ಭಾರತ vs ನ್ಯೂಜಿಲೆಂಡ್: ಟಿ20 ಸರಣಿ ವೈಟ್‌ವಾಷ್ ಮಾಡಿ ಸೇಡು ತೀರಿಸಿಕೊಂಡ ಟೀಮ್ ಇಂಡಿಯಾ

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ನವೆಂಬರ್ 21 ) ನಡೆದ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 73 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ಭಾರತ ಸಂಪೂರ್ಣವಾಗಿ ಗೆಲ್ಲುವುದರ ಮೂಲಕ ವೈಟ್ ವಾಷ್ ಮಾಡಿ ಟಿ ಟ್ವೆಂಟಿ ವಿಶ್ವಕಪ್ ಸೋಲಿನ ಸೇಡನ್ನು ನ್ಯೂಜಿಲೆಂಡ್ ವಿರುದ್ಧ ತೀರಿಸಿಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು. ಹೀಗೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಉತ್ತಮ ಆರಂಭವನ್ನು ಮಾಡಿದರು. ರೋಹಿತ್ ಶರ್ಮಾ 31 ಎಸೆತಗಳಲ್ಲಿ 56 ರನ್ ಕಲೆಹಾಕಿದರೆ ಇಶಾನ್ ಕಿಶನ್ 21 ಎಸೆತಗಳಲ್ಲಿ 29 ರನ್ ಕಲೆ ಹಾಕಿದರು. ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ 4 ಎಸೆತಗಳಲ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರೆ, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಶ್ರೇಯಸ್ ಅಯ್ಯರ್ 25 ರನ್ ಗಳಿಸಿ ಔಟ್ ಆದರೆ ವೆಂಕಟೇಶ ಅಯ್ಯರ್ 20 ರನ್ ಕಲೆ ಹಾಕಿದರು. ಇನ್ನುಳಿದಂತೆ ಹರ್ಷಲ್ ಪಟೇಲ್ 18 ರನ್, ಅಕ್ಷರ್ ಪಟೇಲ್ ಅಜೇಯ 2 ರನ್ ಮತ್ತು ಕೊನೆಯಲ್ಲಿ ಹೊಡಿ ಬಡಿ ಆಟವಾಡಿದ ದೀಪಕ್ ಚಹರ್ 8 ಎಸೆತಗಳಲ್ಲಿ ಅಜೇಯ 21 ರನ್ ಚಚ್ಚಿದರು.
ಇನ್ನು ನ್ಯೂಜಿಲೆಂಡ್ ತಂಡದ ಪರ ಮಿಚೆಲ್ ಸ್ಯಾಂಟ್ನರ್ 4 ಓವರ್ ಬೌಲಿಂಗ್ ಮಾಡಿ 27 ರನ್ ನೀಡಿ 3 ವಿಕೆಟ್ ಪಡೆಯುವುದರ ಮೂಲಕ ಮಿಂಚಿದರೆ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯುಸನ್ ಮತ್ತು ಇಶ್ ಸೋಧಿ ತಲಾ 1 ವಿಕೆಟ್ ಪಡೆದರು.
ಭಾರತದ 185 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಳಿದ ಮಾರ್ಟಿನ್ ಗಪ್ಟಿಲ್ 36 ಎಸೆತಗಳಲ್ಲಿ 51 ರನ್ ಗಳಿಸಿ ಉತ್ತಮ ಆಟವನ್ನಾಡಿದ್ದು ಬಿಟ್ಟರೆ ತಂಡದ ಉಳಿದ ಯಾವುದೇ ಆಟಗಾರನೂ ಸಹ ಗುರಿಯನ್ನು ಬೆನ್ನತ್ತುವಲ್ಲಿ ಶ್ರಮವಹಿಸಿ ಬ್ಯಾಟ್ ಬೀಸಲೇ ಇಲ್ಲ. ಉಳಿದಂತೆ ಡೇರಿಲ್ ಮಿಚೆಲ್ 5, ಮಾರ್ಕ್ ಚಾಂಪ್ ಮನ್ 0, ಗ್ಲೆನ್ ಫಿಲಿಪ್ಸ್ 0, ಟಿಮ್ ಸೈಫರ್ಟ್ 17, ಜೇಮ್ಸ್ ನೀಶಮ್ 3, ಮಿಚೆಲ್ ಸ್ಯಾಂಟ್ನರ್ 2, ಆ್ಯಡಂ ಮಿಲ್ನೆ 7, ಇಶ್ ಸೋಧಿ 9, ಲಾಕಿ ಫರ್ಗ್ಯೂಸನ್ 14 ಮತ್ತು ಟ್ರೆಂಟ್ ಬೌಲ್ಟ್ ಅಜೇಯ 2 ರನ್ ಕಲೆಹಾಕಿದರು. ಈ ಮೂಲಕ ನ್ಯೂಜಿಲೆಂಡ್ 17.2 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲ್ ಔಟ್ ಆಯಿತು. ಹೀಗಾಗಿ ಭಾರತ 73 ರನ್‌ಗಳ ಜಯ ಸಾಧಿಸುವುದರ ಮೂಲಕ 3 ಪಂದ್ಯಗಳ ಟಿ 20 ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ವೈಟ್ ವಾಷ್ ಸಾಧನೆ ಮಾಡಿದೆ.
ಭಾರತದ ಪರ ಅಕ್ಷರ್ ಪಟೇಲ್ 3 ವಿಕೆಟ್, ಹರ್ಷಲ್ ಪಟೇಲ್ 2 ಹಾಗೂ ದೀಪಕ್ ಚಹರ್, ಯುಜವೇದ್ರ ಚಹಲ್ ಮತ್ತು ವೆಂಕಟೇಶ್ ಐಯ್ಯರ್ ತಲಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications