
ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದ್ದು ಭಾರತ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಭಾರತದ ಯುವ ಬ್ಯಾಟರ್ ರಿಷಬ್ ಪಂತ್ ಎರಡನೇ ದಿನದಾಟದಲ್ಲಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದಾರೆ. ರಕ್ಷಣಾತ್ಮಕ ಆಟಕ್ಕೆ ಸವಾಲಾದ ಬೆಂಗಳೂರಿನ ಪಿಚ್‌ನಲ್ಲಿ ರಿಷಭ್ ಪಂತ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಮಿಂಚಿದ್ದಾರೆ. ಈ ಸಂದರ್ಭದಲ್ಲಿ ಟೆಸ್ಟ್ ಮಾದರಿಯಲ್ಲಿ ಭಾರತೀಯ ಬ್ಯಾಟರ್‌ಗಳ ಪೈಕಿ ವೇಗವಾಗಿ ಅರ್ಧ ಶತಕ ಸಿಡಿಸಿದ ದಾಖಲೆಯನ್ನು ಪಂತ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬ್ಯಾಟಿಂಗ್‌ಗೆ ಇಳಿದ ರಿಷಭ್ ಪಂತ್ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮುಂದಾದರು. ದೊಡ್ಡ ಹೊಡೆತಗಳನ್ಉ ಬಾರಿಸುತ್ತಾ ಸಾಗಿದ ಪಂತ್ ಕೇವಲ 28 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ ಮಿಂಚಿದರು. ಈ ಮೂಲಕ ಭಾರತದ ಮಾಜಿ ನಾಯಕ ಕಪಿಲ್‌ದೇವ್ 1982ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ 30 ಎಸೆತಗಳಲ್ಲಿ ಬಾರಿಸಿದ್ದ ಅರ್ಧ ಶತಕದ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ.
ರಿಷಭ್ ಪಂತ್ ಅವರ ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ ಎರಡು ಸಿಕ್ಸರ್ ಒಳಗೊಂಡಿತ್ತು. ಬೆಂಗಳೂರಿನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸುತ್ತಿದ್ದರೂ ರಿಷಭ್ ಪಂತ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನಿಡುವಲ್ಲಿ ಯಶಸ್ವಿಯಾದರು. ಅರ್ಧ ಶತಕಗಳಿಸಿದ ಬಳಿಕ ಪಂತ್ ಬೌಲರ್ ಜಯವಿಕ್ರಮಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡಿದ್ದಾರೆ.
ಭಾರತದ ಪರ ಟೆಸ್ಟ್‌ನಲ್ಲಿ ದಾಖಲಾದ ವೇಗದ ಅರ್ಧಶತಕಗಳು
ರಿಷಬ್ ಪಂತ್ - ಶ್ರೀಲಂಕಾ ವಿರುದ್ಧ 28 ಎಸೆತಗಳಲ್ಲಿ 50 ರನ್, ಬೆಂಗಳೂರು 2022
ಕಪಿಲ್ ದೇವ್ - ಪಾಕಿಸ್ತಾನ ವಿರುದ್ಧ 30 ಎಸೆತಗಳಲ್ಲಿ 50 ರನ್, ಕರಾಚಿ 1982
ಶಾರ್ದೂಲ್ ಠಾಕೂರ್ - ಇಂಗ್ಲೆಂಡ್ ವಿರುದ್ಧ 31 ಎಸೆತಗಳಲ್ಲಿ 50 ರನ್, ಲಂಡನ್ 2021
ವೀರೇಂದ್ರ ಸೆಹ್ವಾಗ್ - ಇಂಗ್ಲೆಂಡ್ ವಿರುದ್ಧ 32 ಎಸೆತಗಳಲ್ಲಿ 50, ಚೆನ್ನೈ 2008
ಇನ್ನು ರಿಷಭ್ ಪಂತ್ ಈ ಪಂದ್ಯದಲ್ಲಿ ಮತ್ತೊಂದು ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಎರಡೂ ಇನ್ನಿಂಗ್ಸ್‌ನಲ್ಲಿ 150ಕ್ಕಿಂತ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ 30+ ರನ್‌ಗಳಿಸಿದ ಏಕೂಕ ಬದಯಾಟರ್ ಎನಿಸಿಕೊಂಡಿದ್ದಾರೆ. ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ 26 ಎಸೆತಗಳಲ್ಲಿ 39 ರನ್ ಬಾರಿಸಿದ್ದರು. 150ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಪಂತ್ 162.29ರ ಸ್ಟ್ರೈಕ್‌ರೇಟ್‌ನಲ್ಲಿ 31 ಎಸೆತಗಳಲ್ಲಿ 50 ರನ್ ಬಾರಿಸಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ (ನಾಯಕ), ಹನುಮ ವಿಹಾರಿ, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ಬೆಂಚ್: ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ಉಮೇಶ್ ಯಾದವ್, ಪ್ರಿಯಾಂಕ್ ಪಾಂಚಾಲ್, ಶ್ರೀಕರ್ ಭರತ್, ಸೌರಭ್ ಕುಮಾರ್, ಜಯಂತ್ ಯಾದವ್
ಶ್ರೀಲಂಕಾ ಆಡುವ ಬಳಗ: ದಿಮುತ್ ಕರುಣಾರತ್ನೆ (ಸಿ), ಲಹಿರು ತಿರಿಮನ್ನೆ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ (ವಿಕೆ), ಸುರಂಗ ಲಕ್ಮಲ್, ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ
ಬೆಂಚ್: ದಿನೇಶ್ ಚಾಂಡಿಮಲ್, ಚಮಿಕಾ ಕರುಣರತ್ನೆ, ಜೆಫ್ರಿ ವಾಂಡರ್ಸೆ, ಲಹಿರು ಕುಮಾರ