
ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧ ಸೋಲುವುದರ ಮೂಲಕ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ರನ್ನರ್ ಅಪ್ ಆಗಿ ಟೂರ್ನಿಯಿಂದ ಹೊರ ಹೊಮ್ಮಿತು. ಹೀಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆದ ನಂತರ ಭಾರತ ಪ್ರವಾಸವನ್ನು ಕೈಗೊಂಡಿರುವ ನ್ಯೂಜಿಲೆಂಡ್ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಇತ್ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ಈಗಾಗಲೇ ಮುಗಿದಿದ್ದು ಎಲ್ಲ 3 ಪಂದ್ಯಗಳನ್ನು ಗೆಲ್ಲುವ ಮೂಲಕ ನ್ಯೂಜಿಲೆಂಡ್ ವಿರುದ್ಧ ಭಾರತ ವೈಟ್ ವಾಶ್ ಸಾಧನೆ ಮಾಡಿದೆ.
ಹೌದು, ಭಾರತ ಪ್ರವಾಸವನ್ನು ಕೈಗೊಂಡಿರುವ ನ್ಯೂಜಿಲೆಂಡ್ ತಂಡ ಟೀಮ್ ಇಂಡಿಯಾ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋಲುವುದರ ಮೂಲಕ ವೈಟ್ ವಾಷ್ ಅವಮಾನಕ್ಕೆ ಈಡಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನವೆಂಬರ್ 17ರಂದು ಜೈಪುರದಲ್ಲಿ ನಡೆದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್‍ಗಳ ಗೆಲುವು ದಾಖಲಿಸುವುದರ ಮೂಲಕ ಟಿ ಟ್ವೆಂಟಿ ಸರಣಿಯಲ್ಲಿ ಶುಭಾರಂಭವನ್ನು ಮಾಡಿತು. ನಂತರ ನವೆಂಬರ್ 19ರಂದು ರಾಂಚಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ 7 ವಿಕೆಟ್‍ಗಳ ಜಯವನ್ನು ಸಾಧಿಸುವ ಮೂಲಕ ಸತತ ಎರಡನೇ ಗೆಲುವು ಪಡೆದುಕೊಂಡಿತು. ಹಾಗೂ ಅಂತಿಮವಾಗಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 73 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿತು. ಹೀಗೆ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ ಭಾರತ ವೈಟ್ ವಾಶ್ ಸಾಧನೆ ಮಾಡಿ ಇದೀಗ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.
ನವೆಂಬರ್ 25ರಂದು ಕಾನ್ಪುರದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು ಈಗಾಗಲೇ ಇತ್ತಂಡಗಳ ಆಟಗಾರರು ಅಭ್ಯಾಸಗಳನ್ನು ಆರಂಭಿಸಿದ್ದಾರೆ. ಆದರೆ ಈ ಪಂದ್ಯದಿಂದ ಭಾರತದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ಶಾರ್ದೂಲ್ ಠಾಕೂರ್ ವಿಶ್ರಾಂತಿಗಾಗಿ ಹೊರಗುಳಿದಿದ್ದಾರೆ. ಹೀಗಾಗಿ ಈ ಆಟಗಾರರ ಸ್ಥಾನವನ್ನು ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಯಾರು ತುಂಬಲಿದ್ದಾರೆ ಎಂಬ ಪ್ರಶ್ನೆ ಇದೀಗ ಎದ್ದಿದೆ.
ಪಂದ್ಯದಲ್ಲಿ ಆರಂಭಿಕ ಆಟಗಾರರಾಗಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಕಣಕ್ಕಿಳಿಯಲಿದ್ದು ಮತ್ತು ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಬ್ಯಾಟ್ ಬೀಸಲಿದ್ದಾರೆ. ಹೀಗೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿಯೂ ಟೀಮ್ ಇಂಡಿಯಾಗೆ ಆರಂಭಿಕ ಆಟಗಾರರ ಆಯ್ಕೆಗಳು ಕೈನಲ್ಲಿವೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಪ್ರಶ್ನೆ ಇದೀಗ ಚಿಂತೆಗೀಡಾಗುವಂತೆ ಮಾಡಿದೆ. ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲು ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ನೀಡಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗುತ್ತಾ ಅಥವಾ ಈಗಾಗಲೇ ಕೆಲ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ ಆಡಿ ಮಿಂಚಿರುವ ಶುಬ್ ಮನ್ ಗಿಲ್ ಅವರಿಗೆ ಅವಕಾಶ ನೀಡಿ ನಾಲ್ಕನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಾ ಎಂಬ ಚರ್ಚೆಗಳು ಇದೀಗ ಶುರುವಾಗಿವೆ. ಒಟ್ಟಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಶ್ರೇಯಸ್ ಅಯ್ಯರ್ ಮತ್ತು ಶುಬ್ ಮನ್ ಗಿಲ್ ನಡುವೆ ಪೈಪೋಟಿ ಶುರುವಾಗಿದೆ.