
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯವೂ ಅಂತ್ಯವಾಗಿದ್ದು ಧರ್ಮಶಾಲಾದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದಿಂದ ಈಗಾಗಲೇ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಮತ್ತೊಂದು ಸರಣಿಯನ್ನು ಮುಡಿಗೇರಿಸಿಕೊಂಡಿದೆ. ಈ ಸಂದರ್ಭದಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಮಹತ್ವದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.
ಕಳೆದ ನವೆಂಬರ್ ತಿಂಗಳಿನಲ್ಲಿ ಟಿ20 ವಿಶ್ವಕಪ್ ಅಂತ್ಯವಾದ ಬಳಿಕ ರೋಹಿತ್ ಶರ್ಮಾ ಭಾರತ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ. ಆದರೆ ಅದಕ್ಕೂ ಮುನ್ನವೂ ರೋಹಿತ್ ಸಾಕಷ್ಟು ಸಂದರ್ಭಗಳಲ್ಲಿ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ.
ನಾಯಕನಾಗಿ ರೋಹಿತ್ ಶರ್ಮಾ ತವರಿನಲ್ಲಿ ದಾಖಲೆ: ರೋಹಿತ್ ಶರ್ಮಾ ನಾಯಕನಾಗಿ ತವರಿನಲ್ಲಿ ಅತ ಹೆಚ್ಚು ಪಂದ್ಯವನ್ನು ಗೆದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತದ ನೆಲದಲ್ಲಿ ಆಡಿದ 17 ಪಂದ್ಯಗಳ ಪೈಕಿ 16 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಈ ಮೂಲಕ ಈ ಸಾಧನೆ ಮಾಡಿದ ನಾಯಕರ ಪಟ್ಟಿಯಲ್ಲಿ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿದ್ದಾರೆ. ಭಾರತೀಯ ನಾಯಕರ ಪೈಕಿ ಈಗ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಗಿಂತ ಮೂರು ಪಂದ್ಯಗಳಷ್ಟು ಹೆಚ್ಚಿನ ಗೆಲುವು ಸಾಧಿಸಿದ್ದರೆ ಎಂಎಸ್ ಧೋನಿ ಅವರ ಸಾಧನೆಗಿಂತ ಐದು ಪಂದ್ಯಗಳಷ್ಟು ಹೆಚ್ಚಿನ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ಒಟ್ಟಾರೆಯಾಗಿ ಟಿ20ಐ ನಾಯಕನಾಗಿ ರೋಹಿತ್ ಶರ್ಮಾ ಮುನ್ನಡೆಸಿದ 25 ಪಂದ್ಯಗಳಲ್ಲಿ 23ನೇ ಗೆಲುವು ಸಾಧಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಈ ಸರಣಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ಗೆಲ್ಲುತ್ತಿರುವ ಸತತ 11ನೇ ಸರಣಿ ಎಂಬುದು ಗಮನಾರ್ಹ ಸಂಗತಿ. ಅಲ್ಲದೆ ಕಳೆದ ನವೆಂಬರ್‌ನಲ್ಲಿ ಮೂರ್ಣ ಪ್ರಮಾಣದ ನಾಯಕನಾಗಿ ನೇಮಕವಾದ ಬಳಿಕ ಶರ್ಮಾ ನಾಯಕತ್ವದಲ್ಲಿ ಗೆಲ್ಲುತ್ತಿರುವ ಸತತ ಮೂರನೇ ಸರಣಿ ಗೆಲುವು ಇದಾಗಿದೆ.
ಆಟಗಾರನಾಗಿಯೂ ರೋಹಿತ್ ಹೆಸರಿನಲ್ಲಿ ಮಹತ್ವದ ದಾಖಲೆ: ಇನ್ನು ರೋಹಿತ್ ಶರ್ಮಾ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದು ಸಾಧನೆ ಮಾತ್ರವೇ ಮಾಡಿಲ್ಲ. ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಆಟಗಾರನಾಗಿಯೂ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾ ಆಟಗಾರನಾಗಿ ತವರಿನಲ್ಲಿ ನಡೆದ ಪಂದ್ಯಗಳ ಪೈಕಿ 32 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ತಂಡದ ಭಾಗವಾಗಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ನ್ಯೂಜಿಲೆಂಡ್ ಆಟಗಾರ ಮಾರ್ಟಿಲ್ ಗಪ್ಟಿಲ್ ಇದ್ದು ಅವರು 31 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. 27 ಪಂದ್ಯಗಳಲ್ಲಿ ಗೆದ್ದಿರುವ ಟಿಮ್ ಸೌಥೀ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನು ಕಳೆದ ವಿಶ್ವಕಪ್‌ನಲ್ಲಿ ಭಾರತ ತಂಡ ಲೀಗ್ ಹಂತದಿಂದಲೇ ಆಘಾತಕಾರಿಯಾಗಿ ಹೊರಬಿದ್ದ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಸರಣಿ ಗೆಲವಿನ ಮೇಲೆ ಗೆಲುವು ಸಾಧಿಸುತ್ತಿದೆ. ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದ ಬಳಿಕ ಈವರೆಗೂ ಯಾವುದೇ ಟಿ20 ಪಂದ್ಯವನ್ನು ಕೂಡ ಭಾರತ ಸೋತಿಲ್ಲ.