ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡು ಟೆಸ್ಟ್ ಸರಣಿಯಲ್ಲಿ ಆತಿಥೇಯ ತಂಡ 2-0 ಯಿಂದ ವಶ ಪಡಿಸಿಕೊಂಡಿದೆ. ಇದೇ ಗೆಲುವಿನ ವಿಶ್ವಾಸದೊಂದಿಗೆ ಟೀಮ್ ಇಂಡಿಯಾ ಮತ್ತೊಂದು ಸರಣಿಗೆ ಸಜ್ಜಾಗಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರು ಟೆಸ್ಟ್‌ಗಳ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಸಕಲ ತಯಾರಿಗಳು ಭರದಿಂದ ಸಾಗಿವೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಕನಸು ಕಾಣುತ್ತಿರುವ ಭಾರತಕ್ಕೆ ಈ ಸರಣಿಯಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ. ಈಗಾಗಲೇ ಡಬ್ಲ್ಯುಟಿಸಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತ, ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಈ ಸರಣಿಯನ್ನು ಗೆದ್ದು ಫೈನಲ್‌ಗೆ ಇನ್ನು ಹತ್ತಿರವಾಗುವ ಇರಾದೆಯನ್ನು ಭಾರತ ಹೊಂದಿದೆ. ಹಾಗಿದ್ದರೆ ಉಭಯ ತಂಡಗಳ ಬಲಾಬಲದ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತ ಇತ್ತೀಚೆಗೆ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ತವರಿನಲ್ಲಿ ಸತತ 18 ನೇ ಟೆಸ್ಟ್ ಸರಣಿ ಜಯದ ನಗೆ ಬೀರಿದೆ. ಭಾರತದ ಸದ್ಯದ ಫಾರ್ಮ್ ನೋಡಿದರೆ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸುವುದು ಖಚಿತ ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಬಲಿಷ್ಠವಾಗಿದೆ. ಉಭಯ ತಂಡಗಳ ನಡುವೆ ಒಟ್ಟು 62 ಟೆಸ್ಟ್ ಪಂದ್ಯಗಳು ನಡೆದಿದ್ದು, ಭಾರತ 22ರಲ್ಲಿ ಜಯದ ನಗೆ ಬೀರಿದೆ. ಕಿವೀಸ್ ತಂಡ 13ರಲ್ಲಿ ಗೆಲುವು ದಾಖಲಿಸಿದೆ. ಮಿಕ್ಕ ಎಲ್ಲ ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.
ಈ ಮೊದಲು ಈ ಎರಡೂ ತಂಡಗಳು 2021-22ರಲ್ಲಿ ಮುಖಾಮುಖಿ ಆಗಿದ್ದವು. ಆಗ ಭಾರತ ಸರಣಿ ಗೆಲುವಿನ ನಗೆ ಬೀರಿತ್ತು. ಅಲ್ಲದೆ ಉಭಯ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮುಖಾಮುಖಿ ಆಗಿದ್ದವು. ಈ ವೇಳೆ ಕಿವೀಸ್ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಆದರೆ ಉಭಯ ತಂಡಗಳು ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದು ರೋಚಕತೆ ಹೆಚ್ಚಿಸಿದೆ.

ಭಾರತ ತವರಿನಲ್ಲಿ 19ನೇ ಸರಣಿ ಗೆಲುವಿನ ಕನಸು ಕಾಣುತ್ತಿದೆ. ಈ ಸರಣಿಯನ್ನು ಗೆದ್ದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಆತ್ಮವಿಶ್ವಾಸದಿಂದ ತೆರಳುವ ವಿಶ್ವಾಸವನ್ನು ಭಾರತ ಮಾಡಿಕೊಂಡಿದೆ. ಇನ್ನು ಎಂ ಚಿನ್ನಸ್ವಾಮಿ ಅಂಗಳದಲ್ಲಿ ಈಗಾಗಲೇ ಉಭಯ ತಂಡಗಳು ಮೂರು ಬಾರಿ ಕಾದಾಟ ನಡೆಸಿದ್ದು, ಭಾರತ ಮೂರು ಪಂದ್ಯಗಳನ್ನು ಗೆದ್ದು ಕೊಂಡಿದೆ.
ಪ್ರಸಕ್ತ ವರ್ಷದ ನ್ಯೂಜಿಲೆಂಡ್‌ನ ಪ್ರದರ್ಶನ ನೋಡಿದರೆ, ಗೆಲುವು ಸಾಧಿಸಲು ಪರದಾಡುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಈ ವರ್ಷ ಒಂದು ಸರಣಿ ಗೆಲುವಿನ ನಗೆ ಬೀರಿರುವ ಕಿವೀಸ್, ಆಸ್ಟ್ರೇಲಿಯಾ ವಿರುದ್ಧ 2-0 ಯಿಂದ ಮುಖಭಂಗ ಅನುಭವಿಸಿದೆ. ಇನ್ನು ಇತ್ತೀಚಿಗೆ ನಡೆದ ಶ್ರೀಲಂಕಾ ಪ್ರವಾಸದಲ್ಲೂ ನ್ಯೂಜಿಲೆಂಡ್ ಸೋಲಿನ ಕಹಿ ಕಂಡಿದ್ದು, ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ.