ಭಾರತ vs ಶ್ರೀಲಂಕಾ: ಬೆಂಗಳೂರು ಪಂದ್ಯದಲ್ಲೂ ಭಾರತಕ್ಕೆ ಭರ್ಜರಿ ಗೆಲುವು: ಮತ್ತೊಂದು ಸರಣಿ ಕ್ಲೀನ್ ಸ್ವೀಪ್

ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ಕೂಡ ಭಾರತ ಭರ್ಜರಿಯಾಗಿ ಗೆದ್ದುಕೊಂಡಿದೆ. ಬೆಂಗಳೂರಿನಲ್ಲಿ ನಡೆದ ಅಹರ್ನಿಶಿ ಪಂದ್ಯದಲ್ಲಿ ಭಾರತ ಭರ್ಜರಿ 238 ರನ್‌ಗಳ ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೂಡ ಭಾರತ ಭರ್ಜರಿ ಗೆಲುವು ಸಾಧಿಸಿತ್ತು.
ಬೌಲರ್‌ಗಳಿಗೆ ನೆರವು ನೀಡುವ ಪಿಚ್‌ನಲ್ಲಿ ಭಾರತದ ಶ್ರೇಯಸ್ ಐಯ್ಯರ್ ಎರಡೂ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕದ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಇನ್ನು ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬೂಮ್ರಾ ಹಾಗೂ ಆರ್ ಅಶ್ವಿನ್ ಅಮೋಘ ಆಟವನ್ನು ಪ್ರದರ್ಶಿಸಿದ್ದಾರೆ. ಇನ್ನು ಶ್ರೀಲಂಕಾ ಪರವಾಗಿ ನಾಯಕ ದಿಮುತ್ ಕರುಣರತ್ನೆ ಭರ್ಜರಿ ಶತಕ ಸಿಡಿಸಿ ಏಕಾಂಗಿ ಹೋರಾಟವನ್ನು ನಡೆಸಿದರೂ ಶ್ರೀಲಂಕಾವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

2ನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾಗೆ ಕಠಿಣ ಸವಾಲು
ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 447 ರನ್‌ಗಳ ಬೃಹತ್ ಗುರಿಯನ್ನು ಪಡೆದುಕೊಂಡಿತು. ಈ ದೊಡ್ಡ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಆರಂಭದಲ್ಲಿಯೇ ಆಘಾತ ಅನುಭವಿಸಿದರೂ ಎರಡನೇ ವಿಕೆಟ್‌ಗೆ ನಾಯಕ ದಿಮುತ್ ಕರುಣರತ್ನೆ ಹಾಗೂ ಕುಸಾಲ್ ಮೆಂಡಿಸ್ ಅದ್ಭುತ ಜೊತೆಯಾಟವೊಂದನ್ನು ನೀಡಿದರು. 97 ರನ್‌ಗಳ ಜೊತೆಯಾಟ ನೀಡಿದ ನಂತರ ಆರ್ ಅಶ್ವಿನ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಕುಸಾಲ್ ಮೆಂಡಿಸ್ 54 ರನ್‌ಗಳಿಸಿ ಆರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಆದರೆ ಅದಾದ ಬಳಿಕ ಶ್ರೀಲಂಕಾ ನಾಟಕೀಯ ಕುಸಿತ ಕಂಡಿತು.

ಲಂಕಾ ನಾಯಕನ ಏಕಾಂಗಿ ಹೋರಾಟ
ಮತ್ತೊಂದು ತುದಿಯಲ್ಲಿ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ ಅದ್ಭುತ ಪ್ರದರ್ಶನ ನೀಡಿದರು. ಭಾರತೀಯ ಬೌಲರ್‌ಗಳ ದಾಳಿಗೆ ಉತ್ತಮ ಪ್ರತ್ಯುತ್ತರ ನೀಡಿದ ಕರುಣರತ್ನೆ 107 ರನ್‌ಗಳಿಸಿ ಔಟಾದರು. ನಾಯಕನ ವಿಕೆಟ್ ಕಳೆದುಕೊಂಡ ನಂತರ ಶ್ರೀಲಂಕಾ ಕೇವಲ ನಾಲ್ಕು ರನ್‌ಗಳ ಅಂತರದಲ್ಲಿ ಅಂತಿಮ ನಾಲ್ಕು ವಿಕೆಟ್ ಕಳೆದುಕೊಂಡು ಭಾರತಕ್ಕೆ ಶರಣಾಯಿತು. ಈ ಮೂಲಕ ಶ್ರೀಲಂಕಾ ಎರಡು ಪಂದ್ಯಗಳಲ್ಲಿಯೂ ಯಾವುದೇ ಪ್ರತಿರೋಧ ನೀಡದೆಯೇ ಸೋಲು ಅನುಭವಿಸಿದಂತಾಗಿದೆ.

ಎರಡೂ ಇನ್ನಿಂಗ್ಸ್‌ನಲ್ಲಿ ಮಿಂಚಿದ ಐಯ್ಯರ್; ಪಂತ್ ಸ್ಪೋಟಕ ಆಟ
ಇನ್ನು ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದಲ್ಲಿ ಶ್ರೇಯಸ್ ಐಯ್ಯರ್ ಪ್ರದರ್ಶನ ಅದ್ಭುತವಾಗಿತ್ತು. ಬೌಲರ್‌ಗಳಿಗೆ ಸಂಪೂರ್ಣ ನೆರವಾಗುತ್ತಿದ್ದ ಪಿಚ್‌ನಲ್ಲಿ ಶ್ರೇಯಸ್ ಐಯ್ಯರ್ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ 92 ರನ್ ಬಾರಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ 8 ರನ್‌ಗಳ ಅಂತರದಿಂದ ಶತಕವಂಚಿತರಾದರೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ 67 ರನ್‌ಗಳ ಕೊಡುಗೆ ನೀಡಿ ಅದ್ಭುತ ಆಟ ಪ್ರದರ್ಶಿಸಿದ್ದರು. ಇನ್ನು ರಿಷಭ್ ಪಂತ್ ಅವರ ಸ್ಪೋಟಕ ಬ್ಯಾಟಿಂಗ್ ಕೂಡ ಈ ಪಂದ್ಯದ ಗಮನಾರ್ಹ ಅಂಶ. ಮೊದಲ ಇನ್ನಿಂಗ್ಸ್‌ನಲ್ಲಿಯೂ 26 ಎಸೆತಗಳಲ್ಲಿ 39 ರನ್ ಸಿಡಿಸಿ ಮಿಂಚಿದ್ದ ಪಂತ್ ಎರಡನೇ ಇನ್ನಿಂಗ್ಸ್‌ನಲ್ಲಿ ದಾಖಲೆಯ ಬ್ಯಾಟಿಂಗ್ ಪ್ರದರ್ಶಿಸಿದರು. 28 ಎಸೆತಗಳಲ್ಲಿ ಅರ್ಧ ಶತಕಗಳಿಸುವ ಮೂಲಕ ಪಂತ್ ಭಾರತದ ಪರ ವೇಗದ ಅರ್ಧ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.

ಬೌಲಿಂಗ್‌ನಲ್ಲಿ ಬೂಮ್ರಾ, ಅಶ್ವಿನ್ ಅಬ್ಬರ
ಇನ್ನು ಈ ಪಂದ್ಯದಲ್ಲಿ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಅದ್ಭುತ ದಾಳಿ ಸಂಘಟಿಸಿ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಬೂಮ್ರಾ ಐದು ವಿಕೆಟ್‌ಗಳನ್ನು ಪಡೆದು ಮಿಂಚಿದರೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅಬ್ಬರಿಸಿದ ಅವರು 3 ವಿಕೆಟ್ ಕಬಳಿಸಿದರು. ಆರ್ ಅಶ್ವಿನ್ ಕೂಡ ಈ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿ ಒಟ್ಟಾರೆ 7 ವಿಕೆಟ್ ಸಂಪಾದಿಸಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ (ನಾಯಕ), ಹನುಮ ವಿಹಾರಿ, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ಬೆಂಚ್: ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ಉಮೇಶ್ ಯಾದವ್, ಪ್ರಿಯಾಂಕ್ ಪಾಂಚಾಲ್, ಶ್ರೀಕರ್ ಭರತ್, ಸೌರಭ್ ಕುಮಾರ್, ಜಯಂತ್ ಯಾದವ್
ಶ್ರೀಲಂಕಾ ಆಡುವ ಬಳಗ: ದಿಮುತ್ ಕರುಣಾರತ್ನೆ (ಸಿ), ಲಹಿರು ತಿರಿಮನ್ನೆ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ (ವಿಕೆ), ಸುರಂಗ ಲಕ್ಮಲ್, ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ
ಬೆಂಚ್: ದಿನೇಶ್ ಚಾಂಡಿಮಲ್, ಚಮಿಕಾ ಕರುಣರತ್ನೆ, ಜೆಫ್ರಿ ವಾಂಡರ್ಸೆ, ಲಹಿರು ಕುಮಾರ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications