ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟವಾಗಿದ್ದ ನ್ಯೂಜಿಲೆಂಡ್ ತಂಡದಲ್ಲಿ ಪ್ರಮುಖ ಬದಲಾವಣೆ

ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ಯಶಸ್ವಿಯಾಗಿ ಫೈನಲ್ ಹಂತವನ್ನು ತಲುಪಿದೆ. ನವೆಂಬರ್ 14ರ ಭಾನುವಾರದಂದು ಸಂಜೆ 7.30ಕ್ಕೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಆ್ಯರನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವುದರ ಮೂಲಕ ತನ್ನ ಚೊಚ್ಚಲ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯುವತ್ತ ನ್ಯೂಜಿಲೆಂಡ್ ಚಿತ್ತ ನೆಟ್ಟಿದೆ.
ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ನ್ಯೂಜಿಲೆಂಡ್ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು 3 ಟಿ ಟ್ವೆಂಟಿ ಪಂದ್ಯಗಳು ಮತ್ತು 2 ಟೆಸ್ಟ್ ಪಂದ್ಯಗಳ ಸರಣಿಗಳಲ್ಲಿ ಸೆಣಸಾಟ ನಡೆಸಲಿದೆ. ಹೌದು, ನವೆಂಬರ್ 17ರಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಈ ಸರಣಿಗಳು ಆರಂಭವಾಗಲಿವೆ. ಮೊದಲಿಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯಲಿವೆ.
ಹೀಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲೆಂಡ್ ತಂಡವನ್ನು ಇತ್ತೀಚೆಗಷ್ಟೇ ಪ್ರಕಟ ಮಾಡಲಾಗಿತ್ತು. ಹೀಗೆ ಪ್ರಕಟವಾದ ನ್ಯೂಜಿಲೆಂಡ್ ತಂಡದಲ್ಲಿ ಪ್ರಮುಖ ಆಟಗಾರನಾದ ಡಿವೊನ್ ಕಾನ್ವೆ ಕೂಡ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಇದೇ ಡಿವೋನ್ ಕಾನ್ವೆ ಔಟ್ ಆದ ಹತಾಶೆಯಲ್ಲಿ ತಮ್ಮ ಕೈಗೆ ಪೆಟ್ಟು ಮಾಡಿಕೊಂಡಿದ್ದರು. ಹೌದು, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರನ್ ಚೇಸ್ ಮಾಡುವ ವೇಳೆ ನಿರ್ಣಾಯಕ ಹಂತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದ ಡಿವೋನ್ ಕಾನ್ವೆ ಲಿಯಾಮ್ ಲಿವಿಂಗ್ ಸ್ಟನ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿದ್ದರು.
ಈ ಪಂದ್ಯದಲ್ಲಿ 38 ಎಸೆತಗಳಿಗೆ 46 ರನ್ ಬಾರಿಸಿದ್ದ ಡಿವೋನ್ ಕಾನ್ವೇ ಔಟ್ ಆದ ಬಳಿಕ ಬೇಸರದಿಂದ ತಮ್ಮ ಬ್ಯಾಟ್‌ಗೆ ಕೈನಿಂದ ಜೋರಾಗಿ ಗುದ್ದಿದ್ದರು. ಈ ಕಾರಣದಿಂದ ಡಿವೋನ್ ಕಾನ್ವೆ ಬಲಗೈಗೆ ತೀವ್ರವಾದ ಗಾಯವಾಗಿತ್ತು. ಹೀಗಾಗಿ ಡಿವೋನ್ ಕಾನ್ವೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಮತ್ತು ಭಾರತ ಪ್ರವಾಸದಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಯಿತು. ತಂಡದ ಪ್ರಮುಖ ಆಟಗಾರನಾಗಿದ್ದ ಡಿವೋನ್ ಕಾನ್ವೆ ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯ ಮತ್ತು ಭಾರತ ವಿರುದ್ಧದ ಸರಣಿಗಳಿಗೆ ಅಲಭ್ಯರಾಗಿರುವ ವಿಷಯವನ್ನು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಅಧಿಕೃತವಾಗಿ ಘೋಷಿಸಿತ್ತು.
ಇದೀಗ ಮತ್ತೊಂದು ಪ್ರಕಟಣೆಯನ್ನು ಹೊರಡಿಸಿರುವ ನ್ಯೂಜಿಲೆಂಡ್ ಕ್ರಿಕೆಟ್ ಗಾಯದ ಸಮಸ್ಯೆಗೊಳಗಾಗಿ ಭಾರತ ಪ್ರವಾಸದಿಂದ ಹೊರಗುಳಿದಿರುವ ಡಿವೋನ್ ಕಾನ್ವೆ ಬದಲಾಗಿ ಡೆರಿಲ್ ಮಿಚೆಲ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಭಾರತ ವಿರುದ್ಧದ ಸರಣಿಗಳಿಗೆ ಡಿವೋನ್ ಕಾನ್ವೆ ಸ್ಥಾನಕ್ಕೆ ಆಯ್ಕೆಯಾಗಿರುವ ಡೆರಿಲ್ ಮಿಚೆಲ್ ಇತ್ತೀಚೆಗಷ್ಟೇ ನಡೆದ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 47 ಎಸೆತಗಳಲ್ಲಿ ಅಜೇಯ 72 ರನ್ ಬಾರಿಸುವುದರ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೀಗೆ ಡಿವೋನ್ ಕಾನ್ವೆ ಅಲಭ್ಯತೆಯಿಂದ ಕಂಗೆಟ್ಟಿದ್ದ ನ್ಯೂಜಿಲೆಂಡ್ ತಂಡಕ್ಕೆ ಡೆರಿಲ್ ಮಿಚೆಲ್ ಸೇರ್ಪಡೆ ಸಮಾಧಾನವನ್ನು ತಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications