ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಟೀಮ್ ಇಂಡಿಯಾದ ಪ್ರದರ್ಶನ ಗಮನಸೆಳೆದಿತ್ತು. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಭಾರತೀಯ ದಾಂಡಿಗರು ಅದ್ಬುತ ಪ್ರದರ್ಶನ ನೀಡಿದ್ದರೆ ನಂತರ ಬೌಲಿಂಗ್‌ನಲ್ಲಿಯೂ ಮೇಲುಗೈ ಸಾಧಿಸಿದ್ದು ಪಂದ್ಯದಲ್ಲಿ 33 ರನ್‌ಗಳ ಅಂತರದ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ ಹಾಗೂ ರಿಂಕು ಸಿಂಗ್ ಬ್ಯಾಟಿಂಗ್‌ನಲ್ಲಿ ಭಾರತಕ್ಕೆ ಮೇಲುಗೈ ಒದಗಿಸಿದ್ದರೆ ಬೌಲಿಂಗ್‌ನಲ್ಲಿ ನಾಯಕ ಬೂಮ್ರಾ, ಪ್ರಸಿದ್ಧ್ ಕೃಷ್ಣ ಹಾಗೂ ರವಿ ಬಿಷ್ಣೋಯ್ ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು.

ಆದರೆ ಟೀಮ್ ಇಂಡಿಯಾ ಒಟ್ಟಾರೆಯಾಗಿ ಉತ್ತಮ ಪ್ರದರ್ಶನ ನೀಡಿದ ಈ ಪಂದ್ಯದಲ್ಲಿಯೂ ಕೆಲ ಆಟಗಾರರು ಸಂಪೂರ್ಣವಾಗಿ ವೈಫಲ್ಯ ಕಂಡಿದ್ದಾರೆ. ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೊ ಫ್ಲಾಪ್ ಎನಿಸಿಕೊಂಡ ಮೂವರು ಭಾರತೀಯ ಆಟಗಾರರು ಯಾರು ಎನ್ನುವುದನ್ನು ಬನ್ನಿ ನೋಡೋಣ.
ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್
ಐರ್ಲೆಡ್ ಪ್ರವಾಸದಲ್ಲಿ ಏಕೈಕ ಸ್ಪಿನ್ ಆಲ್‌ರೌಂಡರ್ ಆಗಿರುವ ವಾಶಿಂಗ್ಟನ್ ಸುಂದರ್ ಈ ಸರಣಿಯಲ್ಲಿ ಉತ್ತಮ ಪ್ರದರ್ಶಣ ನೀಡುವ ಅವಕಾಶ ಹೊಂದಿದ್ದರು ಕೂಡ ವಿಫಳವಾಗಿದ್ದಾರೆ. ಎರಡು ಪಂದ್ಯದಲ್ಲಿಯೂ ಸುಂದರ್ ಅವರಿಂದ ನಿರೀಕ್ಷಿತ ಮಟ್ಟದ ಬೌಲಿಂಗ್ ಪ್ರದರ್ಶನ ಬಾರಲಿಲ್ಲ. ಡಬ್ಲಿನ್ ವಾತಾವರಣ ಸುಂದರ ಬೌಲಿಂಗ್‌ಗ ಹೆಚ್ಚು ಪೂರಕವಾಗಿಲ್ಲದಿದ್ದರೂ ಅವರು ಹೆಚ್ಚಿನ ಪ್ರಮಾಣದ ಆತ್ಮವಿಶ್ವಾಸದಿಂದ ಕೂಡ ಕಾಣಿಸಲಿಲ್ಲ ಎನ್ನುವುದು ನಿಜ.
ಶಿವಂ ದುಬೆ
ಈ ಸರಣಿಯಲ್ಲಿ ಮತ್ತೊಮ್ಮೆ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡು ಮಿಂಚುವ ವಿಶ್ವಾಸ ಮೂಡಿಸಿದ್ದ ಆಟಗಾರ ಶಿವಂ ದುಬೆ. ಕಳೆದ ಐಪಿಎಲ್‌ನಲ್ಲಿ ದುಬೆ ನೀಡಿದ್ದ ಪ್ರದರ್ಶನ ಎಲ್ಲರ ಗಮನಸೆಳೆದಿತ್ತು. ಬೌಲಿಂಗ್ ಹಾಘೂ ಬ್ಯಾಟಿಂಗ್ ಎರಡು ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಐರ್ಲಂಡ್ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ದುಬೆ ಬ್ಯಾಟಿಂಗ್‌ನಲ್ಲಿ ಒಂದು ಹಂತದಲ್ಲಿ ಗಮನಸೆಳೆಯುವ ಪ್ರದರ್ಶಣ ನೀಡುವಲ್ಲಿ ಯಶಸ್ವಿಯಾಗಿದ್ದರು. ಎರಡು ಸಿಕ್ಸರ್ ಸೇರಿದಂತೆ 16ಎಸೆತಗಳಲ್ಲಿ 22 ರನ್‌ಗಳನ್ನು ಬಾರಿಸಿದ್ದರು. ಆದರೆ ಬೌಲಿಂಗ್‌ನಲ್ಲಿ ದುಬೆ ವೈಫಲ್ಯ ಕಂಡಿದ್ದಾರೆ. ಎರಡು ಓವರ್‌ಗಳ ಬೌಲಿಂಗ್‌ನಲ್ಲಿ ದುಬೆ ನೀಡಿದ್ದು 18 ರನ್‌ಗಳನ್ನು. ಅಲ್ಲದೆ ಯಾವುದೇ ವಿಕೆಟ್ ಕೂಎಡ ಪಡೆಯಲು ಸಾಧ್ಯವಾಗಲಿಲ್ಲ.
ತಿಲಕ್ ವರ್ಮಾ
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ನೀಡಿದ ಪ್ರದರ್ಶನದ ಕಾರಣದಿಂದಾಗಿ ಟೀಮ್ ಇಂಡಿಯಾ ಏಷ್ಯಾಕಪ್ ಹಾಗೂ ವಿಶ್ವಕಪ್ ತಂಡದಲ್ಲಿ ತಿಲಕ್ ವರ್ಮಾ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ ಎಂದೆಲ್ಲಾ ಗಾಳಿಸುದ್ದಿಗಳು ಹರದಾಡುತ್ತಿದೆ. ಆದರೆ ತಿಲಕ್ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ತೀವ್ರ ನಿರಾಸೆ ಅನುಭವಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಕೇವಲ ಎರಡು ಎಸೆತಗಳನ್ನು ಎದುರಿಸಿದ ಅವರು 1 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಇದಕ್ಕೂ ಮುನ್ನ ಸರಣಿಯ ಮೊದಲ ಪಂದ್ಯದಲ್ಲಿಯೂ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಳ್ಳುವ ಮುನ್ನ ತಿಲಕ್ ವರ್ಮಾ ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡಿದ್ದರು.