ಭಾರತ vs ಶ್ರೀಲಂಕಾ: ಟೆಸ್ಟ್ ಕ್ರಿಕೆಟ್ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಬಲಿಷ್ಠ ತಂಡ ಯಾವುದು?

ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ ಟಿ ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳಲ್ಲಿ ಸೆಣಸಾಟ ನಡೆಸುತ್ತಿದೆ. ಇತ್ತಂಡಗಳ ನಡುವೆ ಮೊದಲಿಗೆ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಎಲ್ಲಾ ಪಂದ್ಯಗಳಲ್ಲಿಯೂ ಜಯ ಸಾಧಿಸಿದ ಟೀಮ್ ಇಂಡಿಯಾ ಪ್ರವಾಸಿ ಶ್ರೀಲಂಕಾಗೆ ವೈಟ್ ವಾಷ್ ಬಳಿದಿದೆ. ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸಾಲು ಸಾಲು ಸರಣಿಗಳಲ್ಲಿ ವೈಟ್ ವಾಷ್ ಸಾಧನೆ ಮಾಡಿದೆ.
ಹೀಗೆ ಸಾಲು ಸಾಲು ಸರಣಿಗಳಲ್ಲಿ ಜಯಗಳಿಸುತ್ತಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿರುವ ಟೀಂ ಇಂಡಿಯಾ ಸದ್ಯ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದ್ದು, ಮೊದಲನೇ ಟೆಸ್ಟ್ ಪಂದ್ಯದಲ್ಲಿ ಬೃಹತ್ ಇನ್ನಿಂಗ್ಸ್ ಗೆಲುವನ್ನು ದಾಖಲಿಸುವುದರ ಮೂಲಕ ಸರಣಿಯಲ್ಲಿ 1 - 0 ಅಂತರದ ಮುನ್ನಡೆಯನ್ನು ಸಾಧಿಸಿದೆ.
ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಮೊಹಾಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 222 ರನ್‌ಗಳ ಇನ್ನಿಂಗ್ಸ್ ಗೆಲುವನ್ನು ದಾಖಲಿಸಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪಾಲಿನ ಈ ಮೈಲಿಗಲ್ಲಿನ ಪಂದ್ಯದಲ್ಲಿ ಗೆಲ್ಲುವುದರ ಮೂಲಕ ಪಂದ್ಯವನ್ನು ಮತ್ತಷ್ಟು ವಿಶೇಷಗೊಳಿಸಿತು. ಹೌದು, ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಮೊದಲನೇ ಟೆಸ್ಟ್ ಪಂದ್ಯ ಇದಾದರೆ, ವಿರಾಟ್ ಕೊಹ್ಲಿ ಆಡಿದ ನೂರನೇ ಟೆಸ್ಟ್ ಪಂದ್ಯ ಕೂಡ ಇದಾಗಿತ್ತು. ಹೀಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪಾಲಿಗೆ ಮೈಲಿಗಲ್ಲಾಗಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸುವುದರ ಮೂಲಕ ಉತ್ತಮ ಉಡುಗೊರೆಯನ್ನು ನೀಡಿದೆ ಎಂದರೆ ತಪ್ಪಾಗಲಾರದು. ಇನ್ನು ಈ ಪಂದ್ಯದಲ್ಲಿ ಅಜೇಯ 175 ರನ್ ಗಳಿಸಿದ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿಯೂ ಕೂಡ ಮಿಂಚಿದ್ದರು ಹಾಗೂ ಶ್ರೀಲಂಕಾ ತಂಡದ ಮೇಲೆ ಎಲ್ಲಾ ವಿಭಾಗಗಳಲ್ಲಿಯೂ ಹಿಡಿತ ಸಾಧಿಸಿದ್ದ ಟೀಮ್ ಇಂಡಿಯಾ ದ್ವಿತೀಯ ಪಂದ್ಯವನ್ನೂ ಕೂಡ ಗೆಲ್ಲುವ ಮೂಲಕ ಮತ್ತೊಂದು ವೈಟ್ ವಾಷ್ ಸಾಧನೆ ಮಾಡುವತ್ತ ಕಣ್ಣಿಟ್ಟಿದೆ.
ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮಾರ್ಚ್ 12ರ ಶನಿವಾರದಂದು ಮಧ್ಯಾಹ್ನ 2 ಗಂಟೆಗೆ ಆರಂಭಗೊಳ್ಳಲಿದೆ. ಈ ಪಂದ್ಯ ಡೇ ನೈಟ್ ಪಂದ್ಯವಾಗಿದ್ದು, ಪಿಂಕ್ ಬಾಲ್ ಟೆಸ್ಟ್ ಪಂದ್ಯ ಎಂಬ ವಿಶೇಷತೆಗಳನ್ನು ಹೊಂದಿದೆ. ಹಾಗೂ ಈ ಪಂದ್ಯ ವೀಕ್ಷಿಸಲು ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶೇ.100ರಷ್ಟು ವೀಕ್ಷಕರಿಗೆ ಅವಕಾಶ ನೀಡಿರುವುದು ಸದ್ಯ ಬೆಂಗಳೂರಿನ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಂತಸ ತಂದಿದ್ದು, ತಮ್ಮ ನೆಚ್ಚಿನ ಕ್ರಿಕೆಟಿಗ ತನ್ನ 101ನೇ ಟೆಸ್ಟ್ ಪಂದ್ಯವನ್ನು ತನ್ನ ಎರಡನೇ ಮನೆಯಾದ ಬೆಂಗಳೂರಿನಲ್ಲಿ ಆಡುವುದನ್ನು ನೋಡಲು ಕಾತರರಾಗಿದ್ದಾರೆ.
ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಟೆಸ್ಟ್ ಮುಖಾಮುಖಿ ಫಲಿತಾಂಶ:
ಇನ್ನು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಇದುವರೆಗೂ ಒಟ್ಟು 45 ಟೆಸ್ಟ್ ಪಂದ್ಯಗಳು ನಡೆದಿದ್ದು, ಟೀಮ್ ಇಂಡಿಯಾ 21 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಶ್ರೀಲಂಕಾ 7 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಇನ್ನುಳಿದ 17 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಈ ಮೂಲಕ ಒಟ್ಟಾರೆ ಟೆಸ್ಟ್ ಮುಖಾಮುಖಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತ ಸ್ಪಷ್ಟ ಮೇಲುಗೈ ಸಾಧಿಸಿದೆ.
ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಒಂದು ಟೆಸ್ಟ್ ಪಂದ್ಯ ನಡೆದಿದ್ದು, ಈ ಪಂದ್ಯದಲ್ಲಿ ಭಾರತ ಜಯವನ್ನು ಸಾಧಿಸಿದೆ.
ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಕೊನೆಯದಾಗಿ ನಡೆದಿರುವ 5 ಟೆಸ್ಟ್ ಪಂದ್ಯಗಳ ಪೈಕಿ ಟೀಮ್ ಇಂಡಿಯಾ 3 ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಉಳಿದೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಭಾರತ ನೆಲದಲ್ಲಿ ನಡೆದಿರುವ ಒಟ್ಟು 21 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ 12 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಉಳಿದ 9 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಶ್ರೀಲಂಕಾ ಇದುವರೆಗೂ ಭಾರತದಲ್ಲಿ ನಡೆದಿರುವ ಯಾವುದೇ ಟೆಸ್ಟ್ ಪಂದ್ಯದಲ್ಲಿಯೂ ಕೂಡ ಜಯ ಸಾಧಿಸುವಲ್ಲಿ ಯಶಸ್ವಿಯಾಗಿಯೇ ಇಲ್ಲ.
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ, ರಿಷಬ್ ಪಂತ್ ( ವಿಕೆಟ್ ಕೀಪರ್ ), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ / ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ
ಶ್ರೀಲಂಕಾ ಸಂಭಾವ್ಯ ತಂಡ: ಲಹಿರು ತಿರಿಮನ್ನೆ, ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಸುರಂಗ ಲಕ್ಮಲ್, ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications