
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 26ರಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಆದರೆ ಈ ಟೆಸ್ಟ್ ಸರಣಿಯನ್ನು ಪ್ರೇಕ್ಷಕರಿಲ್ಲದೆ ಆಯೋಜಿಸಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ನಿರ್ಧಾರ ಮಾಡಿದೆ. ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆಯನ್ನು ಕೂಡ ಕ್ರಿಕೆಟ್ ಸೌತ್ ಆಫ್ರಿಕಾ ಹೊರಡಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್‌ನ ಹಾವಳಿ ಅತಿಯಾಗಿದೆ. ಅದರಲ್ಲೂ ಹೊಸ ರೂಪಾಂತರಿ ಒಮೈಕ್ರಾನ್ ದಕ್ಷಿಣ ಆಫ್ರಿಕಾದಲ್ಲಿ ಸಾಕಷ್ಟು ಆತಂಕದ ವಾತಾವರಣವನ್ನುಂಟು ಮಾಡಿದೆ. ಹೀಗಾಗಿ ಮು್ನನೆಚ್ಚರಿಕಾ ಕ್ರಮವಾಗಿ ಪ್ರೇಕ್ಷಕರ ಅಲಭ್ಯತೆಯಲ್ಲಿ ಸರಣಿಯನ್ನು ಆಯೋಜನೆ ಮಾಡಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತೀರ್ಮಾನ ತೆಗೆದುಕೊಂಡಿದೆ. ಈ ಬಗ್ಗೆ ಈ ಮೊದಲೇ ವರದಿಗಳು ಪ್ರಕಟವಾಗಿತ್ತು. ಇದನ್ನು ಮಂಡಳಿ ಕೂಡ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದೆ. ಪ್ರೇಕ್ಷಕರಿಗೆ ಟಿಕೆಟ್ ಹಂಚಿಕೆ ಮಾಡದಿರಲು ಮಂಡಳಿ ನಿರ್ಧರಿಸಿರುವುದಾಗಿ ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯನ್ನು ವೀಕ್ಷಿಸುವ ಟಿಕೆಟ್‌ಗಳು ಲಭ್ಯವಿರುವುದಿಲ್ಲ. ಈ ಪ್ರವಾಸವನ್ನು ಹಾಗೂ ಆಟಗಾರರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಎರಡು ಮಂಡಳಿಗಳು ಕೂಡ ಚರ್ಚಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದೆ" ಎಂದು ಕ್ರಿಕೆಟ್ ಸೌತ್ ಆಫ್ರಿಕಾ ಟ್ವಿಟ್ ಮಾಡಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಗೆ ಕೊರೊನಾವೈರಸ್ ಸಾಕಷ್ಟು ಆತಂಕವನ್ನು ಮೂಡಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ನಾಲ್ಕನೇ ಅಲೆ ಕಾಣಿಸಿಕೊಂಡಿರುವ ಜೊತೆಗೆ ಒಮಿಕ್ರಾನ್ ರೂಪಾಂತರಿಯ ಅಬ್ಬರ ಭಾರೀ ಪ್ರಮಾಣದಲ್ಲಿ ಹರಡಲು ಕಾರಣವಾಗಿದೆ. ಹೀಗಾಗಿ ಆರಂಭದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಂದೂಡುವ ಬಗ್ಗೆ ಆಲೋಚನೆ ಮಾಡಿತ್ತು. ಆದರೆ ಕಾದು ನೋಡಿದ ಬಳಿಕ 9 ದಿನಗಳ ಕಾಲ ಕಾಲ ಸರಣಿಯನ್ನು ಮುಂದೂಡಿ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಮಾತ್ರವೇ ಈ ಪ್ರವಾಸದಲ್ಲಿ ಆಯೋಜಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೊದಲು ನಿರ್ಧರಿಸಿದಂತೆ ಈ ಪ್ರವಾಸದಲ್ಲಿ ಟೆಸ್ಟ್ ಏಕದಿನ ಸರಣಿಯ ಜೊತೆಗೆ ಟಿ20 ಸರಣಿಯಲ್ಲಿಯೂ ಭಾರತ ಭಾಗಿಯಾಗಬೇಕಾಗಿತ್ತು.
ಇದೀಗ ಸರಣಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು ಭಾರತ ತಂಡ ಭರ್ಜರಿಯಾಗಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಟೀಮ್ ಇಂಡಿಯಾದ ಆಟಗಾರರೆಲ್ಲರೂ ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದಾರೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡುವ ಉತ್ಸಾಹದಲ್ಲಿದೆ.
ರೋಹಿತ್ ಶರ್ಮಾ ಅಲಭ್ಯ, ಕೆಎಲ್ ರಾಹುಲ್ ಉಪ ನಾಯಕ: ಇನ್ನು ಈ ಸರಣಿಗೂ ಮುನ್ನ ಭಾರತೀಯ ತಂಡದ ಉಪನಾಯಕನಾಗಿದ್ದ ಅಜಿಂಕ್ಯಾ ರಹಾನೆ ಬದಲಿಗೆ ರೋಹಿತ್ ಶರ್ಮಾ ಅವರನ್ನು ಟೆಸ್ಟ್ ತಂಡದ ಉಪನಾಯಕನನ್ನಾಗಿ ನೇಮಕ ಮಾಡಲಾಗುತ್ತು. ಸೀಮಿತ ಓವರ್‌ಗಳ ನಾಯಕನಾಗಿ ಆಯ್ಕೆಯಾಗಿರುವ ಶರ್ಮಾಗೆ ಟೆಸ್ಟ್ ತಂಡದಲ್ಲಿಯೂ ಮಹತ್ವದ ಜವಾಬ್ಧಾರಿಯನ್ನು ನೀಡಲಾಗಿತ್ತು. ಆದರೆ ಈ ಸರಣಿಗೂ ಮುನ್ನ ಅಭ್ಯಾಸ ಶಿಬಿರದಲ್ಲಿ ರೋಹಿತ್ ಶರ್ಮಾ ಗಾಯಗೊಂಡ ಕಾರಣ ಸರಣಿಗೆ ಅಲಭ್ಯವಾಗಿದ್ದಾರೆ. ಹೀಗಾಗಿ ಈ ಸರಣಿಗೆ ರೋಹಿತ್ ಶರ್ಮಾ ಬದಲಿಗೆ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ತಂಡದ ಉಪ ನಾಯಕನನ್ನಾಗಿ ನೇಮಕ ಮಾಡಲಾಗಿದೆ
ಟೀಮ್ ಇಂಡಿಯಾ ಸ್ಕ್ವಾಡ್: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಿಯಾಂಕ್ ಪಾಂಚಾಲ್
ಮೀಸಲು ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಾಹರ್, ಅರ್ಜನ್ ನಾಗ್ವಾಸ್ವಾಲ್ಲಾ.