ಭಾರತ vs ದ.ಆಫ್ರಿಕಾ ಚೊಚ್ಚಲ ಟೆಸ್ಟ್: 3ನೇ ದಿನವೂ ಇರುತ್ತಾ ಮಳೆ ಕಾಟ? ಹವಾಮಾನ ವರದಿ ಹೇಳಿದ್ದಿಷ್ಟು

ಇತ್ತೀಚೆಗಷ್ಟೇ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳಲ್ಲಿ ಜಯಗಳಿಸಿರುವ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದು ಹರಿಣಗಳ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಇತ್ತಂಡಗಳ ನಡುವೆ ಮೊದಲಿಗೆ ಟೆಸ್ಟ್ ಸರಣಿ ಆರಂಭವಾಗಿದ್ದು ಚೊಚ್ಚಲ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ ಶುರುವಾಗಿದೆ. ಈ ಪಂದ್ಯ ಸೆಂಚುರಿಯನ್ ಸೂಪರ್ ಸ್ಪೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಪಂದ್ಯದ ಮೊದಲನೇ ದಿನ ಯಾವುದೇ ರೀತಿಯ ಅಡಚಣೆ ಇಲ್ಲದೇ ಅಚ್ಚುಕಟ್ಟಾಗಿ ನಡೆಯಿತು. ಆದರೆ ಈ ಪಂದ್ಯದ ಎರಡನೇ ದಿನದಾಟ ಆರಂಭವಾಗುವುದಕ್ಕೂ ಮುನ್ನ ಶುರುವಾದ ಮಳೆ ಎರಡನೇ ದಿನದಾಟವನ್ನು ಸಂಪೂರ್ಣವಾಗಿ ರದ್ದಾಗುವಂತೆ ಮಾಡಿತು.
ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮಳೆಯ ಅಡ್ಡಿಯಿಂದಾಗಿ ರದ್ದಾಗಿದೆ. ಮೊದಲನೇ ದಿನದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಮ್ ಇಂಡಿಯಾ ಪರ ಕೆ ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಆರಂಭವನ್ನು ಮಾಡಿದ್ದರು. ಈ ಮೂಲಕ ಟೀಮ್ ಇಂಡಿಯಾ ಮೊದಲನೇ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿ ಪಂದ್ಯದಲ್ಲಿ ಉತ್ತಮ ಹಂತದಲ್ಲಿತ್ತು. ಇನ್ನು ಕೆ ಎಲ್ ರಾಹುಲ್ ಅಜೇಯ 122 ರನ್ ಗಳಿಸಿ ದ್ವಿತಿಯ ದಿನದಾಟದಂದು 150 ರನ್‌ಗಳ ಗಡಿ ದಾಟುವ ಯೋಜನೆಯಲ್ಲಿದ್ದರು. ಟೀಮ್ ಇಂಡಿಯಾ ಕೂಡ ದ್ವಿತೀಯ ದಿನದಾಟದಂದು ಉತ್ತಮ ರನ್ ಕಲೆ ಹಾಕಿ ಪಂದ್ಯದ ಮೇಲೆ ಹಿಡಿತ ಸಾಧಿಸುವ ಯತ್ನದಲ್ಲಿತ್ತು.
ಆದರೆ ಭಾರತದ ಈ ಎಲ್ಲಾ ಕನಸಿಗೆ ತಣ್ಣೀರು ಎರಚಿರುವ ವರುಣರಾಯ ಒಂದು ದಿನದ ಆಟವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾನೆ. ಹೀಗೆ ದ್ವಿತೀಯ ದಿನದಾಟ ಮಳೆಗೆ ಆಹುತಿಯಾದ ನಂತರ ಇದೀಗ ಕ್ರಿಕೆಟ್ ಅಭಿಮಾನಿಗಳ ಕಣ್ಣು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯದ ತೃತೀಯ ದಿನದಾಟದ ಮೇಲೆ ಬಿದ್ದಿದೆ. ತೃತೀಯ ದಿನದಾಟದಂದು ಕೂಡ ಮಳೆ ಬರುತ್ತಾ ಎಂಬ ಪ್ರಶ್ನೆ ಹಾಗೂ ಬೇಸರ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ಹುಟ್ಟಿದ್ದು ಈ ಪ್ರಶ್ನೆಗೆ ಹವಾಮಾನ ವರದಿ ಈ ಕೆಳಕಂಡಂತೆ ಉತ್ತರಗಳನ್ನು ನೀಡಿದೆ.

ಮೂರನೇ ದಿನದಂದು ಮಳೆ ಇರುವುದಿಲ್ಲ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೆಂಚುರಿಯನ್ ಟೆಸ್ಟ್ ಪಂದ್ಯದ ತೃತೀಯ ದಿನದಂದು ಮಳೆಯಾಗುವ ಸಂಭವ ತೀರಾ ಕಡಿಮೆ ಎಂದು ಅಕ್ಕ್ಯುವೆದರ್ ತಿಳಿಸಿದೆ. ಪಂದ್ಯ ಆರಂಭವಾದ ಕೆಲ ಗಂಟೆಗಳವರೆಗೆ ಮಾತ್ರ 20% ಮೋಡ ಕವಿದ ವಾತಾವರಣವಿರಲಿದ್ದು, ನಂತರದ ಸಮಯದಲ್ಲಿ ಮೋಡ ಇರುವುದಿಲ್ಲ ಮತ್ತು ಸೂರ್ಯ ಕಾಣಿಸಿಕೊಳ್ಳಲಿದ್ದಾನೆ ಹಾಗೂ 18ರಿಂದ 25° ಸೆಲ್ಸಿಯಸ್ ಉಷ್ಣಾಂಶವಿರಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಮೂರನೇ ದಿನ ಎರಡೂ ತಂಡಗಳ ಬ್ಯಾಟಿಂಗ್ ನೋಡಬಹುದು
ಸದ್ಯ ಮೊದಲನೇ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ 3 ವಿಕೆಟ್ ನಷ್ಟಕ್ಕೆ 272 ರನ್ ಕಲೆ ಹಾಕಿದ್ದು, ಮೂರನೇ ದಿನದಾಟದಂದು ಮಳೆ ಬಾರದಿದ್ದರೆ ತನ್ನ ಬ್ಯಾಟಿಂಗ್ ಮುಂದುವರೆಸಲಿದೆ. ಹೀಗೆ ತೃತೀಯ ದಿನದಂದು ಟೀಮ್ ಇಂಡಿಯಾ ಬ್ಯಾಟಿಂಗ್ ಆರಂಭಿಸಿ ಸಂಪೂರ್ಣ ಆಟವನ್ನು ಆಡಲಿದ್ದು ದಕ್ಷಿಣ ಆಫ್ರಿಕಾ ಕೂಡ ಮೊದಲನೇ ಇನ್ನಿಂಗ್ಸ್‌ನಲ್ಲಿ ತನ್ನ ಪಾಲಿನ ಬ್ಯಾಟಿಂಗ್ ಆರಂಭಿಸಲಿದೆ ಎನ್ನಲಾಗುತ್ತಿದೆ. ಈ ಮೂಲಕ ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳ ಬ್ಯಾಟಿಂಗ್ ನೋಡುವ ಅವಕಾಶ ಕ್ರಿಕೆಟ್ ಪ್ರೇಕ್ಷಕರಿಗೆ ಸಿಗಲಿದೆ.

ಇನ್ನೊಂದು ದಿನ ಮಳೆ ಬಂದರೂ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವ ಭೀತಿ
ಈಗಾಗಲೇ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟ ಮಳೆಗೆ ಆಹುತಿಯಾಗಿದೆ. ಹೀಗಿರುವಾಗ ಪಂದ್ಯ 4 ದಿನಗಳಲ್ಲಿ ಮಾತ್ರ ನಡೆಯುತ್ತಿದ್ದು ಮತ್ತೊಂದು ದಿನ ಕೂಡ ಮಳೆಯ ಕಾರಣದಿಂದಾಗಿ ಹಾಳಾದರೆ ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಈ ಪಂದ್ಯದ ಫಲಿತಾಂಶ ಸ್ಪಷ್ಟವಾಗಿ ಸಿಗಬೇಕೆಂದರೆ ಮುಂದಿನ 3 ದಿನಗಳು ಮಳೆ ಬಾರದೇ ಇರಲೇಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications