
ಆಕ್ಲೆಂಡ್, ಜನವರಿ 23: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಜಯಿಸಿರುವ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನಾಡಲಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಎದುರಿಸಲಿರುವ ಸವಾಲಿನ ಬಗ್ಗೆ ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ಕೋಚ್ ಮೈಕ್ ಹೆಸನ್ ಮಾತನಾಡಿದ್ದಾರೆ.
ಮುಂಬರಲಿರುವ ಟಿ20 ಸರಣಿಯಲ್ಲಿ ಕೊಹ್ಲಿಗೆ ನ್ಯೂಜಿಲೆಂಡ್ ವೇಗಿಗಳನ್ನು ಎದುರಿಸಲು ಕಷ್ಟವಾಗಲಿದೆ ಎಂದು ಮೈಕ್ ಹೆಸನ್ ಅಭಿಪ್ರಾಯಿಸಿದ್ದಾರೆ. ಕಿವೀಸ್ ವೇಗಗಳ ಮೊದಲ 10-20 ಎಸೆತಗಳನ್ನು ವಿರಾಟ್ ಹೇಗೆ ಆಡಲಿದ್ದಾರೆ ಎಂದು ನೋಡಲು ತಾನು ಕಾತರನಾಗಿರುವುದಾಗಿಯೂ ಮೈಕ್ ಹೇಳಿಕೊಂಡಿದ್ದಾರೆ.
ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿರುವ ಭಾರತ, ಅಲ್ಲಿ 5 ಪಂದ್ಯಗಳ ಟಿ20 ಸರಣಿ, 3 ಪಂದ್ಯಗಳ ಏಕದಿನ ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಈ ಪ್ರವಾಸ ಸರಣಿಯ ಪಂದ್ಯಗಳು ಜನವರಿ 24ರಿಂದ ಟಿ20 ಪಂದ್ಯಗಳ ಮೂಲಕ ಆರಂಭಗೊಳ್ಳಲಿದೆ. ಮೊದಲ ಟಿ20 12:20 pmಗೆ ಶುರುವಾಗಲಿದೆ.
ನ್ಯೂಜಿಲೆಂಡ್ ವೇಗಿಗಳ ಮೊದಲ 10-20 ಎಸೆತಗಳನ್ನು ಕೊಹ್ಲಿ ಹೇಗೆ ನಿಭಾಯಿಸಲಿದ್ದಾರೆ ಎಂದು ನೋಡಲು ನಾನು ಆಸಕ್ತನಾಗಿದ್ದೇನೆ. ಕೊಹ್ಲಿ ಒಂದುವೇಳೆ ಆರಂಭಿಕ ಎಸೆತಗಳನ್ನು ಯಶಸ್ವಿಯಾಗಿ ನಿಭಾಯಿಸಿ ತಯಾರಾದರೆ, ಆಮೇಲೆ ಅವರ ರನ್ ಹಸಿವನ್ನು ತಡೆದು ನಿಲ್ಲಿಸಲು ಕೇನ್ ವಿಲಿಯಮ್ಸ್ ಬಳಗಕ್ಕೆ ಕಷ್ಟವಾಗಲಿದೆ,' ಎಂದು ಹೆಸನ್ ಹೇಳಿದ್ದಾರೆ.
ಮಾತು ಮುಂದುವರೆಸಿದ ಮೈಕ್, 'ನ್ಯೂಜಿಲಂಡ್‌ನ ಇತ್ತೀಚಿನ ದಾಖಲೆಗಳನ್ನು ಗಮನಿಸಿದರೆ ಅವರನ್ನು ಸೋಲಿಸೋದು ತುಂಬಾ ಕಷ್ಟ. ಹಾಗಂತ ಭಾರತದಲ್ಲೂ 2014ರಲ್ಲಿದ್ದ ವೇಗಿಗಳ ಅಪಾಯಕಾರಿ ಬೌಲಿಂಗ್ ಬಣವಿದೆ. ಹೀಗಾಗಿ ಇತ್ತಂಡಗಳ ಸರಣಿ ಜಿದ್ದಾಜಿದ್ದಿಯದ್ದೆನಿಸಲಿದೆ. ಟ್ರೆಂಟ್ ಬೌಲ್ಟ್ ಮತ್ತು ರೋಹಿತ್ ಶರ್ಮಾ ಮುಖಾಮುಖಿಯೂ ಕುತೂಹಲಕಾರಿಯಾಗಿರಲಿದೆ,' ಎಂದರು.