
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಮುಂದಿನ ಗುರುವಾರ ನಡೆಯಲಿದ್ದು ಈ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಈ ಪಂದ್ಯವನ್ನು ನೇರವಾಗಿ ಕ್ರೀಡಾಂಗಣದಲ್ಲಿ ವೀಕ್ಷಿಸುವ ಕ್ರಿಕೆಟ್ ಪ್ರೇಮಿಗಳಿಗೆ ಈಗಾಗಲೇ ಟಿಕೆಟ್ ಹಂಚಿಕೆ ಮಾಡಲಾಗಿದ್ದು ಬಹುತೇಕ ಟಿಕೆಟ್‌ಗಳು ಖಾಲಿಯಾಗಿದೆ. ಈ ಪಂದ್ಯದ ಶೇಕಡಾ 94ರಷ್ಟು ಟಿಕೆಟ್‌ಗಳು ಮಾರಾಟವಾಗಿದೆ ಎಂದು ಡಿಡಿಸಿಎ ಮಾಹಿತಿ ನೀಡಿದೆ.
2019ರ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ನಡೆಯಲಿದ್ದು ಇದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಈ ಅದ್ಭುತ ಕ್ಷಣವನ್ನು ಆನಂದಿಸುವುದಕ್ಕಾಗಿ ಡಿಡಿಸಿಎ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದು ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದೆ.
ಟಿಕೆಟ್ ಮಾರಾಟದ ಬಗ್ಗೆ ಡಿಡಿಸಿಎ ಯ ಜಂಟಿ ಕಾರ್ಯದರ್ಶಿರಾಜನ್ ಮಂಚಂಡ ಪಿಟಿಐಗೆ ಪ್ರತಿಕ್ರಿಯಿಸಿದ್ದು "94 ಶೇಕಡಾ ಟಿಕೆಟ್‌ಗಳು ಮಾರಾಟವಾಗಿದೆ. ಇನ್ನು 400-500 ಟಿಕೆಟ್‌ಗಳು ಮಾತ್ರವೇ ಮಾರಾಟಕ್ಕೆ ಬಾಕಿಯಿದೆ" ಎಂದಿದ್ದಾರೆ. ಇನ್ನು ವಾಹನಗಳ ಪಾರ್ಕಿಂಗ್‌ನ ಸ್ಥಳದಿಂದ ಕ್ರೀಡಾಂಗಣಕ್ಕೆ ಆಗಮಿಸಲು ಹಿರಿಯ ನಾಗರೀಕರಿಗಾಗಿ ಗಾಲ್ಫ್ ಕಾರ್ಟ್‌ಗಳ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಈ ಸರಣಿ ಜೂನ್ 9ರಿಂದ ಆರಂಭವಾಗಲಿದೆ. ಐದು ಪಂದ್ಯಗಳ ಟಿ20 ಸರಣಿ ಇದಾಗಿದ್ದು ಐದು ಭಿನ್ನ ತಾಣಗಳಲ್ಲಿ ಈ ಸರಣಿ ಆಯೋಜನೆಯಾಗಲಿದೆ. ಮೊದಲ ಪಂದ್ಯ ಜೂನ್ 9ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದರೆ ಎರಡನೇ ಪಂದ್ಯ ಜೂನ್ 12ರಂದು ಕಟಕ್‌ನಲ್ಲಿ ನಡೆಯಲಿದೆ. ಮೂರನೇ ಪಂದ್ಯ ಜೂನ್ 14ರಂದು ವಿಶಾಖಪಟ್ಟಣಂನಲ್ಲಿ ಆಯೋಜನೆಯಾಗಲಿದೆ. ನಾಲ್ಕನೇ ಪಂದ್ಯ ಜೂನ್ 17ರಂದು ರಾಜ್‌ಕೋಟ್‌ನಲ್ಲಿ ಆಯೋಜನೆಯಾದರೆ ಅಂತಿಮ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಈ ಪಂದ್ಯ ಜೂನ್ 19ರಂದು ನಡೆಯಲಿದೆ.
ಟಿ20 ಸರಣಿಗೆ ಭಾರತ ಸ್ಕ್ವಾಡ್: ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ) (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್
ದಕ್ಷಿಣ ಆಫ್ರಿಕಾ ಟಿ20 ಬಳಗ ಹೀಗಿದೆ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಕ್ ನಾರ್ಕಿಯಾ, ವಾಯ್ನೆ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ಟಬ್ರೈಜ್ ಶಮ್ಸಿ, ಸ್ಟೀಸ್ಟನ್ ಸ್ಟಬ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್