ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಇಂಗ್ಲೆಂಡ್ 193 ರನ್‌ಗಳ ಗುರಿಯನ್ನು ನೀಡಿದೆ. ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ನಾಲ್ಕನೇ ದಿನದಾಟದಲ್ಲಿ 4 ವಿಕೆಟ್ ಕಳೆದುಕೊಂಡು 58 ರನ್ ಕಲೆ ಹಾಕಿದೆ. ಈ ವೇಳೆ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ 6 ರನ್ ಕಲೆ ಹಾಕಿ, ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆದರೆ ಈ ಚಿಕ್ಕ ಇನಿಂಗ್ಸ್ ಮೂಲಕವೇ ಗಿಲ್ ದಾಖಲೆ ಬರೆದರು.
ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡುವಾಗ 41 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕರುಣ್ ನಾಯರ್ ಔಟ್ ಆಗುತ್ತಾ ಇದ್ದಂತೆ ಶುಭಮನ್ ಗಿಲ್ ಕ್ರೀಸ್‌ಗೆ ಬಂದರು. ಈ ವೇಳೆ ಆತ್ಮವಿಶ್ವಾಸದಿಂದಲೇ ಇವರು ಬ್ಯಾಟ್ ಮಾಡಲು ಆರಂಭಿಸಿದರು. ಒಂದು ಕ್ಲಾಸಿಕ್ ಬೌಂಡಿ ಬಾರಿಸಿ ಭರವಸೆ ಮೂಡಿಸಿದ್ದ ಶುಭಮನ್ ಗಿಲ್ (6) ಬ್ರೈಡನ್ ಕಾರ್ಸೆ ಎಸೆತದಲ್ಲಿ ಔಟ್ ಆದರು. ಈ ಮೂಲಕ ಶುಭಮನ್ ಚಿಕ್ಕ ಇನಿಂಗ್ಸ್ ಕಟ್ಟಿದರೂ ಸಹ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು.

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ರನ್ ಕಲೆ ಹಾಕುವಲ್ಲಿ ವಿಫಲರಾಗಿರಬಹುದು, ಆದರೆ ಈ ಸರಣಿಯಲ್ಲಿ ಇವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಲೀಡ್ಸ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಇನ್ನು ಬರ್ಮಿಂಗ್‌ಹ್ಯಾಮ್‌ನ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಅಬ್ಬರಿಸಿದರು. ಈ ವೇಳೆ ಗಿಲ್ ಹಲವು ದಾಖಲೆ ಬರೆದಿದ್ದರು. ಲಾರ್ಡ್ಸ್‌ನಲ್ಲೂ ಗಿಲ್ ದಾಖಲೆ ಬರೆಯುವುದನ್ನು ಮುಂದುವರೆಸಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಪರ 2002ರಲ್ಲಿ ರಾಹುಲ್ ದ್ರಾವಿಡ್ 602 ರನ್ ಬಾರಿಸಿ ಅಬ್ಬರಿಸಿದರು. ಇಂಗ್ಲೆಂಡ್ ನೆಲದಲ್ಲಿ ಭಾರತದ ಪರ ಒಬ್ಬ ಬ್ಯಾಟರ್ ಸರಣಿಯಲ್ಲಿ ದಾಖಲಿಸಿದ ಕನಿಷ್ಠ ಮೊತ್ತ ಇದಾಗಿದೆ. ಈ ದಾಖಲೆಯನ್ನು ಈಗ ಶುಭಮನ್ ಗಿಲ್ ಮೀರಿ ನಿಂತರು. ಗಿಲ್ ಈ ಸರಣಿಯಲ್ಲಿ ಸದ್ಯ 607 ರನ್ ಕಲೆ ಹಾಕಿ ಮುನ್ನಡೆದಿದ್ದಾರೆ. ಇಂಗ್ಲೆಂಡ್‌ನಲ್ಲಿ ಗರಿಷ್ಠ ರನ್ ಕಲೆ ಹಾಕಿದ ಮೂರನೇ ಭಾರತೀಯ ಆಟಗಾರ ಎಂಬ ಕೀರ್ತಿ ವಿರಾಟ್ ಕೊಹ್ಲಿ ಅವರದ್ದಾಗಿದೆ. ವಿರಾಟ್ 2018ರಲ್ಲಿ ನಡೆದಿದ್ದ ಸರಣಿಯಲ್ಲಿ 593 ರನ್ ಸಿಡಿಸಿ ಭರವಸೆ ಮೂಡಿಸಿದ್ದರು.

ಈ ಸರಣಿಯಲ್ಲಿ ಇನ್ನು ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಈ ವೇಳೆ ಶುಭಮನ್ ಗಿಲ್ ನಾಲ್ಕು ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡಬಹುದು. ಈ ವೇಳೆ ಇವರು ಹೇಗೆ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆ, ಮತ್ತೆ ಯಾವೆಲ್ಲಾ ದಾಖಲೆಗಳನ್ನು ಅಳಿಸಿ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.