
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ನಡೆಯುತ್ತಿದ್ದು ಮೊದಲ ಪಂದ್ಯ ಈಗಾಗಲೇ ಅಂತ್ಯವಾಗಿದೆ. ಲಕ್ನೋದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಭಾರತ ಸರಣಿಯಲ್ಲಿ ಮೇಲುಗೈ ಸಾಧಿಸಿದೆ. ಈ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಭಾರತ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ತಂಡವನ್ನು ಪ್ರಕಟಿಸಿದೆ. ಇದರ ಜೊತೆಗೆ ಪ್ರಸ್ತುತ ನಡೆಯುತ್ತಿರುವ ಟಿ20 ಸರಣಿಗೆ ಇಬ್ಬರು ಬದಲಿ ಆಟಗಾರರನ್ನು ಕೂಡ ಹೆಸರಿಸಿದೆ.
ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಎರಡು ಪಂದ್ಯಗಳ ಪೈಕಿ ಮೊದಲ ಪಂದ್ಯ ಮೊಹಾಲಿಯಲ್ಲಿ ಮಾರ್ಚ್ 5ರಿಂದ ಆರಂಭವಾಗಲಿದೆ. ಎರಡನೇ ಪಂದ್ಯ ಅಹರ್ನಿಶಿ ಪಂದ್ಯವಾಗಿರಲಿದ್ದು ಬೆಂಗಳೂರಿನಲ್ಲಿ ಆಯೋಜನೆಯಾಗಲಿದೆ. ಈ ಪಂದ್ಯ ಮಾರ್ಚ್ 12ರಿಂದ ಆರಂಭವಾಗಲಿದೆ.
ಇನ್ನಿ ಸದ್ಯ ಭಾರತ ವಿರುದ್ಧದ ಟಿ20 ಸರಣಿ ನಡೆಯುತ್ತಿದ್ದು ಗಾಯದ ಕಾರಣದಿಂದ ಈ ಸರಣಿಯಿಂದ ಹೊರಬಿದ್ದಿರುವ ಸ್ಪಿನ್ನರ್ ಮಹೀಶ್ ತೀಕ್ಷಣ ಹಾಗೂ ಬ್ಯಾಟರ್ ಕುಸಾಲ್ ಮೆಂಡಿಸ್ ಬದಲಿಗೆ ನಿರೋಶನ್ ಡಿಕ್ವೆಲ್ ಹಾಗೂ ಧನಂಜಯ ಡಿಸಿಲ್ವ ಅವರನ್ನು ತಂಡಕ್ಕೆ ಹೆಸರಿಸಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಘೋಷಿಸಿದೆ. ತೀಕ್ಷಣ ಹಾಗೂ ಮೆಂಡಿಸ್ ಈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಹ್ಯಾಮ್‌ಸ್ಟ್ರಿಂಜ್ ಗಾಯಕ್ಕೆ ತುತ್ತಾಗಿದ್ದರು. ಈ ಸರಣಿಯನ್ನು ಶ್ರೀಲಂಕಾ 1-4 ಅಂತರದಿಂದ ಶರಣಾಗಿತ್ತು.
ಇನ್ನು ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಕೊರೊನಾವೈರಸ್‌ಗೆ ತುತ್ತಾಗಿದ್ದ ಹಸರಂಗ ಟೆಸ್ಟ್ ಸರಣಿಯಿಂದಲೂ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾದಿಂದ ಹಸರಂಗ ನೇರವಾಗಿ ಶ್ರೀಲಂಕಾಗೆ ಮರಳಲಿದ್ದಾರೆ ಎಂದು ಮಂಡಳಿ ಮಾಹಿತಿ ನೀಡಿದೆ. ಈ ಮೂಲಕ ಟಿ20 ಸರಣಿಯ ಬಳಿಕ ಟೆಸ್ಟ್ ಸರಣಿಗೂ ಶ್ರೀಲಂಕಾ ತಂಡ ಪ್ರಮುಖ ಆಟಗಾರನ ಸೇವೆಯಿಂದ ವಂಚಿತವಾಗಿದೆ.
ಇನ್ನು ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ದಿಮುತ್ ಕರುಣರತ್ನೆ ಮುನ್ನಡೆಸಲಿದ್ದಾರೆ. ಧನಂಜಯ ಡಿಸಿಲ್ವ ಉಪನಾಯಕನಾಗಿ ಕರುಣರತ್ನೆಗೆ ಸಾಥ್ ನೀಡಲಿದ್ದಾರೆ. ಕುಸಾಲ್ ಮೆಂಡಿಸ್ ಅವರನ್ನು ಸ್ಕ್ವಾಡ್‌ಗೆ ಹೆಸರಿಸಲಾಗಿದ್ದು ಪಂದ್ಯದ ಲಭ್ಯತೆಗೆ ಫಿಟ್‌ನೆಸ್ ನೋಡಿಕೊಂಡು ನಿರ್ಧರಿಸಲಾಗುತ್ತದೆ ಎಂದು ಮಂಡಳಿ ಮಾಹಿತಿ ನೀಡಿದೆ.
ಶ್ರೀಲಂಕಾ ಟೆಸ್ಟ್ ತಂಡ ಹೀಗಿದೆ: ದಿಮುತ್ ಕರುಣರತ್ನೆ (ನಾಯಕ), ಪಾತುಂ ನಿಸ್ಸಾಂಕ, ಲಹಿರು ತಿರಿಮನ್ನೆ, ಧನಂಜಯ ಡಿ ಸಿಲ್ವಾ (ಉಪನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಾಲ್, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ, ಚಾಮಿಕಾ ಕರುಣಾರತ್ನೆ, ಲಹಿರು ಕುಮಾರ, ಸುರಂಗ ಲಕ್ಮಲ್, ದುಷ್ಮಂತ ಚಮೀರ, ವಿಶ್ವ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ಲಸಿತ್ ಎಂಬುಲ್ದೇನಿಯ