
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದು ಆರಂಭವಾಗಲಿದೆ. ಸೆಂಚೂರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯಲಿರುವ ಈ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಈ ಬಾರಿ ಟೀಮ್ ಇಂಡಿಯಾ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಒಂದೆಡೆಯಾದರೆ ವಿದೇಶಿ ನೆಲದಲ್ಲಿ ಭಾರತ ತಂಡ ಸಾಧಿಸುತ್ತಿರುವ ಯಶಸ್ಸಿನ ನಂತರ ದಕ್ಷಿಣ ಆಫ್ರಿಕಾ ಯಾವ ರೀತಿಯ ಸವಾಲೊಡ್ಡಲಿದೆ ಎಂಬುದು ಕೂಡ ಸರಣಿಯ ಕುತೂಹಲಕಾರಿ ಅಂಶಗಳಲ್ಲಿ ಒಂದಾಗಿದೆ.
ಇನ್ನು ಈ ಸರಣಿ ಎರಡು ಅದ್ಭುತ ಬೌಲಿಂಗ್ ದಾಳಿಯನ್ನು ಹೊಂದಿರುವ ತಂಡಗಳ ನಡುವಿನ ಕದನ ಎಂದೇ ಪರಿಗಣಿಸಲಾಗುತ್ತಿದೆ. ದಕ್ಷಿಣ ಆಫ್ರಿಕಾದ ವೇಗದ ಪಿಚ್‌ನಲ್ಲಿ ಎರಡು ತಂಡಗಳ ಬ್ಯಾಟರ್‌ಗಳಿಗೆ ಕಠಿಣ ಸವಾಲು ಎದುರಾಗುವುದರಲ್ಲಿ ಅನುಮಾನವಿಲ್ಲ. ಇದನ್ನು ಎರಡು ತಂಡಗಳು ಕೂಡ ಯಾವ ರೀತಿಯಾಗಿ ಎದುರಿಸಿ ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದು ಈಗಿನ ಕುತೂಹಲ.
ಇನ್ನು ದಕ್ಷಿಣ ಆಫ್ರಿಕಾದಲ್ಲಿ ಭಾರತ ಈವರೆಗೆ ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಈ ಕೆಟ್ಟ ದಾಖಲೆಯನ್ನು ಅಳಿಸಿಹಾಕಲು ಭಾರತಕ್ಕಿರುವ ಅತ್ಯುತ್ತಮ ಅವಕಾಶ ಎಂದು ಬಣ್ಣಿಸಲಾಗುತ್ತಿದೆ. ವಿದೇಶಿ ನೆಲದಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸುತ್ತಾ ಬಂದಿರುವಾಗ ದಕ್ಷಿಣ ಆಫ್ರಿಕಾದಲ್ಲೂ ಭಾರತದ ಈ ದಿಗ್ವಿಜಯ ಯಾತ್ರೆ ಮುಂದುವರಿಯಲಿದೆ ಎಂಬ ಆತ್ಮ ವಿಶ್ವಾಸ ಭಾರತೀಯ ತಂಡ ಹಾಗೂ ಅಭಿಮಾನಿಗಳಲ್ಲಿದೆ.
ಇನ್ನು ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಸೀಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ ಕಣಕ್ಕಿಳಿಯುತ್ತಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆಸಿದ ಅಭ್ಯಾಸ ಶಿಬಿರದಲ್ಲಿ ರೋಹಿತ್ ಶರ್ಮಾ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಸಂಪೂರ್ಣ ಟೆಸ್ಟ್ ಸರಣಿಯಿಂದ ಅವರು ಹೊರಗುಳಿದಿದ್ದಾರೆ. ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಪ್ರಿಯಾಂಕ್ ಪಾಂಚಾಲ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾದಕ್ಕೂ ಗಾಯದ ಸಮಸ್ಯೆ ಎದುರಾಗಿದೆ. ತಂಡದ ಪ್ರಮುಖ ವೇಗಿ ಅನ್ರಹ್ ನಾರ್ಕಿಯಾ ಗಾಯದ ಕಾರಣದಿಂದಾಗಿ ಈ ಸರಣಿಯಿಂದ ಸಂಪೂರ್ಣ ಹೊರಗುಳಿದಿದ್ದಾರೆ. ಹಾಗಿದ್ದರೂ ಕೂಡ ದಕ್ಷಿಣ ಆಫ್ರಿಕಾದ ಬೌಲಿಂಗ್ ಪಡೆ ಸಾಕಷ್ಟು ಬಲಿಷ್ಠವಾಗಿದ್ದು ಭಾರತಕ್ಕೆ ಸವಾಲೊಡ್ಡಲು ಎದುರುನೋಡುತ್ತಿದೆ.
ತಂಡಗಳು: ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಟೆಂಬಾ ಬವುಮಾ, ಸರೆಲ್ ಎರ್ವೀ, ಕೀಗನ್ ಪೀಟರ್ಸನ್, ಐಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಜಾರ್ಜ್ ಲಿಂಡೆ, ಮಾರ್ಕೊ ಜಾನ್ಸೆನ್, ವಿಯಾನ್ ಮುಲ್ಡರ್, ಪ್ರೆನೆಲನ್ ಸುಬ್ರಾಯೆನ್, ಕ್ವಿಂಟನ್ ಡಿ ಕಾಕ್, ಕೈಲ್ ರ್ವೆರಿನ್ಟನ್, ರಿಯಾನ್ ವೆರೆನ್ಟನ್, ಕಗಿಸೊ ರಬಾಡ, ಬ್ಯೂರಾನ್ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಗ್ಲೆಂಟನ್ ಸ್ಟೌರ್‌ಮನ್, ಸಿಸಂಡಾ ಮಗಾಲಾ, ಡುವಾನ್ನೆ ಒಲಿವಿಯರ್.
ಭಾರತ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯಾ ರಹಾನೆ, ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಶ್ರೇಯಸ್ ಅಯ್ಯರ್, ಪ್ರಿಯಾಂಕ್ ಪಾಂಚಾಲ್, ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್, ರಿಷಭ್ ಪಂತ್, ವೃದ್ಧಿಮಾನ್ ಸಾಹಾ, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್.