ದ.ಆಫ್ರಿಕಾದ ಆ ಮೂವರನ್ನು ಬಿಟ್ಟರೆ ಯಾರೂ ಚೆನ್ನಾಗಿ ಆಡುತ್ತಿಲ್ಲ, ಗೆಲುವು ಭಾರತದ್ದೇ ಎಂದ ಮಾಜಿ ಕ್ರಿಕೆಟಿಗ

ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಹರಿಣಗಳ ವಿರುದ್ಧ ನಡೆದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 113 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸುವುದರ ಮೂಲಕ ಐತಿಹಾಸಿಕ ಜಯವನ್ನು ಸಾಧಿಸಿದೆ. ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಸೆಂಚುರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನೂ ಒಂದೂವರೆ ಸೆಷನ್ ಬಾಕಿ ಇರುವಾಗಲೇ ಭರ್ಜರಿ ಗೆಲುವು ಸಾಧಿಸಿದೆ.
ಸೆಂಚುರಿಯನ್ ಅಂಗಳದಲ್ಲಿ ಈ ದೊಡ್ಡ ಗೆಲುವು ಸಾಧಿಸುವುದರ ಮೂಲಕ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಬೃಹತ್ ದಾಖಲೆಯನ್ನು ಕೂಡ ಮಾಡಿದೆ. ಸೆಂಚುರಿಯನ್ ಅಂಗಳದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಏಷ್ಯಾದ ಮೊದಲ ಕ್ರಿಕೆಟ್ ತಂಡ ಎಂಬ ದಾಖಲೆಯನ್ನು ಟೀಮ್ ಇಂಡಿಯಾ ತನ್ನ ಹೆಸರಿಗೆ ಬರೆದುಕೊಂಡಿದೆ. ಈ ಟೆಸ್ಟ್ ಪಂದ್ಯ ಆರಂಭವಾಗುವ ಮುನ್ನ ಸೆಂಚುರಿಯನ್ ಅಂಗಳದಲ್ಲಿ ಗೆಲ್ಲುವುದು ಕಷ್ಟ ಎಂದೇ ಹಲವಾರು ಮಾಜಿ ಕ್ರಿಕೆಟಿಗರು ಭಾವಿಸಿದ್ದರು. ಆದರೆ ಈ ಎಲ್ಲಾ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿರುವ ಟೀಮ್ ಇಂಡಿಯಾ ಗಬ್ಬಾ, ಓವೆಲ್, ಲಾರ್ಡ್ಸ್ ಕ್ರೀಡಾಂಗಣಗಳಲ್ಲಿ ಸಾಧಿಸಿದ್ದ ತನ್ನ ಭರ್ಜರಿ ಗೆಲುವನ್ನು ಸೆಂಚುರಿಯನ್ ಅಂಗಳದಲ್ಲಿಯೂ ಕೂಡ ಮರುಕಳಿಸಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆಎಲ್ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹಾಗೂ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಮೊದಲನೇ ಇನ್ನಿಂಗ್ಸ್‌ನಲ್ಲಿ 5 ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆಯುವುದರ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಹೀಗೆ ಟೀಮ್ ಇಂಡಿಯಾ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿಯೂ ನೀಡಿದ ಉತ್ತಮ ಪ್ರದರ್ಶನದಿಂದ ಟೀಂ ಇಂಡಿಯಾ ಈ ಐತಿಹಾಸಿಕ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಟೀಮ್ ಇಂಡಿಯಾದ ಈ ಬೃಹತ್ ಗೆಲುವಿನ ನಂತರ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಈ ಟೆಸ್ಟ್ ಸರಣಿಯಲ್ಲಿ ಯಾವ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲಿದೆ ಎಂಬುದರ ಕುರಿತು ಚರ್ಚೆಗಳು ಹೆಚ್ಚಾಗಿದ್ದು ಭಾರತದ ಮಾಜಿ ಸ್ಪಿನ್ನರ್ ಹಾಗೂ ಮಾಜಿ ಆಯ್ಕೆಗಾರ ಶರಣ್ ದೀಪ್ ಸಿಂಗ್ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸರಣಿಯಲ್ಲಿ ಯಾವ ತಂಡ ಗೆಲ್ಲಲಿದೆ ಮತ್ತು ಅದಕ್ಕೆ ಕಾರಣವೇನು ಎಂಬುದನ್ನು ಶರಣ್ ದೀಪ್ ಸಿಂಗ್ ಈ ಕೆಳಕಂಡಂತೆ ಹೇಳಿಕೊಂಡಿದ್ದಾರೆ..

ದಕ್ಷಿಣ ಆಫ್ರಿಕಾ ತಂಡದಲ್ಲಿ ಈ ಮೂವರನ್ನು ಬಿಟ್ಟರೆ ಬೇರೆ ಯಾರೂ ಉತ್ತಮ ಆಟಗಾರರಿಲ್ಲ
ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಯ ಫಲಿತಾಂಶದ ಕುರಿತು ಮಾತನಾಡಿರುವ ಶರಣ್ ದೀಪ್ ಸಿಂಗ್ ಟೀಮ್ ಇಂಡಿಯಾ 3-0 ಅಂತರದಲ್ಲಿ ಸರಣಿಯನ್ನು ಗೆಲ್ಲುವುದರ ಮೂಲಕ ಸೌತ್ ಆಫ್ರಿಕಾಗೆ ವೈಟ್ ವಾಷ್ ಬಳಿಯಲಿದೆ ಎಂದು ಊಹಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಕೇವಲ ಡೀನ್ ಎಲ್ಗರ್, ಏಡೆನ್ ಮಾರ್ಕ್ರಮ್ ಮತ್ತು ಕ್ವಿಂಟನ್ ಡಿ ಕಾಕ್ ಮಾತ್ರ ಉತ್ತಮ ಪ್ರದರ್ಶನವನ್ನು ನೀಡಬಲ್ಲ ಆಟಗಾರರಾಗಿದ್ದಾರೆ, ಇವರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದ್ದು ಉಳಿದ ಆಟಗಾರರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ ಹೀಗಾಗಿ ಭಾರತದ ಕಠಿಣ ಬೌಲಿಂಗ್ ವಿರುದ್ಧ ದಕ್ಷಿಣ ಆಫ್ರಿಕಾ ಗೆಲ್ಲುವುದು ಅಸಾಧ್ಯ ಎಂದು ಶರಣ್ ದೀಪ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಳೆ ಇಲ್ಲದಿದ್ದರೆ ಮೂರ್ನಾಲ್ಕು ದಿನಗಳಲ್ಲಿಯೇ ಪಂದ್ಯ ಮುಗಿಯುತ್ತಿತ್ತು
ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ಎರಡನೇ ದಿನದಾಟಕ್ಕೆ ಮಳೆ ಅಡ್ಡಿಯುಂಟು ಮಾಡಿ ಸಂಪೂರ್ಣ ದಿನದಾಟ ಆಹುತಿಯಾದ ಕುರಿತು ಮಾತನಾಡಿರುವ ಶರಣ್ ದೀಪ್ ಸಿಂಗ್ ಆ ದಿನ ಮಳೆ ಬಾರದೇ ಇದ್ದಿದ್ದರೆ ಮೂರ್ನಾಲ್ಕು ದಿನಗಳಲ್ಲಿಯೇ ಈ ಪಂದ್ಯ ಮುಗಿಯುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೆಂಚುರಿಯನ್ ಅಂಗಳದಲ್ಲಿ ಗೆದ್ದಿರುವುದು ದೊಡ್ಡ ಸುದ್ದಿ
ಇನ್ನು ಸೆಂಚುರಿಯನ್ ಅಂಗಳದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿರುವುದನ್ನು ಕೊಂಡಾಡಿರುವ ಶರಣ್ ದೀಪ್ ಸಿಂಗ್ ಸೆಂಚುರಿಯನ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿರುವ ಏಷ್ಯಾದ ಮೊದಲ ತಂಡ ಎಂಬ ಸಾಧನೆಯನ್ನು ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಮಾಡಿದೆ, ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವವನ್ನು ಅದ್ಬುತವಾಗಿ ನಿರ್ವಹಿಸಿದರು ಮತ್ತು ರಾಹುಲ್ ದ್ರಾವಿಡ್ ತಾವು ಕೋಚ್ ಆಗಿ ತಂಡವನ್ನು ಸೆಂಚುರಿಯನ್ ಅಂಗಳದಲ್ಲಿ ಮುನ್ನಡೆಸಿದ ಮೊದಲ ಪಂದ್ಯದಲ್ಲಿಯೇ ಜಯವನ್ನು ಪಡೆದು ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications