
ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಶುಕ್ರವಾರ ಆರಂಭವಾಗಲಿದ್ದು ಮೊಹಾಲಿಯಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯದ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮಹತ್ವದ ಮೈಲುಗಲ್ಲೊಂದನ್ನು ಸಾಧಿಸಲಿದ್ದು ಈ ಪಂದ್ಯ ಅವರ 100ನೇ ಟೆಸ್ಟ್ ಪಂದ್ಯವಾಗಿರಲಿದೆ. ಭಾರತದ ಪರವಾಗಿ 100ನೇ ಟೆಸ್ಟ್ ಪಂದ್ಯವನ್ನಾಡಿದ ಕೇವಲ 12ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾಗಲಿದ್ದಾರೆ.
ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ನಾಯಕತ್ವದಿಂದಲೂ ಕೆಳಗಿಳಿದಿರುವ ವಿರಾಟ್ ಕೊಹ್ಲಿ ಸದ್ಯ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್ ಎನಿಸಿದ್ದಾರೆ. ಸಾಕಷ್ಟು ದಾಖಲೆಗಳು ವಿರಾಟ್ ಕೊಹ್ಲಿ ಹೆಸರಿನಲ್ಲಿ ದಾಖಲಾಗಿದೆ. 100ನೇ ಟೆಸ್ಟ್ ಪಂದ್ಯದಲ್ಲಿ ಕುಡ ವಿರಾಟ್ ಕೊಹ್ಲಿ ಮತ್ತೊಂದು ವಿಶೇಷ ಸಾಧನೆ ಮಾಡುವ ಅವಕಾಶವನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 8000 ರನ್‌ಗಳಿಸಿದ ಆಟಗಾರರ ಪಟ್ಟಿಕೆ ಸೇರಿಕೊಳ್ಳಲು ಕೇವಲ 38 ರನ್‌ಗಳಷ್ಟು ದೂರದಲ್ಲಿದ್ದು ತಮ್ಮ ನೂರನೇ ಪಂದ್ಯದಲ್ಲಿ ಈ ಸಾಧನೆ ಮಾಡುವ ಅವಕಾಶವನ್ನು ಕೊಹ್ಲಿ ಹೊಂದಿದ್ದಾರೆ.
ವಿರಾಟ್ ಕೊಹ್ಲಿ 8000 ರನ್‌ಗಳ ಮೈಲುಗಲ್ಲನ್ನು ದಾಟಿದರೆ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತ ಕೇವಲ 6ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಭಾರತದ ಶ್ರೇಷ್ಠ ದಾಂಡಿಗರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್, ವಿರೇಂದ್ರ ಸೆಹ್ವಾಗ್ ಹಾಗೂ ವಿವಿಎಸ್ ಲಕ್ಷ್ಮಣ್ ಸಾಲಿಗೆ ವಿರಾಟ್ ಕೊಹ್ಲಿ ಕುಡ ಸೇರಿಕೊಳ್ಳಲಿದ್ದಾರೆ.
ವಿರಾಟ್ ಕೊಹ್ಲಿ ಮೊಹಾಲಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 38 ರನ್‌ಗಳಿಸಲು ಸಾಧ್ಯವಾದರೆ ಭಾರತದ ಪರವಾಗಿ ವೇಗವಾಗಿ ಈ ಸಾಧನೆ ಮಾಡಿದ 5ನೇ ಆಟಗಾರ ಎನಿಸಲಿದ್ದಾರೆ. ಈ ಮೈಲುಗಲ್ಲಿನ ಸಾಧನೆಗಾಗಿ ಸಚಿನ್ ತೆಂಡೂಲ್ಕರ್ 154 ಇನ್ನಿಂಗ್ಸ್ ಬಳಸಿಕೊಂಡಿದ್ದರೆ ರಾಹುಲ್ ದ್ರಾವಿಡ್ 158 ಇನ್ನಿಂಗ್ಸ್, ವಿರೇಂದ್ರ ಸೆಹ್ವಾಗ್ 160 ಇನ್ನಿಂಗ್ಸ್ ಹಾಗೂ ಸುನಿಲ್ ಗವಾಸ್ಕರ್ 166 ಇನ್ನಿಂಗ್ಸ್ ಬಳಸಿಕೊಂಡಿದ್ದರು. ವಿರಾಟ್ ಕೊಹ್ಲಿ ಈವರೆಗೆ 168 ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದಿದ್ದಾರೆ.
ಮಾಡರ್ನ್ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಎನಿಸಿರುವ ವಿರಾಟ್ ಕೊಹ್ಲಿ ಕಳೆದ ಒಂದೆರಡು ವರ್ಷಗಳಲ್ಲಿ ಈ ಹಿಂದಿನ ಬ್ಯಾಟಿಂಗ್ ವೈಭವವನ್ನು ಕಳೆದುಕೊಂಡಿದ್ದಾರೆ. ದೊಡ್ಡ ಮೊತ್ತ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಹರಿದುಬರುತ್ತಿಲ್ಲ. ಅದರಲ್ಲೂ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ ಎರಡೂವರೆ ವರ್ಷಗಳು ಕಳೆದಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತೆ ತಮ್ಮ ಹಿಂದಿನ ಫಾರ್ಮ್‌ಗೆ ಮರಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
2021ರಲ್ಲಿ ವಿರಾಟ್ ಕೊಹ್ಲಿ ತವರಿನಲ್ಲಿ ಆಡಿದ 5 ಟೆಸ್ಟ್ ಪಂದ್ಯಗಳಲ್ಲಿ 26ರ ಸರಾಸರಿಯಲ್ಲಿ 208 ರನ್ ಮಾತ್ರವೇ ಗಳಿಸಿದ್ದರು. ಇದು ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ತವರಿನಲ್ಲಿ ವರ್ಷದಲ್ಲಿ ಗಳಿಸಿದ ಅತಿ ಕನಿಷ್ಠ ಸ್ಕೋರ್ ಆಗಿದೆ. ಆಡಿದ 8 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಮೂರು ಬಾರಿ ಶೂನ್ಯಕ್ಕೆ ಔಟ್ ಆಗಿದ್ದರು. ಅದರಲ್ಲೂ 75 ಶೇಕಡಾ ಬಾರಿ ಅವರು ಸ್ಪಿನ್ನರ್‌ಗಳಿಗೆ ವಿಕೆಟ್ ಒಪ್ಪಿಸಿದ್ದರು.
ಆದರೆ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ವಿಶ್ರಾಂತಿಯನ್ನು ಪಡೆದಿದ್ದು ಟೆಸ್ಟ್ ಸರಣಿಗೆ ತಾಜಾತನದೊಂದಿಗೆ ಸಜ್ಜಾಗಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಮತ್ತೆ ಅದ್ಭುತ ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ. ಇನ್ನು ಇದಕ್ಕೂ ಹಿಂದೆ 2017ರಲ್ಲಿ ಶ್ರೀಲಂಕಾ ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ 3 ಟೆಸ್ಟ್ ಪಂದ್ಯಗಳಲ್ಲಿ 610 ರನ್‌ಗಳಿಸಿ ಮಿಂಚುಹರಿಸಿದ್ದರು. ಇದರಲ್ಲಿ ಎರಡು ಸತತ ದ್ವಿಶತಕಗಳು ಸೇರಿಕೊಂಡಿದ್ದವು.