ರಹಾನೆಗೋಸ್ಕರ ತಂಡದ ಬಲಿಷ್ಠ ಆಟಗಾರನನ್ನೇ ಕೈಬಿಡುವ ಸೂಚನೆ ನೀಡಿದ ರಾಹುಲ್; ಹೀಗಾದರೆ ಕಷ್ಟ!

ಕಳೆದ 12 ತಿಂಗಳುಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನೆಲಗಳಲ್ಲಿ ಟೆಸ್ಟ್ ಸರಣಿಗಳನ್ನು ಗೆದ್ದು ಬೀಗಿರುವ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ನೆಲದಲ್ಲಿಯೂ ಕೂಡ ತನ್ನ ಪಾಲಿನ ಚೊಚ್ಚಲ ಟೆಸ್ಟ್ ಸರಣಿಯನ್ನು ಗೆದ್ದು ವಿಜಯ ಪತಾಕೆಯನ್ನು ಹಾರಿಸುವ ತವಕದಲ್ಲಿವೆ. ಹೌದು, ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾ ಇದುವರೆಗೂ ಕೂಡ ಒಂದೇ ಒಂದು ಟೆಸ್ಟ್ ಸರಣಿಯನ್ನು ಕೂಡ ಗೆದ್ದಿಲ್ಲ. ಇದುವರೆಗೂ 7 ಬಾರಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು ಟೆಸ್ಟ್ ಸರಣಿಗಳನ್ನು ಆಡಿರುವ ಟೀಮ್ ಇಂಡಿಯಾ ಯಾವುದೇ ಸಲ ಕೂಡ ಜಯದ ರುಚಿಯನ್ನು ಕಂಡಿಲ್ಲ. ಹೀಗಾಗಿ ಈ ಬಾರಿ ಟೆಸ್ಟ್ ಸರಣಿಯನ್ನು ಗೆಲ್ಲಲೇಬೇಕೆಂಬ ಪಣತೊಟ್ಟಿರುವ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಲುಪಿದಾಗಿನಿಂದ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿದೆ.
ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಸೆಂಚೂರಿಯನ್ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿರುವ ಟೀಮ್ ಇಂಡಿಯಾವನ್ನು ಈ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಮುನ್ನಡೆಸಲಿದ್ದರೆ, ಗಾಯಕ್ಕೊಳಗಾಗಿ ರೋಹಿತ್ ಶರ್ಮಾ ಅಲಭ್ಯರಾಗಿರುವ ಕಾರಣ ಕೆಎಲ್ ರಾಹುಲ್ ಉಪ ನಾಯಕನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹೌದು ರೋಹಿತ್ ಶರ್ಮಾ ಅಲಭ್ಯರಾಗಿರುವ ಕಾರಣ ಈ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಉಪನಾಯಕನಾಗಿ ಕೆಎಲ್ ರಾಹುಲ್ ಕಣಕ್ಕಿಳಿಯುತ್ತಿದ್ದಾರೆ. ಹೀಗೆ ಉಪನಾಯಕನಾಗಿ ಜವಾಬ್ದಾರಿ ನಿರ್ವಹಿಸಲಿರುವ ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಚೊಚ್ಚಲ ಟೆಸ್ಟ್ ಆರಂಭವಾಗುವ ಮುನ್ನ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿ ಪಂದ್ಯಕ್ಕೆ ಟೀಮ್ ಇಂಡಿಯಾ ಮಾಡಿಕೊಂಡಿರುವ ತಯಾರಿಯ ಬಗ್ಗೆ ಮಾಹಿತಿ ನೀಡಿದರು.
ಹೀಗೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಕೆ ಎಲ್ ರಾಹುಲ್ ಎಲ್ಲರಿಗೂ ದೊಡ್ಡ ಮಟ್ಟದಲ್ಲಿ ಕಾಡುತ್ತಿರುವ ಶ್ರೇಯಸ್ ಅಯ್ಯರ್ ಅಥವಾ ಅಜಿಂಕ್ಯ ರಹಾನೆ ಇಬ್ಬರಲ್ಲಿ ಯಾರನ್ನು ಟೀಮ್ ಇಂಡಿಯಾ ಪ್ರಥಮ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಿಕೊಳ್ಳಲಿದೆ ಎಂಬ ಪ್ರಶ್ನೆಗೂ ಕೂಡ ಉತ್ತರ ನೀಡುವ ಯತ್ನ ಮಾಡಿದ್ದಾರೆ. ಹೌದು, ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಅಥವಾ ಶ್ರೇಯಸ್ ಅಯ್ಯರ್ ಈ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಲು ಸಾಧ್ಯವಿದೆ. ಹೀಗಾಗಿ ಈ ಇಬ್ಬರಲ್ಲಿ ಯಾರಿಗೆ ಮಣೆ ಹಾಕಲಾಗುತ್ತದೆ ಎಂಬ ಕುತೂಹಲ ಹುಟ್ಟಿದ್ದು ಕೆಎಲ್ ರಾಹುಲ್ ಈ ಕುರಿತಾಗಿ ಈ ಕೆಳಕಂಡಂತೆ ಮಾತನಾಡಿದ್ದಾರೆ.

5 ಬೌಲರ್‌ಗಳೊಂದಿಗೆ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ
ಇತ್ತೀಚೆಗಿನ ಟೀಮ್ ಇಂಡಿಯಾ 5 ಬೌಲರ್‌ಗಳ ತಂಡಗಳೊಂದಿಗೆ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಅಭ್ಯಾಸವನ್ನು ಮಾಡಿಕೊಂಡಿದೆ. ಈ ಕುರಿತಾಗಿ ಮಾತನಾಡಿರುವ ಕೆಎಲ್ ರಾಹುಲ್ 5 ಬೌಲರ್‌ಗಳ ತಂಡದೊಂದಿಗೆ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿಯೂ ಸಹ ಟೀಮ್ ಇಂಡಿಯಾ ಕಣಕ್ಕಿಳಿಯಲಿದ್ದು ಎದುರಾಳಿ ತಂಡದ 20 ವಿಕೆಟ್ ಪಡೆಯಬೇಕೆಂದರೆ ಈ ಸೂತ್ರವನ್ನು ಅನುಸರಿಸಲೇಬೇಕು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಐದನೇ ಕ್ರಮಾಂಕಕ್ಕಾಗಿ ಅಜಿಂಕ್ಯ ರಹಾನೆ ಮತ್ತು ಶ್ರೇಯಸ್ ಅಯ್ಯರ್ ನಡುವೆ ಪೈಪೋಟಿ
ಹೀಗೆ ಒಟ್ಟು 5 ಬೌಲರ್‌ಗಳನ್ನು ಕಣಕ್ಕಿಳಿಸಿದರೆ ತಂಡದಲ್ಲಿ ಉಳಿದ 6 ಸ್ಥಾನಗಳಿಗೆ ಮಯಾಂಕ್ ಅಗರ್ವಾಲ್, ಕೆ ಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಾಗೂ ಮತ್ತೋರ್ವ ಆಟಗಾರ ಸ್ಥಾನ ಪಡೆದುಕೊಳ್ಳಬಹುದು. ಇಷ್ಟು ಆಟಗಾರರು ಖಚಿತವಾಗಿ ಸ್ಥಾನ ಪಡೆದುಕೊಳ್ಳಲಿದ್ದು ಐದನೇ ಕ್ರಮಾಂಕಕ್ಕಾಗಿ ಶ್ರೇಯಸ್ ಅಯ್ಯರ್ ಮತ್ತು ಅಜಿಂಕ್ಯ ರಹಾನೆ ನಡುವೆ ಪೈಪೋಟಿ ಏರ್ಪಡಲಿದೆ.

ಐದನೇ ಕ್ರಮಾಂಕದ ಆಟಗಾರನ ಆಯ್ಕೆ ಕುರಿತು ಕೆಎಲ್ ರಾಹುಲ್ ಹೇಳಿದ್ದಿಷ್ಟು
ಅಜಿಂಕ್ಯ ರಹಾನೆ ಅಥವಾ ಶ್ರೇಯಸ್ ಅಯ್ಯರ್ ಇಬ್ಬರಲ್ಲಿ ಯಾವ ಆಟಗಾರನನ್ನು ಆಯ್ಕೆ ಮಾಡಲಾಗುತ್ತದೆ ಎಂಬುದರ ಕುರಿತು ಪ್ರತಿಕ್ರಿಯಿಸಿರುವ ಕೆಎಲ್ ರಾಹುಲ್ ಇಬ್ಬರ ಪರವಾಗಿಯೂ ಮಾತನಾಡಿದ್ದಾರೆ. ಆದರೆ ಅಜಿಂಕ್ಯಾ ರಹಾನೆ ತಂಡದ ಪ್ರಮುಖ ಆಟಗಾರ ಎಂದು ಉಲ್ಲೇಖಿಸಿರುವ ಕೆಎಲ್ ರಾಹುಲ್ ಅಜಿಂಕ್ಯ ರಹಾನೆ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದಂತಿದೆ.
ಅಜಿಂಕ್ಯ ರಹಾನೆ ಕಳೆದ ಆಸ್ಟ್ರೇಲಿಯಾ ಪ್ರವಾಸದ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು ಹಾಗೂ ಹಲವಾರು ವರ್ಷಗಳಿಂದ ಟೀಮ್ ಇಂಡಿಯಾ ಪರ ರಹಾನೆ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿರುವ ಪ್ರಮುಖ ಆಟಗಾರ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
ಇನ್ನು ಶ್ರೇಯಸ್ ಅಯ್ಯರ್ ಕುರಿತಾಗಿ ಕೂಡಾ ಮಾತನಾಡಿರುವ ಕೆ ಎಲ್ ರಾಹುಲ್ ಇತ್ತೀಚೆಗಷ್ಟೇ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಅಯ್ಯರ್ ಶತಕ ಬಾರಿಸಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಹನುಮ ವಿಹಾರಿ ಕೂಡ ಇದೇ ದಕ್ಷಿಣ ಆಫ್ರಿಕಾ ನೆಲದಲ್ಲಿ ಇತ್ತೀಚೆಗಷ್ಟೇ ನಡೆದ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಸರಣಿಯಲ್ಲಿ ಸತತ 3 ಅರ್ಧಶತಕಗಳನ್ನು ಬಾರಿಸುವ ಮೂಲಕ ಫಾರ್ಮ್ ಕಂಡುಕೊಂಡಿದ್ದಾರೆ. ಹೀಗಾಗಿ ಈ ಮೂವರ ನಡುವೆ ಯಾವ ಆಟಗಾರನನ್ನು ಐದನೇ ಕ್ರಮಾಂಕಕ್ಕೆ ಆಯ್ಕೆ ಮಾಡಬೇಕು ಎಂಬುದನ್ನು ಶೀಘ್ರದಲ್ಲಿಯೇ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ ಇಂದು ಕೆಎಲ್ ರಾಹುಲ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications