ಭಾರತ vs ದ.ಆಫ್ರಿಕಾ: ರೋಹಿತ್ ಇಲ್ಲದೇ ನಾಯಕ, ಉಪನಾಯಕನ ಪಟ್ಟ ಯಾರ ಪಾಲಾಗಲಿದೆ?

ಸದ್ಯ ಮುಂಬೈ ನಗರ ತಲುಪಿ ಕ್ವಾರಂಟೈನ್ ನಿಯಮವನ್ನು ಅನುಸರಿಸುತ್ತಿರುವ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದೆ. ಹೌದು, ಇತ್ತೀಚಿಗಷ್ಟೆ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಮತ್ತು ಟೆಸ್ಟ್ ಎರಡೂ ಸರಣಿಗಳಲ್ಲಿಯೂ ಜಯ ಸಾಧಿಸಿ ಬೀಗಿರುವ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದ್ದು ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟವನ್ನು ನಡೆಸಲಿದೆ.
ಇನ್ನು ಕಳೆದ ಡಿಸೆಂಬರ್ 8ರಂದು ಬಿಸಿಸಿಐ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿರುವ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಿತ್ತು. ಹಾಗೂ ಬಿಸಿಸಿಐ ಪ್ರಕಟಿಸಿದ್ದ ಈ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಯೊಂದಾಗಿದ್ದು, ಉಪನಾಯಕನ ಸ್ಥಾನಕ್ಕೆ ಅಜಿಂಕ್ಯ ರಹಾನೆ ಬದಲು ರೋಹಿತ್ ಶರ್ಮಾ ಅವರ ಹೆಸರನ್ನು ನೇಮಿಸಲಾಗಿತ್ತು. ಹೌದು, ಕಳೆದೆರಡು ವರ್ಷಗಳಿಂದ ಸತತವಾಗಿ ವಿಫಲತೆಯನ್ನು ಅನುಭವಿಸುತ್ತಾ ಬಂದಿರುವ ಅಜಿಂಕ್ಯ ರಹಾನೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ಉಪನಾಯಕನ ಸ್ಥಾನವನ್ನು ಕಳೆದುಕೊಂಡು ಕೇವಲ ಆಟಗಾರನಾಗಿ ಮಾತ್ರ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇತ್ತೀಚೆಗಷ್ಟೇ ಮುಕ್ತಾಯವಾದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ರೋಹಿತ್ ಶರ್ಮಾ ಈ ದಕ್ಷಿಣ ಆಫ್ರಿಕಾ ಪ್ರವಾಸದ ಮೂಲಕ ಭಾರತ ಏಕದಿನ ತಂಡದ ನಾಯಕನ ಸ್ಥಾನ ಮತ್ತು ಭಾರತ ಟೆಸ್ಟ್ ತಂಡದ ಉಪನಾಯಕನ ಸ್ಥಾನವನ್ನು ಕೂಡ ಗಿಟ್ಟಿಸಿಕೊಂಡರು.
ಈ ಮೂಲಕ ಭಾರತ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕನಾಗಿ ಉಳಿದುಕೊಂಡರೆ ಉಪನಾಯಕ ಸ್ಥಾನಕ್ಕೆ ರೋಹಿತ್ ಶರ್ಮಾ ಆಯ್ಕೆಯಾದರು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಶರದ್ ಪವಾರ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ರೋಹಿತ್ ಶರ್ಮಾ ಕೈಗೆ ಚೆಂಡು ಬಲವಾಗಿ ಬಡಿದ ಕಾರಣ ಗಾಯಕ್ಕೊಳಗಾದ ರೋಹಿತ್ ಶರ್ಮಾ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ವಿಶ್ರಾಂತಿಗೆಂದು ಹೊರಗುಳಿದಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಯಾರು ಉಪನಾಯಕನ ಸ್ಥಾನ ವಹಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದ್ದು, ಈ ಕುರಿತು ಬಲ್ಲ ಮೂಲಗಳು ತಿಳಿಸಿರುವ ಮಾಹಿತಿ ಈ ಕೆಳಕಂಡಂತಿದೆ..

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಹೆಗಲಿಗೆ ಉಪನಾಯಕನ ಜವಾಬ್ದಾರಿ
ಸದ್ಯ ಗಾಯದ ಸಮಸ್ಯೆಗೆ ಒಳಗಾಗಿರುವ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದು, ಕನ್ನಡಿಗ ಕೆಎಲ್ ರಾಹುಲ್ ಉಪನಾಯಕನಾಗುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಅಜಿಂಕ್ಯ ರಹಾನೆಯಿಂದ ಇತ್ತೀಚೆಗಷ್ಟೇ ಬಿಸಿಸಿಐ ಟೆಸ್ಟ್ ಉಪನಾಯಕನ ಸ್ಥಾನವನ್ನು ಕಸಿದುಕೊಂಡಿರುವುದರಿಂದ ಈ ಒಂದು ಸರಣಿಗೆ ಮಾತ್ರ ಮತ್ತೆ ಅಜಿಂಕ್ಯ ರಹಾನೆಯನ್ನು ಉಪನಾಯಕನನ್ನಾಗಿ ನೇಮಿಸುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು ಕೆಎಲ್ ರಾಹುಲ್ ಉಪ ನಾಯಕನ ಜವಾಬ್ದಾರಿಯನ್ನು ಹೊರುವುದು ಬಹುತೇಕ ಖಚಿತ ಎನ್ನಬಹುದು.

ಏಕದಿನ ಸರಣಿಗೂ ರೋಹಿತ್ ಅಲಭ್ಯರಾದರೆ ನಾಯಕ ಯಾರಾಗಲಿದ್ದಾರೆ?
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಏಕದಿನ ಸರಣಿ ಸಮಯಕ್ಕೆ ಚೇತರಿಸಿಕೊಂಡು ತಂಡ ಸೇರಿದರೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವೇನಿಲ್ಲ. ಆದರೆ ಒಂದುವೇಳೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಸಮಯಕ್ಕೂ ರೋಹಿತ್ ಶರ್ಮಾ ಚೇತರಿಸಿಕೊಳ್ಳದೇ ಇದ್ದರೆ ಭಾರತ ಏಕದಿನ ತಂಡಕ್ಕೆ ತಾತ್ಕಾಲಿಕ ನಾಯಕನನ್ನು ನೇಮಿಸಬೇಕಾದ ತಲೆನೋವು ಬಿಸಿಸಿಐ ಆಯ್ಕೆಗಾರರಿಗೆ ಬಂದೊದಗಲಿದೆ. ಸದ್ಯ ಇತ್ತೀಚೆಗಷ್ಟೇ ಏಕದಿನ ನಾಯಕತ್ವವನ್ನು ಕಳೆದುಕೊಂಡಿರುವ ವಿರಾಟ್ ಕೊಹ್ಲಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಾತ್ಕಾಲಿಕ ನಾಯಕನನ್ನಾಗಿ ರೋಹಿತ್ ಇಲ್ಲದೇ ಇರುವ ಕಾರಣಕ್ಕಾಗಿ ನೇಮಿಸುವುದು ದೂರದ ಮಾತು. ಹೀಗಾಗಿ ರೋಹಿತ್ ಅಲಭ್ಯರಾದರೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಯಾರಿಗಿದೆ ಎಂಬುದು ಇದೀಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ನಾನು ಸಿದ್ಧ ಎಂದ ಕೊಹ್ಲಿ
ರೋಹಿತ್ ಶರ್ಮಾ ಗಾಯದ ಸಮಸ್ಯೆಯನ್ನು ಹೇಳಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ವೈಯಕ್ತಿಕ ಕಾರಣಗಳನ್ನು ನೀಡಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ವಿಶೇಷವಾಗಿ ಸುದ್ದಿಗೋಷ್ಠಿಯನ್ನು ನಡೆಸಿರುವ ವಿರಾಟ್ ಕೊಹ್ಲಿ ಈ ಎಲ್ಲಾ ಸುದ್ದಿಗಳಿಗೂ ತೆರೆ ಎಳೆದಿದ್ದು ತಾನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಸಿದ್ಧನಿದ್ದೇನೆ ಮತ್ತು ಇದನ್ನು ಬಿಸಿಸಿಐಗೂ ಕೂಡ ತಿಳಿಸಿದ್ದೇನೆ ಎಂದು ಹೇಳಿಕೆಯನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications