ಭಾರತ ವಿರುದ್ಧದ ಟಿ20 ಸರಣಿಗೆ ಐರ್ಲೆಂಡ್ ಸಿದ್ಧ: 14 ಆಟಗಾರರ ಸ್ಕ್ವಾಡ್ ಘೋಷಿಸಿದ ಕ್ರಿಕೆಟ್ ಐರ್ಲೆಂಡ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯ ಬಳಿಕ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಗಾಗಿ ಕ್ರಿಕೆಟ್ ಐರ್ಲೆಂಡ್ 14 ಸದಸ್ಯರ ಬಳಗವನ್ನು ಘೋಷಣೆ ಮಾಡಿದೆ. ಜೂನ್ 26ರಿಂದ ಆರಂಭವಾಗಿರುವ ಈ ಸರಣಿ ಮಲಹೈಡ್‌ನ 'ದಿ ವಿಲೇಜ್'ನಲ್ಲಿ ಆಯೋಜನೆಯಾಗಲಿದೆ. ಈ ಸರಣಿಗೆ ಇಬ್ಬರು ಹೊಸ ಆಟಗಾರರು ಅವಕಾಶ ಪಡೆದುಕೊಂಡಿದ್ದು ಚೊಚ್ಚಲ ಅಂತಾರಾಷ್ಟ್ರೀಯ ಸರಣಿಯಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಬ್ಯಾಟರ್ ಸ್ಟೀಫನ್ ಡೊಹೆನಿ ಮತ್ತು ವೇಗದ ಬೌಲರ್ ಕಾನರ್ ಓಲ್ಫರ್ಟ್ ಮೊದಲ ಬಾರಿಗೆ ಅಂತಾರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಪಡೆದ ಆಟಗಾರರಾಗಿದ್ದಾರೆ.
ಐರ್ಲೆಂಡ್‌ನಲ್ಲಿ ಸದ್ಯ ನಡೆಯುತ್ತಿರುವ ದೇಶೀಯ T20 ಟೂರ್ನಿಯಲ್ಲಿ ಡೊಹೆನಿ ಮತ್ತು ಓಲ್ಫರ್ಟ್ ಇಬ್ಬರೂ ಅಮೋಘ ಪ್ರದರ್ಶನ ನೀಡುತ್ತಿದ್ದು ಈ ಹಿನ್ನೆಲೆಯಲ್ಲಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್ ಆಗಿರುವ ಡೊಹೆನಿ 52.67ರ ಸರಾಸರಿಯಲ್ಲಿ 158 ರನ್ ಗಳಿಸಿದ್ದು, ಓಲ್ಫರ್ಟ್ ತಲಾ 19.17ರ ಸರಾಸರಿಯಲ್ಲಿ ಆರು ವಿಕೆಟ್ ಪಡೆದು ಮಿಂಚಿದ್ದಾರೆ.
ಪಾಲ್ ಸ್ಟಿರ್ಲಿಂಗ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೈರ್ ಮತ್ತು ಆಂಡಿ ಮ್ಯಾಕ್‌ಬ್ರೈನ್ ಅವರಂತಹ ಪ್ರಮುಖ ಆಟಗಾರರನ್ನು ಒಳಗೊಂಡಿರುವ ಐರ್ಲೆಂಡ್ ತಂಡವನ್ನು ಆಂಡ್ರ್ಯೂ ಬಾಲ್ಬಿರ್ನಿ ಮುನ್ನಡೆಸಲಿದ್ದಾರೆ. ಸ್ಟಿರ್ಲಿಂಗ್, ಬಾಲ್ಬಿರ್ನಿ ಮತ್ತು ಹ್ಯಾರಿ ಟೆಕ್ಟರ್ ಬ್ಯಾಟಿಂಗ್ ವಿಭಾಗದ ಪ್ರಮುಖ ಆಟಗಾರರಾಗಿದ್ದರೆ ಜೋಶುವಾ ಲಿಟಲ್, ಕ್ರೇಗ್ ಯಂಗ್ ಮತ್ತು ಅಡೇರ್ ಬೌಲಿಂಗ್ ವಿಭಾಗದ ಪ್ರಮುಖ ಹೆಸರುಗಳಾಗಿದೆ.
ಇನ್ನು ದಕ್ಷಿಣ ಆಫ್ರಿಕಾದ ಹೆನ್ರಿಚ್ ಮಲಾನ್ ಐರಿಶ್ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅಧಿಕಾರವನ್ನು ವಹಿಸಿಕೊಂಡಿದ್ದು ಭಾರತದ ವಿರುದ್ಧದ ಸರಣಿಯ ಮೂಲಕ ತಮ್ಮ ಜವಾಬ್ಧಾರಿಯನ್ನು ಆರಂಭಿಸಲಿದ್ದಾರೆ. ಇನ್ನು ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಗ್ರೂಪ್ ಹಂತಕ್ಕೆ ಐರ್ಲೆಂಡ್ ತಂಡ ಪ್ರವೇಶ ಪಡೆದುಕೊಂಡಿದೆ.
ಭಾರತ ಕ್ರಿಕೆಟ್ ತಂಡ 2018 ಕೊನೆಯ ಬಾರಿಗೆ ಐರ್ಲೆಂಡ್‌ಗೆ ತೆರಳಿ ಟಿ20 ಸರಣಿಯನ್ನು ಆಡಿತ್ತು. ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಆತಿಥೇಯ ತಂಡಕ್ಕೆ ವೈಟ್‌ವಾಶ್ ಮಾಡುವ ಮೂಲಕ ಸರಣಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಮುಂಬರುವ ಸರಣಿಯಲ್ಲಿನ ಎರಡೂ ಪಂದ್ಯಗಳನ್ನು ಮಲಾಹೈಡ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಆಡಲಾಗುತ್ತದೆ.
ಐರ್ಲೆಂಡ್ ಸ್ಕ್ವಾಡ್ ಹೀಗಿದೆ: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಜೋಶ್ ಲಿಟಲ್, ಆಂಡ್ರ್ಯೂ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಕ್ರೇಗ್ ಯಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications