
ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದೆ. ಇತ್ತಂಡಗಳ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಈಗಾಗಲೇ 2 ಪಂದ್ಯಗಳು ಮುಗಿದಿದ್ದು ಸೆಂಚೂರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದರೆ, ಜೊಹಾನ್ಸ್ ಬರ್ಗ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿ ದಕ್ಷಿಣ ಆಫ್ರಿಕಾ ಜಯ ಸಾಧಿಸಿತು. ಈ ಮೂಲಕ ಸರಣಿಯಲ್ಲಿ ಇತ್ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸಿದ್ದು 1-1 ಗೆಲುವಿನ ಸಮಬಲವನ್ನು ಸಾಧಿಸಿವೆ. ಹೀಗಾಗಿ ಇತ್ತಂಡಗಳ ನಡುವೆ ಜನವರಿ 11ರಿಂದ ಆರಂಭವಾಗಲಿರುವ ತೃತೀಯ ಟೆಸ್ಟ್ ಪಂದ್ಯದ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ.
ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸರಣಿಯಲ್ಲಿ ಸಮಬಲ ಸಾಧಿಸಿರುವ ಕಾರಣದಿಂದ ಇತ್ತಂಡಗಳ ನಡುವೆ ನಡೆಯಲಿರುವ ತೃತೀಯ ಟೆಸ್ಟ್ ಪಂದ್ಯ ಸರಣಿಯಲ್ಲಿ ಯಾರು ವಿಜೇತರು ಎಂಬುದನ್ನು ತೀರ್ಮಾನಿಸಲಿದೆ. ಹೀಗಾಗಿ ಇತ್ತಂಡಗಳ ನಡುವೆ ನಡೆಯಲಿರುವ ತೃತೀಯ ಟೆಸ್ಟ್ ಪಂದ್ಯ ದೊಡ್ಡ ಮಟ್ಟದ ಕುತೂಹಲಕ್ಕೆ ಕಾರಣವಾಗಿದ್ದು ಕೇಪ್ ಟೌನ್ ನಗರದ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಜನವರಿ 11ರ ಮಂಗಳವಾರದಂದು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.
ಇನ್ನು ಗಾಯದ ಸಮಸ್ಯೆಗೆ ಒಳಗಾಗಿದ್ದ ವಿರಾಟ್ ಕೊಹ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಜೊಹಾನ್ಸ್ ಬರ್ಗ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಹೀಗಾಗಿ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದರು. ಹೀಗೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯದೇ ಇದ್ದ ವಿರಾಟ್ ಕೊಹ್ಲಿ ಇದೀಗ ಚೇತರಿಸಿಕೊಂಡಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ತಾನು ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಮೊಹಮ್ಮದ್ ಸಿರಾಜ್ ಅಲಭ್ಯರಾಗಲಿದ್ದಾರೆ ಎಂಬ ವಿಷಯವನ್ನು ತಿಳಿಸಿದರು.
ಇನ್ನು ವಿರಾಟ್ ಕೊಹ್ಲಿ ತೃತೀಯ ಟೆಸ್ಟ್ ಪಂದ್ಯದ ಮೂಲಕ ತಂಡಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ ಯಾವ ಆಟಗಾರ ಸ್ಥಾನವನ್ನು ಬಿಟ್ಟು ಕೊಡಲಿದ್ದಾರೆ ಎಂಬ ಚರ್ಚೆಗಳು ನಡೆದಿದ್ದು, ಕಳೆದ ಪಂದ್ಯದಲ್ಲಿ ಕೊಹ್ಲಿ ಬದಲು ತಂಡದಲ್ಲಿ ಸ್ಥಾನ ಪಡೆದಿದ್ದ ಹನುಮ ವಿಹಾರಿ ಕೊಹ್ಲಿಗೆ ಸ್ಥಾನ ಬಿಟ್ಟುಕೊಡಲಿದ್ದಾರಾ ಅಥವಾ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಈ ಇಬ್ಬರಲ್ಲಿ ಒಬ್ಬರು ಸ್ಥಾನ ಬಿಟ್ಟುಕೊಡಲಿದ್ದಾರಾ ಎಂಬ ಚರ್ಚೆಗಳು ನಡೆಯುತ್ತಿವೆ.
ಕಳೆದ ಪಂದ್ಯದ ಸಮಯದಲ್ಲಿ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಚೇತೇಶ್ವರ್ ಪೂಜಾರ ಪರ ಬ್ಯಾಟ್ ಬೀಸಿತ್ತು. ಹಾಗೂ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ತಲಾ ಒಂದೊಂದು ಅರ್ಧಶತಕ ಸಿಡಿಸುವುದರ ಮೂಲಕ ಜವಾಬ್ದಾರಿಯುತ ಆಟವನ್ನಾಡಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ಮತ್ತು ಟೀಮ್ ಇಂಡಿಯಾ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಹನುಮ ವಿಹಾರಿಯೇ ಸ್ಥಾನ ಬಿಟ್ಟುಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಮೊಹಮ್ಮದ್ ಸಿರಾಜ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದು, ಸಿರಾಜ್ ಸ್ಥಾನಕ್ಕೆ ಇಶಾಂತ್ ಶರ್ಮ ಬದಲು ಉಮೇಶ್ ಯಾದವ್ ಆಯ್ಕೆಯಾಗಲಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಇಶಾಂತ್ ಶರ್ಮಾಗಿಂತ ಉಮೇಶ್ ಯಾದವ್ ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡಿದ್ದು ಈ ಪಂದ್ಯದಲ್ಲಿ ಅವಕಾಶ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾದ ಸಂಭಾವ್ಯ ಆಟಗಾರರು: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್