IND vs SA T20: ಮುನ್ನಡೆ ಕನಸಿನಲ್ಲಿ ಭಾರತ: ತಂಡ ಸೇರಿದ ಗಿಲ್, ಬುಮ್ರಾ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿಯ ಮೊದಲ ಪಂದ್ಯ ಡಿಸೆಂಬರ್ 9 ರಂದು ಕಟಕ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ 5 ಪಂದ್ಯಗಳ ಟಿ20 ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸು ಎರಡೂ ತಂಡಗಳದ್ದಾಗಿದೆ. ಏಕದಿನ ಸರಣಿಯಲ್ಲಿ ನೀಡಿದ ಭರ್ಜರಿ ಪ್ರದರ್ಶನವನ್ನು ಮುಂದುವರೆಸಲು ಟೀಮ್ ಇಂಡಿಯಾ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ದಕ್ಷಿಣ ಆಫ್ರಿಕಾ ಅಬ್ಬರಿಸುವ ಇರಾದೆಯನ್ನು ಹೊಂದಿದೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ರನ್ ಹೊಳೆ ನಿರೀಕ್ಷಿಸಬಹುದಾಗಿದೆ.
ಉಭಯ ತಂಡಗಳು ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 31 ಬಾರಿ ಮುಖಾಮುಖಿ ಆಗಿವೆ. ಈ ವೇಳೆ ಭಾರತ 18, ದಕ್ಷಿಣ ಆಫ್ರಿಕಾ 12 ಬಾರಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯ ಫಲಿತಾಂಶ ಹೀನವಾಗಿದೆ. ಈ ಲೆಕ್ಕಾಚಾರಗಳನ್ನು ನೋಡಿದರೆ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಫೈಟ್ ನಿರೀಕ್ಷಿಸಲಾಗಿದೆ. ಅಲ್ಲದೆ ಎರಡೂ ತಂಡಗಳು 2024ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಕಾದಾಟ ನಡೆಸಿದ್ದವು.

ಪಿಚ್ ವರದಿ: ಕಟಕ್‌ನಲ್ಲಿ ಕೆಂಪು ಮಣ್ಣಿನ ಪಿಚ್ ಇದ್ದು, ಈ ಮೈದಾನದಲ್ಲಿ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಮಾಡಲು ನಿರ್ಧರಿಸುತ್ತದೆ. ಈ ಮೈದಾನದಲ್ಲಿ ಚೇಸ್ ಮಾಡಿದ ತಂಡವೇ ಹೆಚ್ಚು ಪಂದ್ಯಗಳನ್ನು ಗೆದ್ದಿದೆ. ಅಲ್ಲದೆ ಎರಡನೇ ಇನಿಂಗ್ಸ್ ವೇಳೆ ಮಂಜು ಬೀಳುವ ಸಾಧ್ಯತೆ ಇದೆ. ಈ ಪಿಚ್ ಬ್ಯಾಟರ್‌ಗಳಿಗೆ ಸಹಾಯಕವಾಗಿದ್ದು, ವೇಗದ ಬೌಲರ್‌ಗಳು ಸಹ ಕರಾರುವಾಕ್ ದಾಳಿ ಸಂಘಟಿಸಿದರೆ ಮಿಂಚಬಲ್ಲರು.
ಗಿಲ್ ಆಗಮನ
ಕೋಲ್ಕತ್ತಾ ಟೆಸ್ಟ್ ಪಂದ್ಯದ ವೇಳೆ ಕುತ್ತಿಗೆಯ ಗಾಯಕ್ಕೆ ತುತ್ತಾಗಿದ್ದ ಶುಭಮನ್ ಗಿಲ್ ಈಗ ಚೇತರಿಸಿಕೊಂಡಿದ್ದು ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ತಂಡದ ಬಲ ಹೆಚ್ಚಿದೆ. ಇವರು ತಮ್ಮ ಬಾಲ್ಯದ ಸ್ನೇಹಿತ ಅಭಿಷೇಕ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ವೇಳೆ ಗಿಲ್ ಹೇಗೆ ಆಡುತ್ತಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈಗಾಗಲೇ ದೇಶೀಯ ಟೂರ್ನಿಯಲ್ಲಿ ಧಮಾಕೆದಾರ್ ಪ್ರದರ್ಶನ ನೀಡಿರುವ ಅಭಿಷೇಕ್ ಶರ್ಮಾ ಇದೇ ಪ್ರದರ್ಶನ ಮುಂದುವರೆಸುವ ವಿಶ್ವಾಸವನ್ನು ಹೊಂದಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ತಂಡಕ್ಕೆ ನೆರವಾಗಬಲ್ಲರು. ಆಲ್‌ರೌಂಡರ್ ರೂಪದಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ಏಷ್ಯಾ ಕಪ್ ಟಿ20 ಸರಣಿಯ ಬಳಿಕ ಇದೇ ಮೊದಲ ಬಾರಿಗೆ ಹಾರ್ದಿಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಿದ್ಧರಾಗಿದ್ದಾರೆ. ಶಿವಂ ದುಬೆ, ಅಕ್ಷರ್ ಪಟೇಲ್ ಸಹ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಬಹುದು.
ಬುಮ್ರಾ ಬಲ
ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಂಡ ಸೇರಿಕೊಂಡಿದ್ದು, ತಂಡಕ್ಕೆ ಬಲ ತುಂಬಿದಂತೆ ಆಗಿದೆ. ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಸಹ ಕಾಣಿಸಿಕೊಳ್ಳಬಹುದು. ಇನ್ನು ವರುಣ್ ಚಕ್ರವತ್ತಿ ಹಾಗೂ ಕುಲ್‌ದೀಪ್ ಯಾದವ್ ಇಬ್ಬರಲ್ಲಿ ಒಬ್ಬರು ಸ್ಥಾನ ಪಡೆಯುವ ಸಾಧ್ಯತೆ ಇದೆ.
ದಕ್ಷಿಣ ಆಫ್ರಿಕಾ ತಂಡದಲ್ಲೂ ಟಿ20 ಕ್ರಿಕೆಟ್‌ನ ಸ್ಟಾರ್ ಆಟಗಾರರು ಇದ್ದು, ಪಂದ್ಯದ ಗತಿಯನ್ನು ಬದಲಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಏಡೆನ್ ಮಾರ್ಕ್ರಮ್ ಅವರ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಗೆಲುವಿನ ಕನಸು ಕಾಣುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications