ಸದ್ಯ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿವೆ.
ಇದೇ ವೇಳೆ ವಿಶ್ವಕಪ್ ನಾಕೌಟ್ ಪಂದ್ಯಗಳು ಸಮೀಪಿಸುತ್ತಿದ್ದು, ದಕ್ಷಿಣ ಆಫ್ರಿಕಾ ಮಾಜಿ ಲೆಜೆಂಡ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ವಿಶ್ವಕಪ್ ಗೆಲ್ಲಬೇಕಾದ ನೆಚ್ಚಿನ ತಂಡವನ್ನು ಹೆಸರಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಇತ್ತೀಚಿಗೆ ಮಾತನಾಡಿದ್ದು, ಹರಿಣ ಪಡೆ ಎಲ್ಲಾ ರೀತಿಯಿಂದ ವಿಶ್ವಕಪ್ ಗೆಲ್ಲಲು ವಿಫಲವಾದರೆ, ಭಾರತ ತಂಡವು 2023ರ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಬೇಕೆಂದು ನಾನು ಬಯಸುತ್ತೇನೆ ಎಂದರು.
ಭಾರತ ತಂಡವು ಪ್ರಬಲ ಫೇವರಿಟ್ ಆಗಿರುವ ಕಾರಣಗಳನ್ನು ಎತ್ತಿ ತೋರಿಸುತ್ತಾ, ಟೀಮ್ ಇಂಡಿಯಾ ಅವರ ತಂಡದಲ್ಲಿ ಬಹಳಷ್ಟು ಪಂದ್ಯ ವಿಜೇತರನ್ನು ಹೊಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ತವರಿನಲ್ಲಿ ಆಡುವುದರಿಂದ ರೋಹಿತ್ ಶರ್ಮಾ ಪಡೆಗೆ ಲಾಭವಾಗಲಿದೆ ಎಂದು ಎಬಿ ಡಿವಿಲಿಯರ್ಸ್ ಒತ್ತಿ ಹೇಳಿದರು.
"ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಅವರು ಗೆಲ್ಲದಿದ್ದರೆ, ಭಾರತ ಖಂಡಿತವಾಗಿಯೂ ನನ್ನ ಎರಡನೇ ನೆಚ್ಚಿನ ತಂಡ. ಅವರು ಆಲ್‌ರೌಂಡ್ ಕ್ರಿಕೆಟಿಗರನ್ನು ಪಡೆದಿರುವ ಕಾರಣ ಅವರು ಮಾತ್ರ ನೆಚ್ಚಿನವರಾಗಿದ್ದಾರೆ," ಎಂದು ಆರ್‌ಸಿಬಿ ಮಾಜಿ ಸ್ಫೋಟಕ ಬ್ಯಾಟರ್ ಎಬಿಡಿ ಅಭಿಪ್ರಾಯಪಟ್ಟರು.

"ನಿಜವಾಗಿಯೂ ಭಾರತ ಉತ್ತಮ ತಂಡ. ಸಾಕಷ್ಟು ಮಂದಿ ಮ್ಯಾಚ್ ವಿನ್ನರ್‌ಗಳು ಇದ್ದಾರೆ. ಅವರು ಪರಿಸ್ಥಿತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರು ತಮ್ಮ ತವರು ಪ್ರೇಕ್ಷಕರ ಮುಂದೆ ಆಡುತ್ತಿದ್ದಾರೆ. ಇದು ಮತ್ತೊಮ್ಮೆ 2011ರ ಪುನರಾವರ್ತನೆ ಆಗಿದೆ. ಆ ಲೈಟ್‌ಗಳು ಸ್ಟೇಡಿಯಂನಲ್ಲಿ ಬೆಳಗುತ್ತಿರುವುದನ್ನು ನಾನು ನೋಡುತ್ತೇನೆ, ಎಲ್ಲರೂ ತಮ್ಮ ಸೆಲ್‌ಫೋನ್‌ಗಳ ಟಾರ್ಚ್‌ಗಳನ್ನು ಆನ್ ಮಾಡುತ್ತಿದ್ದಾರೆ," ಎಂದು ಎಬಿ ಡಿವಿಲಿಯರ್ಸ್ ಹೇಳಿದರು.
ಭಾರತ ತಂಡ ಇದುವರೆಗೆ 2023ರ ವಿಶ್ವಕಪ್‌ನಲ್ಲಿ ಮೇಲುಗೈ ಸಾಧಿಸಿದ್ದು, ಆರು ಪಂದ್ಯಗಳಿಂದ ಆರು ವಿಜಯಗಳೊಂದಿಗೆ ಪ್ರಸ್ತುತ ಏಕೈಕ ಅಜೇಯ ತಂಡವಾಗಿದೆ ಮತ್ತು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಐಸಿಸಿ ಟೂರ್ನಿನಲ್ಲಿ ಭಾರತ ಫಾರ್ಮ್‌ನಲ್ಲಿರುವಾಗ, ಆಟದ ಅನಿರೀಕ್ಷಿತ ಸ್ವರೂಪವನ್ನು ಗಮನಿಸಿದರೆ, ಕಟ್ಟ ಸಮಯದಲ್ಲಿ ಹಿನ್ನಡೆ ಅನುಭವಿಸುವ ಅವಕಾಶ ಯಾವಾಗಲೂ ಇರುತ್ತದೆ ಎಂದು 39 ವರ್ಷದ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಆದಾಗ್ಯೂ, ಭಾರತ ತಂಡವು ಅವರ ಪರವಾಗಿ ಬಹಳಷ್ಟು ಸಂಗತಿಗಳನ್ನು ಹೊಂದಿದೆ. ಇದು ಈ ಬಾರಿ ಬೆಳ್ಳಿ ಟ್ರೋಫಿಯನ್ನು ಗೆಲ್ಲುವ ಪ್ರಬಲ ಮೆಚ್ಚಿನ ತಂಡವನ್ನಾಗಿ ಮಾಡುತ್ತದೆ ಎಂದು ಎಂದು ಹೇಳಿದರು.
"ಕ್ರೀಡೆಯು ಯಾವಾಗಲೂ ಹೀಗೆ ಕೆಲಸ ಮಾಡುವುದಿಲ್ಲ ಎಂಬ ಅಂಶವನ್ನು ಹೊರತುಪಡಿಸಿ ಎಲ್ಲವೂ ಜಾರಿಯಲ್ಲಿವೆ. ಬಹುಶಃ ಒತ್ತಡವಾಗಿರಬಹುದು ಅಥವಾ ನಾವು ಕೆಟ್ಟ ದಿನದಲ್ಲಿ ಕಳಪೆ ಪ್ರದರ್ಶನ ನೀಡಬಹುದು. ಆದರೆ, ಇದು ನಾವು ಆಡುವ ಆಟದ ಸೌಂದರ್ಯವಾಗಿದೆ," ಎಂದು ಎಬಿ ಡಿವಿಲಿಯರ್ಸ್ ತಿಳಿಸಿದರು.
"ಇದನ್ನು ಊಹಿಸಲು ಸಾಧ್ಯವಿಲ್ಲ. ಭಾರತದ ಪರವಾಗಿ ಆಡ್ಸ್ ನಿಜವಾಗಿಯೂ ಪ್ರಬಲವಾಗಿದ್ದರೂ ಸಹ, ಅಂದಿನ ದಿನ ಏನು ಬೇಕಾದರೂ ಆಗಬಹುದು. ಆದರೆ, ಭಾರತ ಮೆಚ್ಚಿನ ತಂಡ. ಅವರು ವಿಶ್ವಕಪ್ ಗೆಲ್ಲುತ್ತಾರೆ ಎಂದು ಭಾವಿಸಲು ಸಾಕಷ್ಟು ಕಾರಣಗಳಿವೆ," ಎಂದು ದಕ್ಷಿಣ ಆಫ್ರಿಕಾ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ ಪ್ರತಿಕ್ರಿಯಿಸಿದರು.