
ಭಾರತೀಯ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಸಬಾ ಕರೀಂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ನಾಯಕ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಉತ್ತಮ ಪ್ರದರ್ಶನದ ಮೂಲಕ ತಂಡಕ್ಕೆ ಹೆಚ್ಚಿನ ರನ್‌ಗಳ ಕೊಡುಗೆ ನೀಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು ನಾಯಕನಾಗಿ ರೋಹಿತ್ ಶರ್ಮಾ ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ 3-0 ಅಂತರದಿಂದ ಗೆಲುವು ಸಾಧಿಸಿತ್ತು. ಅದಾದ ಬಳಿಕ ಶ್ರೀಲಂಕಾ ವಿರುದ್ಧ ನಡೆದ ಟಿ20 ಸರಣಿಯಲ್ಲಿಯೂ ಅದ್ಭುತ ಪ್ರದರ್ಶನ ನಿಡಿದ ಭಾರತ ತಂಡ 3-0 ಅಂತರದಿಂದ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಇನ್ನು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 222 ರನ್‌ಗಳ ಅಂತರದಿಂದ ಭಾರತ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯಲ್ಲಿದೆ.
ಆದರೆ ರೋಹಿತ್ ಶರ್ಮಾ ಅವರ ವೈಯಕ್ತಿಕ ಫಾರ್ಮ್ ಇತ್ತೀಚಿನ ಪಂದ್ಯಗಳನ್ನು ಗಮನಸಿದರೆ ಗಮನಾರ್ಹವಾಗಿಲ್ಲ. ಕಳೆದ ಹತ್ತು ಅಂತಾರಾಷ್ಟ್ರೀಯ ಪಂದ್ಯಗಳ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಕೇವಲ ಒಂದು ಅರ್ದ ಶತಕವನ್ನು ಮಾತ್ರವೇ ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಬಾ ಕರೀಮ್ ನಾಯಕತ್ವ ವಹಿಸಿಕೊಂಡ ಬಳಿಕ ರೋಹಿತ್ ಶರ್ಮಾ ವೈಯಕ್ತಿಕವಾಗಿ ಹೆಚ್ಚಿನ ರನ್‌ಗಳಿಸುತ್ತಿಲ್ಲ ಎಂಬ ಅಂಶವನ್ನು ಬೊಟ್ಟು ಮಾಡಿದ್ದಾರೆ.
"ರೋಹಿತ್ ಶರ್ಮಾ ಬ್ಯಾಟರ್ ಆಗಿಯೂ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ. ಅವರು ನಾಯಕನಾಗಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ಆದರೆ ತಂಡಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಉತ್ತಮ ಅಥವಾ ಶ್ರೇಷ್ಠ ನಾಯಕನಾಗಲು ಸಾಧ್ಯವಿದೆ. ಅವರು ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡಬೇಕಿದೆ" ಎಂದಿದ್ದಾರೆ ಸಬಾ ಕರೀಂ.
ಶ್ರೀಲಂಕಾ ವಿರುದ್ಧಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ 44, 1 ಹಾಗೂ 5 ರನ್‌ಗಳಿಸಿದ್ದಾರೆ. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 29 ರನ್ ಬಾರಿಸಿ ವಿಕೆಟ್ ಕಳೆದುಕೊಂಡಿದ್ದರು. ಹೀಗಾಗಿ ಮುಂದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮೇಲೆ ಕೂಡ ಒತ್ತಡ ಇದೆ.
ಇನ್ನು ಭಾರತ ತಂಡದ ಬ್ಯಾಟಿಂಗ್ ಕಾಂಬಿನೇಶನ್ ಬಗ್ಗೆ ಸಬಾ ಕರೀಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಟೀಮ್ ಇಂಡಿಯಾ ಆರಂಭಿಕ ಕಾಂಬಿನೇಶನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿದೆ ಎನಿಸುತ್ತಿಲ್ಲ. ಒಂದೇ ಪಂದ್ಯದ ಬಳಿಕ ಬದಲಾವಣೆಯನ್ನು ಯಾಕೆ ನಿರೀಕ್ಷಿಸಬೇಕು? ಭಾರತೀಯ ಕಂಡೀಶನ್‌ನಲ್ಲಿ ಮಯಾಂಕ್ ಅಗರ್ವಾಲ್ ಸಾಕಷ್ಟು ರನ್‌ಗಳಿಸಿದ್ದಾರೆ. ಅವರು ಈ ಹಿಂದೆಯೂ ರನ್‌ಗಳಿಸಲು ಪರದಾಡಿಲ್ಲ. ಆದರೆ ಅವರು ಉತ್ತಮ ಆರಂಭವನ್ನು ದೊಇಡ್ಡ ಮೊತ್ತವನ್ನಾಗಿ ಪರಿವರ್ತಿಸಬೇಕು" ಎಂದಿದ್ದಾರೆ ಸಬಾ ಕರೀಂ.
ಭಾರತ ಸಂಪೂರ್ಣ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ಉಮೇಶ್ ಯಾದವ್ , ಪ್ರಿಯಾಂಕ್ ಪಾಂಚಾಲ್, ಶ್ರೀಕರ್ ಭರತ್, ಅಕ್ಷರ್ ಪಟೇಲ್, ಸೌರಭ್ ಕುಮಾರ್
ಶ್ರೀಲಂಕಾ ಸಂಪೂರ್ಣ ಸ್ಕ್ವಾಡ್: ದಿಮುತ್ ಕರುಣಾರತ್ನೆ (ನಾಯಕ), ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಲಹಿರು ತಿರಿಮನ್ನೆ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಸುರಂಗ ಲಕ್ಮಲ್, ಲಸಿತ್ ಎಂಬುಲ್ಡೆನಿಯಾ, ವಿಶ್ವ ಫೆರ್ನಾಂಡೋ, ಲಹಿರು ಜಯವ್ ಕುಮಾರ, ಡಿ ಜಯವ್ ಕುಮಾರ, ಪ್ರವೀಣೇಶ್ ಕುಮಾರ, ಚಾಮಿಕಾ ಕರುಣಾರತ್ನೆ, ಜೆಫ್ರಿ ವಾಂಡರ್ಸೆ