ಟಿ20 ಸರಣಿ: ಮೊದಲ ಪಂದ್ಯದಲ್ಲಿ ಸೋಲು; ವಿರಾಟ್ ಕೊಹ್ಲಿ ಸಾಲಿಗೆ ಸೇರಿದ ರಿಷಭ್ ಪಂತ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಆಘಾತಕಾರಿ ಸೋಲು ಅನುಭವಿಸಿದೆ. ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಬೃಹತ್ ಮೊತ್ತವನ್ನು ಪೇರಿಸಿದ ಹೊರತಾಗಿಯೂ ಟೀಮ್ ಇಂಡಿಯಾ ಅದನ್ನು ರಕ್ಷಿಸಿಕೊಳ್ಳಲು ವಿಫಲವಾಯಿತು. ಹೀಗಾಗಿ ನಾಯಕನಾಗಿ ರಿಷಭ್ ಪಂತ್ ಮೊದಲ ಪಂದ್ಯದಲ್ಲಿಯೇ ನಿರಾಸೆ ಅನುಭವಿಸಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಸಾಲಿಗೆ ಸೇರಿಕೊಂಡಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗಿ ಮೊದಲ ಪಂದ್ಯದಲ್ಲಿಯೇ ಸೋಲು ಅನುಭವಿಸಿದ ಆಟಗಾರ ಭಾರತದ ಎರಡನೇ ನಾಯಕ ಎನಿಸಿದ್ದಾರೆ ರಿಷಭ್ ಪಂತ್. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಕೂಡ ನಾಯಕನಾಗಿ ಮೊದಲ ಪಂದ್ಯದಲ್ಲಿಯೇ ಸೋಲಿನ ಕಹಿ ಅನುಭವಿಸಿದ್ದರು. 211 ರನ್‌ಗಳನ್ನು ಗಳಿಸಿದರೂ ಭಾರತ ತಂಡಕ್ಕೆ ಈ ಬೃಹತ್ ಮೊತ್ತವನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಎದುರಾಳಿ ತಂಡ ಕೇವಲ ಮೂರು ವಿಕೆಟ್ ಕಳೆದುಕೊಂಡು ಈ ಗುರಿ ಬೆನ್ನಟ್ಟಲು ಯಶಸ್ವಿಯಾಯಿತು.
ಭಾರತ ತಂಡ ನೀಡಿದ 212 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಟಿ20 ಮಾದರಿಯಲ್ಲಿ ತನ್ನ ಅತಿ ದೊಡ್ಡ ಗುರಿಯನ್ನು ಬೆನ್ನಟ್ಟಿದ ದಾಖಲೆ ಬರೆಯಿತು. ಸ್ಪೋಟಕ ಆಟಗಾರ ಡೇವಿಡ್ ಮಿಲ್ಲರ್ 31 ಎಸೆತಗಳಲ್ಲಿ ಅಜೇಯ 64 ರನ್ ಹಾಗೂ ವಾನ್ ಡಸ್ ಡುಸೆನ್ ಅಜೇಯ 75 ರನ್‌ಗಳನ್ನು ಗಳಿಸಿ ಇನ್ನೂ ಐದು ಎಸೆತಗಳು ಬಾಕಿಯಿರುವಂತೆಯೇ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.

2ನೇ ಕಿರಿಯ ನಾಯಕ ಪಂತ್
ಈ ಸರಣಿಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ತಂಡದ ನಾಯಕನಾಗಿ ಆಯ್ಕೆಯಾಗಿದ್ದ ಕೆಎಲ್ ರಾಹುಲ್ ಗಾಯದ ಕಾರಣದಿಂದಾಗಿ ಹೊರಬಿದ್ದರು. ಹೀಗಾಗಿ ಟೀಮ್ ಇಂಡಿಯಾಗೆ ರಿಷಭ್ ಪಂತ್ ಅವರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿದ್ದು. ಈ ಮೂಲಕ ಟೀಮ್ ಇಂಡಿಯಾ ಟಿ20 ತಂಡವನ್ನು ಮುನ್ನಡೆಸಿದ 8ನೇ ನಾಯಕ ಎನಿಸಿಕೊಂಡಿದ್ದಾರೆ ರಿಷಭ್ ಪಂತ್. ಸುರೇಶ್ ರೈನಾ ಬಳಿಕ ಭಾರತವನ್ನು ಮುನ್ನಡೆಸಿದ ಅತಿ ಕಿರಿಯ ನಾಯಕ ಎನಿಸಿಕೊಂಡಿದ್ದಾರೆ.

ಮೊದಲ ಪಂದ್ಯದಲ್ಲಿ ಕೊಹ್ಲಿಗೆ ಸೋಲು
ನಾಯಕನಾಗಿ ಮೊದಲ ಪಂದ್ಯದಲ್ಲಿಯೇ ಸೋಲು ಅನುಭವಿಸುವ ಮೂಲಕ ಪಂತ್ ವಿರಾಟ್ ಕೊಹ್ಲಿ ಜೊತೆಗೆ ಸ್ಥಾನ ಪಡೆದುಕೊಂಡಿದ್ದಾರೆ. 2017ರಲ್ಲಿ ಇಂಗ್ಲೆಂಡ್ ವಿರುದ್ಧ ಕಾನ್ಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡ ವಿರಾಟ್ ಕೊಹ್ಲಿ ಕೂಡ ಆ ಪಂದ್ಯದಲ್ಲಿ 7 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿದ್ದರು. ಕುತೂಹಲಕಾರಿ ಸಂಗತಿಯೆಂದರೆ ನಾಯಕನಾಗಿ ಪಂತ್ ಹಾಗೂ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಗಳಿಸಿದ್ದು 29 ರನ್. ಹಾಗಿದ್ದರೂ ವಿರಾಟ್ ಕೊಹ್ಲಿ ಕಳೆದ ವರ್ಷ ನಾಯಕತ್ವದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಭಾರತ ವೈಟ್‌ಬಾಲ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದರು.

200 ರನ್ ಗಳಿಸಿ ಮೊದಲ ಸೋಲು
ಇನ್ನು ಈ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ 200ಕ್ಕೂ ಅಧಿಕ ರನ್ ಬಾರಿಸಿಯೂ ಸೋಲು ಅನುಭವಿಸಿದಂತಾಗಿದೆ. ಇದಕ್ಕೂ ಮುನ್ನ ಭಾರತ 11 ಸಂದರ್ಭಗಳಲ್ಲಿ 200ಕ್ಕೂ ಅಧಿಕ ಮೊತ್ತವನ್ನು ಪೇರಿಸಿದ್ದು ಆ ಎಲ್ಲಾ ಪಂದ್ಯಗಳಲ್ಲಿಯೂ ಭಾರತ ಗೆದ್ದುಕೊಂಡಿತ್ತು.

ವಿಶ್ವದಾಖಲೆ ಅವಕಾಶ ಕಳೆದುಕೊಂಡ ಭಾರತ
ಇನ್ನು ಈ ಸೋಲಿನೊಂದಿಗೆ ಭಾರತ ತಂಡಕ್ಕೆ ವಿಶ್ವ ದಾಖಲೆ ನಿರ್ಮಿಸುವ ಅದ್ಭುತ ಅವಕಾಶವೊಂದನ್ನು ಕಳೆದುಕೊಂಡಿದೆ. ಭಾರತ ಈ ಹಿಂದಿನ ಸತತ 12 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಗೆದ್ದರೆ ಚಿಟುಕು ಮಾದರಿಯಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಸತತವಾಗಿ ಗೆದ್ದ ದಾಖಲೆಯನ್ನು ಭಾರತ ತನ್ನ ಹೆಸರಿಗೆ ಬರೆಯುವ ಅವಕಾಶವಿತ್ತು. ಇನ್ನು ಈ ಪಂದ್ಯದಲ್ಲಿ ಇಶಾನ್ ಕಿಶನ್ 76 ರನ್‌ಗಳನ್ನು ಗಳಿಸುವ ಮೂಲಕ ಮಿಂಚಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications