ಭಾರತ vs ದ.ಆಫ್ರಿಕಾ: ಸೆಂಚುರಿಯನ್ ಟೆಸ್ಟ್ ಗೆದ್ದ ಬೆನ್ನಲ್ಲೇ ಭಾರತಕ್ಕೆ ಕಹಿ ಸುದ್ದಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಿನ್ನೆಯಷ್ಟೇ ಮುಕ್ತಾಯವಾಗಿರುವ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 113 ರನ್‌ಗಳ ಬೃಹತ್ ಜಯವನ್ನು ಸಾಧಿಸುವುದರ ಮೂಲಕ ದಾಖಲೆ ಬರೆದಿದೆ.
ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಸೆಂಚುರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ ಅವರ ನೆಲದಲ್ಲಿಯೇ ಸೋಲುಣಿಸಿರುವ ಟೀಮ್ ಇಂಡಿಯಾ ಪಂದ್ಯದಲ್ಲಿ 113 ರನ್‌ಗಳ ಬೃಹತ್ ಜಯವನ್ನು ಸಾಧಿಸಿದೆ. ಈ ಗೆಲುವಿನ ಮೂಲಕ ಐತಿಹಾಸಿಕ ದಾಖಲೆಯೊಂದನ್ನು ಬರೆದಿರುವ ಟೀಮ್ ಇಂಡಿಯಾ ಸೆಂಚುರಿಯನ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಏಷ್ಯಾಖಂಡದ ಚೊಚ್ಚಲ ತಂಡ ಎಂಬ ಖ್ಯಾತಿಗೆ ಭಾಜನವಾಗಿದೆ.
ಹೀಗೆ ಇದುವರೆಗೂ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಸೆಂಚೂರಿಯನ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯವನ್ನಾಡಿದ್ದ ಏಷ್ಯಾ ಖಂಡದ ಯಾವುದೇ ಕ್ರಿಕೆಟ್ ತಂಡ ಕೂಡ ಜಯವನ್ನು ಸಾಧಿಸಿರಲಿಲ್ಲ. ಆದರೆ ಇದೀಗ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಸೆಂಚೂರಿಯನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಏಷ್ಯಾ ಖಂಡದ ಪರ ನೂತನ ದಾಖಲೆಯನ್ನು ಬರೆದಿದೆ. ಅಷ್ಟೇ ಅಲ್ಲದೆ ಈ ಹಿಂದೆ 2 ಬಾರಿ ಸೆಂಚುರಿಯನ್ ಕ್ರೀಡಾಂಗಣದಲ್ಲಿ ಕಣಕ್ಕಿಳಿದು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯವನ್ನಾಡಿದ್ದ ಟೀಮ್ ಇಂಡಿಯಾ ಎರಡೂ ಪಂದ್ಯಗಳಲ್ಲಿಯೂ ಜಯ ಸಾಧಿಸಲಾಗದೇ ಹಿನ್ನಡೆ ಅನುಭವಿಸಿತ್ತು. ಈ ಮೂಲಕ ಮೂರನೇ ಬಾರಿಗೆ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ಜಯ ಸಾಧಿಸುವುದರ ಮೂಲಕ ಕೆಟ್ಟ ದಾಖಲೆಗೆ ಬ್ರೇಕ್ ಹಾಕಿದೆ.

ಗೆಲುವಿನ ಸಂಭ್ರಮದಲ್ಲಿದ್ದ ಟೀಮ್ ಇಂಡಿಯಾಗೆ ಹಿನ್ನಡೆ
ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ ಈ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿದ್ದ ಖುಷಿಯಲ್ಲಿದ್ದ ಟೀಮ್ ಇಂಡಿಯಾಗೆ ಇದೀಗ ಹಿನ್ನಡೆಯುಂಟಾಗಿದೆ. ಹೌದು ಭಾರತ ಐತಿಹಾಸಿಕ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣದಿಂದಾಗಿ 1 ವಿಶ್ವ ಟೆಸ್ಟ್ ಚಾಂಪಿಯನ್ ಅಂಕವನ್ನು ಕಳೆದುಕೊಂಡಿದೆ.

ಅಂಕದ ಜತೆ ಸಂಭಾವನೆಯಲ್ಲಿಯೂ ಕಡಿತ
ಆರ್ಟಿಕಲ್ 16.11ರ ಪ್ರಕಾರ ಒಂದು ದಿನದಲ್ಲಿ ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚು ಸಮಯ ಬೌಲಿಂಗ್ ಮಾಡಿದರೆ ಆ ತಂಡಕ್ಕೆ 1 ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕ ಕಡಿತ ಹಾಗೂ ಆಟಗಾರರ ಸಂಭಾವನೆಯಲ್ಲಿ ಶೇ. 20ರಷ್ಟು ಕಡಿತಗೊಳಿಸಲಾಗುತ್ತದೆ. ಅದೇ ರೀತಿ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿರುವ ಟೀಮ್ ಇಂಡಿಯಾಕ್ಕೆ ಐಸಿಸಿ ದಂಡವನ್ನು ವಿಧಿಸಿದೆ.

ಮೂರು ಅಂಕಗಳನ್ನು ಕಳೆದುಕೊಂಡು ಟೀಮ್ ಇಂಡಿಯಾ
ಈ ಪಂದ್ಯ ಆರಂಭವಾಗುವುದಕ್ಕೂ ಮುನ್ನ 2 ಅಂಕಗಳನ್ನು ನಿಧಾನಗತಿಯ ಬೌಲಿಂಗ್ ಮಾಡಿ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಇದೀಗ ಮತ್ತೊಂದು ಅಂಕವನ್ನು ಕಳೆದುಕೊಂಡು ಒಟ್ಟು 3 ಅಂಕಗಳನ್ನು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ ಕಳೆದುಕೊಂಡಿದೆ. ಇಲ್ಲಿಯವರೆಗೂ 4 ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ 53 ಅಂಕಗಳನ್ನು ಪಡೆದುಕೊಂಡಿದ್ದು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಇನ್ನು ಈ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ 3 ಅಂಕಗಳನ್ನು ನಿಧಾನಗತಿಯ ಬೌಲಿಂಗ್ ಮಾಡುವ ಮೂಲಕ ಕಳೆದುಕೊಂಡಿದ್ದರೆ ಇಂಗ್ಲೆಂಡ್ 10 ಅಂಕಗಳನ್ನು ನಿಧಾನಗತಿಯ ಬೌಲಿಂಗ್ ಮಾಡುವ ಮೂಲಕ ಕಳೆದುಕೊಂಡಿದೆ. ಈ ಎರಡು ತಂಡಗಳನ್ನು ಹೊರತುಪಡಿಸಿ ಬೇರೆ ಯಾವುದೇ ತಂಡಗಳೂ ಕೂಡ ನಿಧಾನಗತಿಯ ಬೌಲಿಂಗ್ ಮಾಡಿ ಅಂಕಗಳನ್ನು ಕಳೆದುಕೊಂಡಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications