
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿದೇಶಿ ನೆಲದಲ್ಲಿ ಭಾರತದ ಅಮೋಘ ಪ್ರದರ್ಶನವನ್ನು ದಕ್ಷಿಣ ಆಫ್ರಿಕಾದಲ್ಲಿಯೂ ಮುಂದುವರಿಸುವ ಆತ್ಮ ವಿಶ್ವಾಸದಲ್ಲಿ ಭಾರತೀಯ ತಂಡವಿದ್ದು ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಕೆಲ ಆಟಗಾರರು ಮಹತ್ವದ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಾಜಿ ನಾಯಕ ಎಂಎಸ್ ಧೋನಿಯ ದಾಖಲೆಯನ್ನು ಮುರಿಯಲು ಸಜ್ಜಾಗಿದ್ದರೆ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ಮೈಲಿಗಲ್ಲೊಂದರ ಸನಿಹದಲ್ಲಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 8000 ರನ್‌ಗಳಿಸಿದ ಆಟಗಾರರ ಪಟ್ಟಿಗೆ ಸೇರಲು ಕೇವಲ 199 ರನ್‌ಗಳ ಅಗತ್ಯವಿದೆ. ದಕ್ಷಿಣ ಆಫ್ರಿಕಾ ವಿರುದ್ಧಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕಿಹ್ಲಿ ಈ ಸಾಧನೆಯನ್ನು ಮಾಡಲು ಸಾಧ್ಯವಾದರೆ ಈ ಮಹತ್ವದ ಮೈಲಿಗಲ್ಲನ್ನು ಮುಟ್ಟಿದ ಕೇವಲ 6ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಭಾರತದ ಪರವಾಗಿ ಈವರೆಗೆ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ವೀರೇಂದ್ರ ಸೆಹ್ವಾಗ್ ಮಾತ್ರವೇ ಈ ಸಾಧನೆಯನ್ನು ಮಾಡಿದ ಐವರು ದಾಂಡಿಗರಾಗಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕವನ್ನು ಬಾರಿಸಲು ವಿಫಲವಾಗಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಈ ಸಾಧನೆಯನ್ನು ಮಾಡಿದರೆ ವಿರಾಟ್ ಕೊಹ್ಲಿ ಭಾರತದ ಪರವಾಗಿ ಈ ಸಾಧನೆಯನ್ನು ವೇಗವಾಗಿ ಮಾಡಿದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸಚಿನ್ ತೆಂಡೂಲ್ಕರ್(154 ಇನ್ನಿಂಗ್ಸ್) ರಾಹುಲ್ ದ್ರಾವಿಡ್(158 ಇನ್ನಿಂಗ್ಸ್) ವೀರೇಂದ್ರ ಸೆಹ್ವಾಗ್ 160 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಇನ್ನು ಒಟ್ಟಾರೆಯಾಗಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 8000 ರನ್‌ಗಳ ಮೈಲಿಗಲ್ಲು ದಾಟಲಿರುವ 33ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ವಿರಾಟ್ ಕೊಹ್ಲಿ ಈವರೆಗೆ 97 ಟೆಸ್ಟ್ ಪಂದ್ಯಗಳನ್ನು ಆಡಿದ್ದು 50.65ರ ಸರಾಸರಿಯಲ್ಲಿ 7801 ರನ್‌ಗಳಿಸಿದ್ದಾರೆ. ಇನ್ನು ಅತಿ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಆಸಿಸ್ ಬ್ಯಾಟರ್ ಸ್ಟೀವ್ ಸ್ಮಿತ್, ಆಲನ್ ಬಾರ್ಡರ್ ಹಾಗೂ ಗ್ರೇಮ್ ಸ್ಮಿತ್ ಅವರೊಂದಿಗೆ 17ನೇ ಸ್ಥಾನದಲ್ಲಿದ್ದಾರೆ.
ಇನ್ನು ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಕೂಡ ಮಹತ್ವದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವ ಉತ್ಸುಕತೆಯಲ್ಲಿದ್ದಾರೆ. ಅತ್ಯಂತ ವೇಗವಾಗಿ 100 ಬಲಿ ಪಡೆದ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳುವ ಅವಕಾಶ ಪಂತ್ ಮುಂದಿದೆ. ಸದ್ಯ ಈ ದಾಖಲೆ ಮಾಜಿ ನಾಯಕ ಎಂಎಸ್ ಧೋನಿ ಹೆಸರಿನಲ್ಲಿದೆ. ಎಂಎಸ್ ಧೋನಿ ಈ ಸಾಧನೆಯನ್ನು 36 ಟೆಸ್ಟ್ ಪಂದ್ಯಗಳಲ್ಲಿ ಮಾಡಿದ್ದು ರಿಷಭ್ ಪಂತ್‌ಗೆ ಈ ದಾಖಲೆಯನ್ನು ಮುರಿಯಲು ಕೇವಲ 3 ಬಲಿ ಪಡೆಯುವ ಅಗತ್ಯವಿದೆ.
ಇನ್ನು ಭಾರತದ ಪರವಾಗಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ಬಲಿ ಪಡೆದ ದಾಖಲೆ ಕೂಡ ಎಂಎಸ್ ಧೋನಿ ಹೆಸರಿನಲ್ಲಿದ್ದು 294 ಬಲಿ ಪಡೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಸೈಯ್ಯದ್ ಕಿರ್ಮಾನಿ(198) ಕಿರಣ್ ಮೋರೆ(130), ನಯನ್ ಮೋಂಗಿಯಾ(107) ಹಾಗೂ ವೃದ್ಧಿಮಾನ್ ಸಾಹಾ (104) ನಂತರದ ಸ್ಥಾನದಲ್ಲಿದ್ದಾರೆ.
ಇನ್ನು ರಿಷಭ್ ಪಂತ್ ಈವರೆಗೆ 25 ಟೆಸ್ಟ್ ಪಂದ್ಯಗಳಲ್ಲಿ 97 ಬಲಿ ಪಡೆದಿದ್ದಾರೆ. ಈ ಮೂಲಕ 100 ವಿಕೆಟ್‌ಗಳ ಮೈಲಿಗಲ್ಲನ್ನು ದಾಟುವ 6ನೇ ಭಾರತೀಯ ವಿಕೆಟ್ ಕೀಪರ್ ಎನಿಸಿಕೊಳ್ಳಲಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿಯೇ ಈ ಸಾಧನೆಯನ್ನು ಮಾಡಿದರೆ ಒಟ್ಟಾರೆಯಾಗಿ ಈ ಮೈಲಿಗಲ್ಲನ್ನು ವೇಗವಾಗಿ ದಾಟಿದ ವಿಶ್ವದ 5ನೇ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ಕೂಡ ತಮ್ಮದಾಗಿಸಿಕೊಳ್ಳಲಿದ್ದಾರೆ.