ಭಾರತ vs ದ.ಆಫ್ರಿಕಾ ಚೊಚ್ಚಲ ಟೆಸ್ಟ್: ಮೊದಲೆರಡು ದಿನ ಅನುಮಾನ, ಆರಂಭಕ್ಕೂ ಮುನ್ನ 2 ಕಹಿಸುದ್ದಿ!

ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಮತ್ತು 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟ ನಡೆಸಲಿದೆ. ಇನ್ನು ಟೀಮ್ ಇಂಡಿಯಾ ತವರು ನೆಲದಲ್ಲಿ ಇತ್ತೀಚೆಗಷ್ಟೇ ನಡೆದ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಗಳನ್ನಾಡಿ ಎರಡೂ ಸರಣಿಗಳಲ್ಲಿಯೂ ಜಯ ಸಾಧಿಸಿತ್ತು. ಹೀಗೆ ನ್ಯೂಜಿಲೆಂಡ್ ವಿರುದ್ಧ ಗೆದ್ದು ಜಯದ ಅಲೆಯಲ್ಲಿ ತೇಲುತ್ತಿರುವ ಟೀಮ್ ಇಂಡಿಯಾ ಇದೀಗ ಹರಿಣಗಳ ನೆಲದಲ್ಲಿಯೂ ಕೂಡ ಜಯದ ಬಾವುಟವನ್ನು ಹಾರಿಸುವ ಯೋಜನೆಯಲ್ಲಿದೆ.
ಇತ್ತಂಡಗಳ ನಡುವೆ ಮೊದಲಿಗೆ ಟೆಸ್ಟ್ ಸರಣಿ ನಡೆಯಲಿದೆ, ಬಿಸಿಸಿಐ ದಕ್ಷಿಣ ಆಫ್ರಿಕಾ ವಿರುದ್ಧದ ಈ ಟೆಸ್ಟ್ ಸರಣಿಗೆ 18 ಆಟಗಾರರ ತಂಡವನ್ನು ಪ್ರಕಟಿಸಿದ್ದು ಕಳೆದ ಡಿಸೆಂಬರ್ 16ರಂದೇ ಟೀಮ್ ಇಂಡಿಯಾ ಆಟಗಾರರ ತಂಡ ದಕ್ಷಿಣ ಆಫ್ರಿಕಾವನ್ನು ತಲುಪಿದ್ದು ಈಗಾಗಲೇ 1 ದಿನದ ಕ್ವಾರಂಟೈನ್ ಮುಗಿಸಿ ಅಭ್ಯಾಸಗಳಲ್ಲಿ ತೊಡಗಿಕೊಂಡಿದೆ. ಹೌದು, ದಕ್ಷಿಣ ಆಫ್ರಿಕಾದಲ್ಲಿ ಕೊರೋನಾವೈರಸ್ ಮತ್ತು ಒಮಿಕ್ರಾನ್ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಆಟಗಾರರನ್ನು ಪರೀಕ್ಷೆ ನಡೆಸಿ ನಂತರವಷ್ಟೇ ಮೈದಾನ ಪ್ರವೇಶಿಸಲು ಅವಕಾಶ ನೀಡಲಾಯಿತು.
ಇನ್ನು ಎಲ್ಲಾ ಯೋಜನೆಯ ಪ್ರಕಾರವೇ ನಡೆದಿದ್ದರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಪ್ರಥಮ ಪಂದ್ಯ ಡಿಸೆಂಬರ್ 17ರಿಂದ ಆರಂಭವಾಗಬೇಕಿತ್ತು. ಅದರೆ ಒಮಿಕ್ರಾನ್ ವೈರಸ್ ಕಾರಣದಿಂದಾಗಿ 9 ದಿನಗಳು ತಡವಾಗಿ ಇತ್ತಂಡಗಳ ನಡುವಿನ ಟೆಸ್ಟ್ ಸರಣಿ ಆರಂಭವಾಗುತ್ತಿದ್ದು ಡಿಸೆಂಬರ್ 26ರಂದು ಪ್ರಥಮ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಹೀಗೆ ವೈರಸ್ ಭೀತಿ ಪಂದ್ಯ ತಡವಾಗಿ ಆರಂಭವಾಗುವುದಕ್ಕೆ ಕಾರಣವಾಗಿದ್ದು ಮಾತ್ರವಲ್ಲದೇ ಇತ್ತಂಡಗಳ ನಡುವೆ ನಡೆಯಬೇಕಿದ್ದ ಟಿ ಟ್ವೆಂಟಿ ಸರಣಿ ರದ್ದಾಗುವುದರಲ್ಲಿಯೂ ಕೂಡ ಪ್ರಭಾವ ಬೀರಿತ್ತು. ಹೀಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಗಳ ಮೇಲೆ ವೈರಸ್ ಕಂಟಕವಾಗಿ ಪರಿಣಮಿಸಿದ್ದರೆ, ಇದೀಗ ಆಯೋಜನೆಯಾಗಿರುವ ಟೆಸ್ಟ್ ಸರಣಿ ಕುರಿತು 2 ಕಹಿಸುದ್ದಿಗಳು ಹೊರಬಿದ್ದಿವೆ. ಅವುಗಳ ವಿವರ ಈ ಕೆಳಕಂಡಂತಿದೆ..

ಸೆಂಚುರಿಯನ್ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ
ಭಾರತ ಮತ್ತು ದಕ್ಷಿಣ ಆಫ್ರಿಕ ತಂಡಗಳ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯ ಡಿಸೆಂಬರ್ 26ರಂದು ಆರಂಭವಾಗಲಿದ್ದು ಈ ಪಂದ್ಯ ಸೆಂಚುರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾಗೂ ಈ ಪಂದ್ಯದ ಕುರಿತಾಗಿ ವೆದರ್ ಚಾನಲ್ ಮತ್ತು ಅಕ್ಯೂವೆದರ್ ವರದಿ ಮಾಡಿದ್ದು ಮೊದಲೆರಡು ದಿನ ಭಾರೀ ಮಳೆಯಾಗಲಿದ್ದು ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ ಮೊದಲೆರಡು ದಿನ ಸೆಂಚುರಿಯನ್ ನಗರದಲ್ಲಿ ತೀವ್ರವಾದ ಮೋಡ ಕವಿದ ವಾತಾವರಣವಿರಲಿದ್ದು ಗುಡುಗು ಮತ್ತು ಮಿಂಚು ಇರಲಿದೆ ಹಾಗೂ ಮಳೆಯಾಗುವ ಸಾಧ್ಯತೆ ಶೇ.60ಕ್ಕೂ ಹೆಚ್ಚಿದೆ. ಈ ಮೂಲಕ ವೈರಸ್ ಒತ್ತಡದ ನಡುವೆಯೂ ಆಯೋಜಿಸಲಾಗಿರುವ ಚೊಚ್ಚಲ ಪಂದ್ಯದ ಮೊದಲೆರಡು ದಿನ ಮಳೆಗೆ ಆಹುತಿಯಾಗುವ ಸಾಧ್ಯತೆಗಳಿವೆ.

ಚೊಚ್ಚಲ ಟೆಸ್ಟ್ ಕುರಿತು ಮತ್ತೊಂದು ಬೇಸರದ ಸುದ್ದಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಬಹುದು ಎಂಬ ವರದಿ ಹಿನ್ನಡೆಯನ್ನುಂಟು ಮಾಡಿದ್ದರೆ ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಈ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡುವುದಿಲ್ಲ ಎಂಬ ನಿರ್ಧಾರವನ್ನು ಕೈಗೊಂಡಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಈ ನಿರ್ಧಾರವನ್ನು ಕೈಗೊಂಡಿದ್ದು, ಸದ್ಯ ಈ ಪಂದ್ಯ ಪ್ರೇಕ್ಷಕರಿಲ್ಲದೇ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇಷ್ಟೇ ಅಲ್ಲದೇ ವಿರಾಟ್ ಕೊಹ್ಲಿ ಪಡೆಗೆ ಇದೆ ಮತ್ತೊಂದು ಸಮಸ್ಯೆ
ಮಳೆ ಮತ್ತು ಪ್ರೇಕ್ಷಕರ ಅನುಪಸ್ಥಿತಿ ವಿರಾಟ್ ಕೊಹ್ಲಿ ಪಡೆಗೆ ಅನನುಕೂಲವಾಗಿ ಪರಿಣಮಿಸಿದ್ದರೆ ಇದರ ಜೊತೆಗೆ ಸೆಂಚುರಿಯನ್ ಕ್ರೀಡಾಂಗಣದ ಪಿಚ್ ಮತ್ತೊಂದು ಸಮಸ್ಯೆಯಾಗಿ ತಲೆದೋರಿದೆ. ಹೌದು, ಪಿಚ್ ಮೇಲೆ ಹುಲ್ಲಿನ ಪ್ರಮಾಣ ಹೆಚ್ಚಿರುವುದು ಸದ್ಯ ಟೀಮ್ ಇಂಡಿಯಾ ಆಟಗಾರರಿಗೆ ತಲೆನೋವಾಗಿ ಪರಿಣಮಿಸಿದ್ದು ಅಭ್ಯಾಸ ನಡೆಸಲು ಮೈದಾನಕ್ಕೆ ಇಳಿದ ಆಟಗಾರರು ಸ್ಕ್ರೀಸ್ ಮೇಲೆ ಹುಲ್ಲಿನ ಪ್ರಮಾಣವನ್ನು ಕಂಡು ತಬ್ಬಿಬ್ಬಾಗಿದ್ದಾರೆ. ಹೀಗೆ ಸೆಂಚುರಿಯನ್ ಕ್ರೀಡಾಂಗಣದ ಗ್ರೀನ್ ಪಿಚ್ ಮಳೆಯ ನಂತರ ಟೀಮ್ ಇಂಡಿಯಾಗೆ ಮತ್ತಷ್ಟು ಕಠಿಣವಾಗಿ ಪರಿಣಮಿಸುವ ಸಾಧ್ಯತೆಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications