ರೋಹಿತ್ ಟೆಸ್ಟ್ ತಂಡದ ನೂತನ ನಾಯಕ; ಆಯ್ಕೆ ಮಾಡುವ ಮುನ್ನವೇ ರಾಜೀನಾಮೆ ಕೊಟ್ಟ ಆಯ್ಕೆಗಾರ!

ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯವರೆಗೂ ಭಾರತ ಏಕದಿನ, ಟಿ ಟ್ವೆಂಟಿ ಹಾಗೂ ಟೆಸ್ಟ್ ಈ ಮೂರೂ ತಂಡಗಳ ನಾಯಕನಾಗಿದ್ದ ವಿರಾಟ್ ಕೊಹ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದರು. ಹೀಗೆ ಕೊಹ್ಲಿ ನಂತರ ರೋಹಿತ್ ಶರ್ಮಾ ಭಾರತ ಟಿ ಟ್ವೆಂಟಿ ತಂಡದ ನೂತನ ನಾಯಕನಾಗಿ ಆಯ್ಕೆಯಾದರು. ಅಷ್ಟೇ ಅಲ್ಲದೆ ನಂತರದ ದಿನಗಳಲ್ಲಿ ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಕೂಡ ತೆಗೆದುಹಾಕಿ ರೋಹಿತ್ ಶರ್ಮಾ ಅವರನ್ನೇ ಭಾರತ ಏಕದಿನ ತಂಡದ ನೂತನ ನಾಯಕ ಎಂದು ಘೋಷಿಸಿತು.
ಹೀಗೆ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ಕಳೆದುಕೊಂಡ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ಕೂಡ ರಾಜೀನಾಮೆಯನ್ನು ಸಲ್ಲಿಸಿದರು. ಹೀಗೆ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ಬಿಸಿಸಿಐನ ಆಯ್ಕೆಗಾರರು ಇನ್ನೂ ಸಹ ಭಾರತ ಟೆಸ್ಟ್ ತಂಡದ ನೂತನ ನಾಯಕ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಕೊಹ್ಲಿ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್ ಸರಣಿಗಳು ಮಾತ್ರ ನಡೆಯುತ್ತಿವೆ. ಹೀಗಾಗಿ ಟೆಸ್ಟ್ ತಂಡದ ನೂತನ ನಾಯಕನ ಆಯ್ಕೆಗೆ ಮುಂದಾಗದ ಆಯ್ಕೆಗಾರರು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳು ಮುಗಿದ ನಂತರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತ ಟೆಸ್ಟ್ ತಂಡದ ನೂತನ ನಾಯಕ ಯಾರು ಎಂಬುದನ್ನು ಕಡ್ಡಾಯವಾಗಿ ಘೋಷಿಸಲೇಬೇಕಾಗಿದೆ.
ಇನ್ನು ಭಾರತ ಟೆಸ್ಟ್ ತಂಡದ ಮುಂದಿನ ನಾಯಕನ ಪಟ್ಟಕ್ಕೆ ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಮತ್ತು ರಿಷಭ್ ಪಂತ್ ಈ ಮೂವರು ಆಟಗಾರರ ಹೆಸರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು, ಬಿಸಿಸಿಐನ ಅಧಿಕಾರಿಯೋರ್ವರು ಈ ಹಿಂದೆ ತಿಳಿಸಿರುವ ಪ್ರಕಾರ ರೋಹಿತ್ ಶರ್ಮಾ ಅವರನ್ನೇ ಭಾರತ ಟೆಸ್ಟ್ ತಂಡದ ನಾಯಕ ಎಂದು ಘೋಷಿಸುವುದು ಖಚಿತ ಎನ್ನಲಾಗುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಸರಣಿಗಳು ಮುಕ್ತಾಯವಾದ ಬಳಿಕ ಬಿಸಿಸಿಐ ಅಧಿಕೃತವಾಗಿ ರೋಹಿತ್ ಶರ್ಮಾ ಅವರ ಹೆಸರನ್ನು ಘೋಷಿಸಲಿದೆ ಎಂದು ಆ ಬಿಸಿಸಿಐನ ಅಧಿಕಾರಿ ಮಾಹಿತಿ ನೀಡಿದ್ದರು. ಆದರೆ ಇದೀಗ ಈ ಘೋಷಣೆ ನಡೆಯುವ ಮುನ್ನವೇ ಟೀಮ್ ಇಂಡಿಯಾ ಆಯ್ಕೆಗಾರರು ರಾಜೀನಾಮೆಯನ್ನು ಸಲ್ಲಿಸಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಮುಂದಿದೆ ಓದಿ.

ಸಭೆಗೂ ಮುನ್ನವೇ ರಾಜೀನಾಮೆ ನೀಡಿದ ಅಬೆಯ್ ಕುರುವಿಲ್ಲ
ಟೀಮ್ ಇಂಡಿಯಾ ಆಯ್ಕೆ ಸಮಿತಿಯಲ್ಲಿ ಪ್ರಮುಖರಾಗಿದ್ದ ಭಾರತದ ಮಾಜಿ ವೇಗಿ ಅಬೆಯ್ ಕುರುವಿಲ್ಲ ಭಾರತ ಟೆಸ್ಟ್ ತಂಡದ ಮುಂದಿನ ನಾಯಕ ಯಾರು ಎಂಬುದರ ಕುರಿತು ನಡೆಯಬೇಕಾಗಿದ್ದ ದೊಡ್ಡ ಸಭೆಗೂ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಹೌದು, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನವೇ ಭಾರತ ಟೆಸ್ಟ್ ತಂಡದ ನೂತನ ನಾಯಕನನ್ನು ಆಯ್ಕೆ ಮಾಡುವ ಸಲುವಾಗಿ ಈ ಸಭೆ ನಡೆಯಬೇಕಿತ್ತು ಆದರೆ ಇದೀಗ ಅಬೆಯ್ ಕುರುವಿಲ್ಲ ರಾಜೀನಾಮೆ ಸಭೆ ವಿಳಂಬವಾಗುವಂತೆ ಮಾಡಿದೆ.

ಕುರುವಿಲ್ಲಾ ರಾಜೀನಾಮೆಗೆ ಕಾರಣವೇನು?
ಇನ್ನು ಇಂತಹ ನಿರ್ಣಾಯಕ ಹಂತದಲ್ಲಿ ಅಬೆಯ್ ಕುರುವಿಲ್ಲ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ. ಈ ಪ್ರಶ್ನೆಗೆ ಉತ್ತರ ಅಬೆಯ್ ಕುರುವಿಲ್ಲ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ 5 ವರ್ಷಗಳನ್ನು ಪೂರೈಸಿರುವುದು. ಹೌದು ನಿಯಮದ ಪ್ರಕಾರ ಬಿಸಿಸಿಐನ ಆಯ್ಕೆ ಸಮಿತಿಯಲ್ಲಿ 5 ವರ್ಷಗಳ ಕಾಲ ಮಾತ್ರ ಕೆಲಸ ಮಾಡಬಹುದಾಗಿದ್ದು, ಈ ಅವಧಿ ಮುಗಿದ ನಂತರ ಯಾವುದೇ ಅಧಿಕಾರಿಯಾದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕೆಳಗಿಳಿಯಲೇಬೇಕಾಗಿದೆ. ಹೀಗಾಗಿಯೇ ಅವಧಿ ಮುಗಿದ ಅಬೆಯ್ ಕುರುವಿಲ್ಲಾ ಇದೀಗ ರಾಜಿನಾಮೆ ಸಲ್ಲಿಸಿ ಕೆಳಗಿಳಿದಿದ್ದಾರೆ.

ನೂತನ ಆಯ್ಕೆಗಾರರನ್ನು ಆರಿಸಬೇಕಿದೆ ಬಿಸಿಸಿಐ
ಅಬೆಯ್ ಕುರುವಿಲ್ಲ ರಾಜೀನಾಮೆ ನೀಡಿದ ನಂತರ ಆ ಸ್ಥಾನಕ್ಕೆ ನೂತನ ಆಯ್ಕೆಗಾರನನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ಇದೀಗ ಬಿಸಿಸಿಐಗೆ ಎದುರಾಗಿದೆ. ಶ್ರೀಲಂಕಾ ವಿರುದ್ಧದ ಸರಣಿಗೆ ತಂಡ ಪ್ರಕಟಿಸುವುದಕ್ಕೆ ಹಾಗೂ ನೂತನ ನಾಯಕನ ಆಯ್ಕೆ ಮಾಡುವುದಕ್ಕೆ ಕಡಿಮೆ ಸಮಯವಿದ್ದು, ಆದಷ್ಟು ಬೇಗ ನೂತನ ಆಯ್ಕೆಗಾರನನ್ನು ನೇಮಿಸಲೇಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications