ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಣ ಐದನೇ ಹಾಗೂ ಕೊನೆಯ ಟಿ20 ಪಂದ್ಯ ತಿರುವನಂತಪುರಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿ ಟಿ20 ಕ್ರಿಕೆಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡುವ ಕನಸು ಕಾಣುತ್ತಿದೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಶೆಫಾಲಿ ವರ್ಮಾ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿರಲಿವೆ. ಶೆಫಾಲಿ ಈ ಪಂದ್ಯದಲ್ಲಿ 43 ರನ್ ಬಾರಿಸುವಲ್ಲಿ ಸಫಲರಾದರೆ ದೊಡ್ಡ ದಾಖಲೆ ಬರೆಯಬಹುದು.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಶೆಫಾಲಿ ವರ್ಮಾ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಈ ಸರಣಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ 118ರ ಸರಾಸರಿಯಲ್ಲಿ 236 ರನ್ ಕಲೆ ಹಾಕಿದ್ದಾರೆ. ಈ ವೇಳೆ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಶೆಫಾಲಿ 4 ಪಂದ್ಯಗಳಲ್ಲಿ 35 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ. ಕೊನೆಯ ಪಂದ್ಯದಲ್ಲಿ ಇವರು ದಾಖಲೆಯ ಪುಟಕ್ಕೆ ಎಂಟ್ರಿ ಪಡೆಯುವ ಕನಸು ಕಾಣುತ್ತಿದ್ದಾರೆ.

ಶೆಫಾಲಿ ವರ್ಮಾ 2025ರಲ್ಲಿ ಆಡಿದ 9 ಪಂದ್ಯಗಳಲ್ಲಿ 58.85 ಸರಾಸರಿಯಲ್ಲಿ 412 ರನ್ ಸಿಡಿಸಿದ್ದಾರೆ. ಐದನೇ ಪಂದ್ಯದಲ್ಲಿ ಶೆಫಾಲಿ 43 ರನ್ ಸಿಡಿಸಿದರೆ, ಐರ್ಲೆಂಡ್‌ನ ಗ್ಯಾಬಿ ಲೂಯಿಸ್ ಅವರ ದಾಖಲೆಯನ್ನು ಅಳಿಸಿ ಹಾಕಬಹುದು. ಐರ್ಲೆಂಡ್‌ನ ಗ್ಯಾಬಿ ಲೂಯಿಸ್ ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಆಡಿದ 11 ಇನಿಂಗ್ಸ್‌ಗಳಲ್ಲಿ 454 ರನ್ ಕಲೆ ಹಾಕಿದ್ದಾರೆ. ಶೆಫಾಲಿ ವರ್ಮಾ ಅವರು ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪೂರ್ಣ ಸದಸ್ಯ ತಂಡಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಬಹುದು. ಸದ್ಯ ಭರ್ಜರಿ ಫಾರ್ಮ್‌ನಲ್ಲಿರುವ ಶೆಫಾಲಿ ಈ ಸಾಧನೆಯನ್ನು ಮಾಡಿ ಬೀಗಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ.
ಇದೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ದೀಪ್ತಿ ಶರ್ಮಾ ಸಹ ದೊಡ್ಡ ದಾಖಲೆಯನ್ನು ಬರೆಯಬಹುದಾಗಿದೆ. ಇವರು ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ದೀಪ್ತಿ ಒಂದು ವಿಕೆಟ್ ಪಡೆಯುತ್ತಲೇ ದಾಖಲೆ ಬರೆಯಲಿದ್ದಾರೆ. ಈ ,ಮೂಲಕ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಲಿದ್ದಾರೆ.

ಟೀಮ್ ಇಂಡಿಯಾ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು ಎಲ್ಲರ ಗಮನ ಸೆಳೆದಿದೆ. ಅಲ್ಲದೆ ಎಲ್ಲ ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದಿದೆ. ಭಾರತದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಬಳಿಕ ಹರ್ಮನ್ ಪ್ರೀತ್ ಪಡೆ ಇದೇ ಮೊದಲ ಬಾರಿಗೆ ಮೈದಾನ ಪ್ರವೇಶಿಸಿತ್ತು. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಸ್ಥಿರ ಆಲ್‌ರೌಂಡರ್ ಪ್ರದರ್ಶನ ನೀಡಿರುವ ಭಾರತ ಆಡಿರುವ 4 ಪಂದ್ಯಗಳನ್ನು ಗೆದ್ದು ಬೀಗಿದೆ. ಈಗ ಐದನೇ ಟಿ20 ಪಂದ್ಯವನ್ನು ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡುವ ಕನಸು ಕಾಣುತ್ತಿದೆ.