ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ20 ಸರಣಿ ಬುಧವಾರದಿಂದ ಆರಂಭವಾಗಲಿದೆ. 5 ಪಂದ್ಯಗಳ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಲು ಎರಡೂ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಟಿ20 ವಿಶ್ವಕಪ್ ದೃಷ್ಟಿಯಿಂದ ಈ ಸರಣಿ ಮಹತ್ವದಾಗಿದ್ದು, ಟೀಮ್ ಇಂಡಿಯಾ ಸಂಘಟಿತ ಆಟವನ್ನು ಆಡುವ ವಿಶ್ವಾಸದಲ್ಲಿದೆ.
ನ್ಯೂಜಿಲೆಂಡ್ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಕ್ಷಮತೆಯನ್ನು ಕಿವೀಸ್ ತಂಡದ ಆಟಗಾರರು ಹೊಂದಿದ್ದಾರೆ. ಹೀಗಾಗಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಉಭಯ ತಂಡದ ಸ್ಟಾರ್ ಆಟಗಾರರು ಮೈದಾನಕ್ಕೆ ಇಳಿದಾಗ ಭರವಸೆಯ ಆಟಗಾರರು ಮಿಂಚು ಹರಿಸಿದ್ದಾರೆ. ಈಗಾಗಲೇ ಉಭಯ ತಂಡಗಳು ಟಿ20 ಕ್ರಿಕೆಟ್‌ನಲ್ಲಿ 25 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಭಾರತ 14ರಲ್ಲಿ ಜಯ ಸಾಧಿಸಿದ್ದು, ಕಿವೀಸ್ 10 ಪಂದ್ಯಗಳಲ್ಲಿ ಜಯದ ನಗೆ ಬೀರಿದೆ.

ಉಭಯ ತಂಡಗಳ ಕಾದಾಟದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೆ ಸಲ್ಲುತ್ತದೆ. ಇವರು ಕಿವೀಸ್ ವಿರುದ್ಧ ಆಡಿದ 17 ಪಂದ್ಯಗಳಲ್ಲಿ 34ರ ಸರಾಸರಿಯಲ್ಲಿ 511 ರನ್ ಸಿಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ರೋಹಿತ್ 6 ಅರ್ಧಶತಕ ಬಾರಿಸಿದ್ದಾರೆ. ಈ ವೇಳೆ 37 ಬೌಂಡರಿ, 27 ಸಿಕ್ಸರ್ ಸಹ ಬಾರಿಸಿದ್ದಾರೆ. ಇವರನ್ನು ಬಿಟ್ಟರೆ ಕಿವೀಸ್ ಬ್ಯಾಟರ್‌ಗಳೇ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ರೋಹಿತ್ ಶರ್ಮಾ, 17 ಪಂದ್ಯ, 511 ರನ್
ಕಾಲಿನ್ ಮುನ್ರೋ, 12 ಪಂದ್ಯ, 426 ರನ್
ಕೇನ್ ವಿಲಿಯಮ್ಸನ್, 13 ಪಂದ್ಯ, 419 ರನ್
ಮಾರ್ಟಿನ್ ಗಪ್ಟಿಲ್, 16 ಪಂದ್ಯ, 380 ರನ್
ರಾಸ್ ಟೇಲರ್, 13 ಪಂದ್ಯ, 349 ರನ್

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ20 ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಇಶ್ ಸೌದಿ ಮೊದಲ ಸ್ಥಾನದಲ್ಲಿದ್ದಾರೆ. ಇವರು ಆಡಿದ 20 ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಟೀಮ್ ಸೌಥಿ ಇದ್ದು, ಇವರ ಬುಟ್ಟಿಯಲ್ಲಿ 20 ವಿಕೆಟ್‌ಗಳಿಗೆ. ಹಾಲಿ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ 18 ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ 12 ವಿಕೆಟ್ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಟ್ರೆಂಟ್ ಬೋಲ್ಟ್ ಇದ್ದು, ಇವರು 12 ವಿಕೆಟ್ ಪಡೆದಿದ್ದಾರೆ.