ಬುಧವಾರ, ನವೆಂಬರ್ 15ರಂದು ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ ನಿರ್ಣಾಯಕ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಆತಿಥೇಯ ಭಾರತ ತಂಡ ಮುಖಾಮುಖಿಯಾಗುತ್ತಿದೆ.
2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಲೀಗ ಹಂತದಲ್ಲಿ ರೋಹಿತ್ ಶರ್ಮಾ ಬಳಗ ಭರ್ಜರಿ ಪ್ರದರ್ಶನ ನೀಡಿದ್ದು, ಇದರಿಂದಾಗಿಯೇ ಟೀಮ್ ಇಂಡಿಯಾ ಎಲ್ಲಾ ಒಂಬತ್ತು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮಿಫೈನಲ್ ತಲುಪಿದೆ.

ಇನ್ನು 2023ರ ವಿಶ್ವಕಪ್‌ನಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಟೀಮ್ ಇಂಡಿಯಾ ಚೇಸ್ ಮಾಸ್ಟರ್ ಇದುವರೆಗೆ ಆಡಿದ ಒಂಬತ್ತು ಪಂದ್ಯಗಳಲ್ಲಿ 99ರ ಸರಾಸರಿ ಮತ್ತು 88.52ರ ಸ್ಟ್ರೈಕ್ ರೇಟ್‌ನಲ್ಲಿ 594 ರನ್ ಗಳಿಸಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬರುವ ವಿರಾಟ್ ಕೊಹ್ಲಿ ಈಗಾಗಲೇ ಎರಡು ಶತಕ ಮತ್ತು ಐದು ಅರ್ಧಶತಕಗಳನ್ನು ಬಾರಿಸಿದ್ದು, ಅತ್ಯುತ್ತಮ ಸ್ಕೋರ್ ಅಜೇಯ 103 ರನ್ ಆಗಿದೆ.
2023ರ ವಿಶ್ವಕಪ್‌ನ ಕೊನೆಯ ಐದು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 83.75ರ ಸರಾಸರಿಯಲ್ಲಿ ಮತ್ತು 87.24ರ ಸ್ಟ್ರೈಕ್ ರೇಟ್‌ನಲ್ಲಿ 335 ರನ್ ಬಾರಿಸಿದ್ದಾರೆ. ಬುಧವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎಲ್ಲರ ಕಣ್ಣು ಕುಕ್ಕುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಮೂರು ದೊಡ್ಡ ದಾಖಲೆಗಳಿಗಾಗಿ ಭಾರತದ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರನ್ನು ಮೀರಿಸಬಹುದು ಎಂಬುದು ವಿರಾಟ್ ಕೊಹ್ಲಿಯ ಸದ್ಯದ ಪ್ರದರ್ಶನಕ್ಕೆ ಹೆಚ್ಚಿನ ಆಸಕ್ತಿಯನ್ನು ನೀಡುತ್ತದೆ.
ಸದ್ಯ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಎರಡು ಶತಕಗಳನ್ನು ಗಳಿಸಿದ ನಂತರ, ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನೊಂದು ಶತಕ ಗಳಿಸಿದರೆ, ವಿರಾಟ್ ಕೊಹ್ಲಿ 50 ಏಕದಿನ ಶತಕ ಸಿಡಿಸಿದ ಸಾರ್ವಕಾಲಿಕ ಮೊದಲ ಬ್ಯಾಟರ್ ಆಗಲಿದ್ದಾರೆ.
ಕುತೂಹಲಕಾರಿಯಾಗಿ, ಐಸಿಸಿ ಏಕದಿನ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. 2003ರ ಆವೃತ್ತಿಯಲ್ಲಿ ಸಚಿನ್ 673 ರನ್ ಗಳಿಸಿದ್ದರು. ಇಂದಿಗೂ ಅದು ಸಾರ್ವಕಾಲಿಕ ದಾಖಲೆಯಾಗಿ ಉಳಿದಿದೆ.
ಪ್ರಸಕ್ತ ವಿಶ್ವಕಪ್‌ನಲ್ಲಿ 594 ರನ್ ಗಳಿಸಿರುವ ವಿರಾಟ್ ಕೊಹ್ಲಿ, ಆ ದಾಖಲೆಯನ್ನು ಮುರಿಯಲು ಕೇವಲ ಒಂದು ಉತ್ತಮ ಪ್ರದರ್ಶನದ ದೂರದಲ್ಲಿದ್ದಾರೆ.
ಕಳೆದ ವಾರ ನೆದರ್ಲ್ಯಾಂಡ್ಸ್ ವಿರುದ್ಧ 51 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್ ಗಳಿಸಿದ್ದ ಸಚಿನ್ ತೆಂಡೂಲ್ಕರ್ ಮತ್ತು ಶಕೀಬ್ ಅಲ್ ಹಸನ್ ಅವರ ಜಂಟಿ ದಾಖಲೆಯನ್ನು ಸರಿಗಟ್ಟಿದ್ದರು.
ವಿರಾಟ್ ಕೊಹ್ಲಿ ಅವರು ಮತ್ತೊಂದು ಐವತ್ತು ಪ್ಲಸ್ ಸ್ಕೋರ್ ದಾಖಲಿಸುವಲ್ಲಿ ಯಶಸ್ವಿಯಾದರೆ, ಈ ಜೋಡಿಯನ್ನು ಹಿಂದಿಕ್ಕುವ ಅವಕಾಶವನ್ನು ಹೊಂದಿದ್ದಾರೆ. ಇದು ಸದ್ಯ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಎರಡು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ 7 ಬಾರಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್ ಗಳಿಸಿದ್ದಾರೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ. ಕೆಲವು ವೈಯಕ್ತಿಕ ಮೈಲಿಗಲ್ಲುಗಳು ಸ್ಥಾಪಿಸಲು ತುದಿಗಾಲಲ್ಲಿ ನಿಂತಿದ್ದರೂ, ಸ್ಟಾರ್ ಬ್ಯಾಟರ್ ಪರಿಣಾಮಕಾರಿ ಪ್ರದರ್ಶನವನ್ನು ನೀಡಿ ತಮ್ಮ ತಂಡವನ್ನು ಫೈನಲ್‌ಗೆ ಕರೆದೊಯ್ಯಲು ಪ್ರಯತ್ನಿಸಲಿದ್ದಾರೆ.