ಮಂಗಳವಾರ, ಸೆಪ್ಟೆಂಬರ್ 12ರಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಹಂತದ ರೋಚಕ ಪಂದ್ಯದಲ್ಲಿ ಭಾರತ ಮತ್ತು ಆತಿಥೇಯ ಶ್ರೀಲಂಕಾ ತಂಡಗಳು ಸೆಣಸಾಡುತ್ತಿವೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡ ಉತ್ತಮ ಆರಂಭ ಪಡೆದುಕೊಂಡಿದೆ. ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಪವರ್‌ಪ್ಲೇನಲ್ಲಿ ಅರ್ಧಶತಕದ ಜೊತೆಯಾಟ ನೀಡಿದ್ದಾರೆ.

ಇದೇ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 10000 ರನ್‌ಗಳ ಮೈಲಿಗಲ್ಲು ಸ್ಥಾಪಿಸಿದರು. ಈ ಮೂಲಕ 10000 ರನ್‌ಗಳ ಸಾಧನೆ ಮಾಡಿದ 6ನೇ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೂ ಪಾತ್ರರಾದರು.
ರೋಹಿತ್ ಶರ್ಮಾ ನಿಸ್ಸಂಶಯವಾಗಿ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅನುಭವಿ ಆರಂಭಿಕ ಆಟಗಾರನು ವಿಶ್ವದ ಅತ್ಯುತ್ತಮ ಬೌಲರ್‌ಗಳಿಗೂ ಸಹ ದಂಡಿಸುತ್ತಾನೆ. ಕೆಲವು ವರ್ಷಗಳಲ್ಲಿ ಭಾರತದ ಪರ ಆಡುತ್ತಿರುವ ರೋಹಿತ್ ಶರ್ಮಾ ಅವರು ವಿಶ್ವದ ಅತ್ಯಂತ ನಿರ್ಭೀತ ಬ್ಯಾಟರ್‌ಗಳಲ್ಲಿ ಒಬ್ಬರಾದ್ದಾರೆ.
ಅಲ್ಲದೆ, 36 ವರ್ಷದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್‌ಗಳನ್ನು ತಲುಪಿದ ಎರಡನೇ ವೇಗದ ಬ್ಯಾಟರ್ ಎನಿಸಿಕೊಂಡರು. ಈ ಹಾದಿಯಲ್ಲಿ ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕಿದರು. ವಿರಾಟ್ ಕೊಹ್ಲಿ ನಂತರದ ಸ್ಥಾನ ಪಡೆದರು.
ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 10000 ರನ್ ಗಳಿಸಿದ ಆಟಗಾರರು
ವಿರಾಟ್ ಕೊಹ್ಲಿ - 205 ಇನ್ನಿಂಗ್ಸ್
ರೋಹಿತ್ ಶರ್ಮಾ - 241 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್ - 259 ಇನ್ನಿಂಗ್ಸ್
ಸೌರವ್ ಗಂಗೂಲಿ - 263 ಇನ್ನಿಂಗ್ಸ್
ರಿಕಿ ಪಾಂಟಿಂಗ್ - 266 ಇನ್ನಿಂಗ್ಸ್
ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಭಾರತೀಯ ಆಟಗಾರರು
ಸಚಿನ್ ತೆಂಡೂಲ್ಕರ್ - 18426
ವಿರಾಟ್ ಕೊಹ್ಲಿ - 13024
ಸೌರವ್ ಗಂಗೂಲಿ - 11363
ರಾಹುಲ್ ದ್ರಾವಿಡ್ - 10889
ಎಂಎಸ್ ಧೋನಿ - 10773
ರೋಹಿತ್ ಶರ್ಮಾ - 10001*
ಏಕದಿನ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಗಡಿ ದಾಟಿದ ವಿಶ್ವದ 15 ಬ್ಯಾಟರ್‌ಗಳಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಸರಾಸರಿ ಹೊಂದಿದ ಮೂರನೇ ಬ್ಯಾಟರ್ ಎನಿಸಿಕೊಂಡರು.
ವಿರಾಟ್ ಕೊಹ್ಲಿ 57.62 ಮತ್ತು ಎಂಎಸ್ ಧೋನಿ 50.57 ಸರಾಸರಿಯೊಂದಿಗೆ ಮೊದಲೆರಡು ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ 49.02 ಸರಾಸರಿಯಲ್ಲಿ 10,000 ರನ್ ಬಾರಿಸಿದ್ದಾರೆ.