
ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಆರಂಭದಲ್ಲೇ ಭಾರೀ ಹಿನ್ನಡೆಯಾಗಿದ್ದು ಅಭಿಮಾನಿಗಳಿಗೆ ನಿರಾಸೆಯಾಗಿದೆ. ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಿದೆ.
ಭಾರತೀಯ ಕಾಲಮಾನ 11:30ರ ವೇಳೆಗೆ ಟಾಸ್ ಪ್ರಕ್ರಿಯೆ ನಡೆಯಬೇಕಾಗಿತ್ತು. ಈ ಅವಧಿಯಲ್ಲಿ ಭಾರೀ ಮಳೆ ಸುರಿದ ಪರಿಣಾಮವಾಗಿ ಟಾಸ್ ಕೂಡ ನಡೆಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಹವಾಮಾನದಲ್ಲಿ ಸುಧಾರಣೆಯಾಗದಿರುವ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಇತ್ತೀಚೆಗಷ್ಟೇ ಅಂತ್ಯವಾದ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿ ಈ ಹಂತದಲ್ಲಿ ಸೋಲು ಅನುಭವಿಸಿ ನಿರ್ಗಮಿಸಿದ್ದವು. ನ್ಯೂಜಿಲೆಂಡ್ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿ ಹೊರಬಿದ್ದರೆ ಭಾರತ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು. ಇದೀಗ ಈ ಎರಡು ತಂಡಗಳು ಕೂಡ ದ್ವಿಪಕ್ಷೀಯ ಸರಣಿಯಲ್ಲಿ ಮುಖಾಮುಖಿಯಾಗುತ್ತಿದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು. ಆದರೆ ಮೊದಲ ಪಂದ್ಯವೇ ಮಳೆಗೆ ಆಹುತಿಯಾಗಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಟಿ20 ವಿಶ್ವಕಪ್‌ನಲ್ಲಿ ಅನುಭವಿಸಿದ ಸೋಲಿನ ನಿರಾಸೆಯಲ್ಲಿರುವಾಗಲೇ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮೂರು ಪಂದ್ಯಗಳ ಟಿ20 ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗುತ್ತಿದೆ. ಟಿ20 ವಿಶ್ವಕಪ್‌ನ ಹಿನ್ನಡೆ ಮರೆತು ಇದೀಗ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ಮೇಲೆ ಚಿತ್ತ ನೆಟ್ಟಿದೆ.
ಇನ್ನು ಈ ಸರಣಿಯಲ್ಲಿ ಟೀಮ್ ಇಂಡಿಯಾದ ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸುವ ಹೊಣೆ ಹೊತ್ತುಕೊಂಡಿದ್ದು ರಿಷಭ್ ಪಂತ್ ಉಪನಾಯಕನಾಗಿ ತಂಡದಲ್ಲಿದ್ದಾರೆ. ಮತ್ತೊಂದೆಡೆ ನ್ಯೂಜಿಲೆಂಡ್ ತಂಡ ಈ ಸರಣಿಗೆ ಬಹುತೇಕ ಸಂಪೂರ್ಣ ಸಾಮರ್ಥ್ಯದೊಂದಿಗೆ ಕಣಕ್ಕಿಳಿದಿದ್ದರೂ ಅನುಭವಿ ವೇಗಿ ಟ್ರೆಂಟ್ ಬೋಲ್ಟ್ ಈ ಸರಣಿಯಿಂದ ಹೊರಗುಳಿದಿದ್ದಾರೆ.
ಇನ್ನು ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯ ಮೌಂಟ್ ಮೌಂಗುನ್ಯೂನಲ್ಲಿ ಭಾನುವಾರ ನಡೆಯಲಿದ್ದು ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ. ಈ ಸರಣಿಯ ಅಂತಿಮ ಪಂದ್ಯ ಮಂಗಳವಾರ ನಡೆಯಲಿದ್ದು ನೇಪಿಯರ್‌ನ ಮೆಕ್‌ಲೀನ್ ಪಾರ್ಕ್‌ನಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.
ನ್ಯೂಜಿಲೆಂಡ್ ಸ್ಕ್ವಾಡ್ ಹೀಗಿದೆ: ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಆಡಮ್ ಮಿಲ್ನೆ, ಲಾಕ್ ಫರ್ಗುಸನ್, ಬ್ಲೇರ್ ಟಿಕ್ನರ್, ಮೈಕೆಲ್ ಬ್ರೇಸ್ವೆಲ್, ಇಶ್ ಸೋಧಿ
ಟೀಮ್ ಇಂಡಿಯಾ ಸ್ಕ್ವಾಡ್ ಹೀಗಿದೆ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಶುಭಮನ್ ಗಿಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್, ಹರ್ಷಲ್ ಪಟೇಲ್