟಾಮ್ ಕುರ್ರನ್, ಆದಿಲ್ ರಶೀದ್, ಜೇಕ್ ಬಾಲ್ ಅವರ ಬೌಲಿಂಗ್ ಪಡೆಯನ್ನು ಭಾರತೀಯ ಬ್ಯಾಟ್ಸ್‌ಮನ್‌ಗಳು ಹೇಗೆ ಎದುರಿಸುತ್ತಾರೋ ನೋಡಬೇಕು.

ತಂಡದಲ್ಲಿ ಯಾರ್ಯಾರಿದ್ದಾರೆ?

ಭಾರತ: ವಿರಾಟ್ ಕೊಹ್ಲಿ, ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಎಂ.ಎಸ್. ಧೋನಿ, ದಿನೇಶ್ ಕಾರ್ತಿಕ್, ಸುರೇಶ್ ರೈನಾ, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಯಜುರ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ದೀಪಕ್ ಚಾಹರ್, ಸಿದ್ಧಾರ್ಥ ಕೌಲ್.

ಇಂಗ್ಲೆಂಡ್: ಇಯಾನ್ ಮಾರ್ಗನ್, ಮೊಯೀನ್ ಅಲಿ, ಅಲೆಕ್ಸ್ ಹೇಲ್ಸ್, ಜೋಸ್ ಬಟ್ಲರ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋ, ಜೇಕ್ ಬಾಲ್, ಸ್ಯಾಮ್ ಕುರ್ರನ್, ಟಾಮ್ ಕುರ್ರನ್, ಲಿಯಾಮ್ ಪ್ಲಂಕೆಟ್, ಡೇವಿಡಿ ವಿಲ್ಲಿ, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್, ಡೇವಿಡ್ ಮಲನ್, ಜೋ ರೂಟ್.

ಎಲ್ಲಿ? ಯಾವಾಗ?

ಪಂದ್ಯದ ಆರಂಭ: ರಾತ್ರಿ 10 (ಭಾರತೀಯ ಕಾಲಮಾನ)
ನೇರಪ್ರಸಾರ: ಸೋನಿ ಸಿಕ್ಸ್, ಸೋನಿ ಲೈವ್ ಆಪ್
ಎರಡನೆಯ ಪಂದ್ಯ: ಜುಲೈ 6, ಕಾರ್ಡಿಫ್
ಮೂರನೇ ಪಂದ್ಯ: ಜುಲೈ 8, ಬ್ರಿಸ್ಟಲ್

Story first published: Monday, July 2, 2018, 17:04 [IST]
Other articles published on Jul 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X