ಮೇ 30 ಗುರುವಾರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತರ ಈಗ ಎಲ್ಲ ಟೀಮ್ ಇಂಡಿಯಾ ಆಟಗಾರರ ಸಂಪೂರ್ಣ ಗಮನ ಟಿ20 ವಿಶ್ವಕಪ್ ಮೇಲಿದೆ. ಜೂನ್ 1 ರಿಂದ ( ಭಾರತದಲ್ಲಿ ಜೂನ್ 2) ವೆಸ್ಟ್ ಇಂಡೀಸ್ ಮತ್ತು ಅಮೆರಿಕಾ ಆತಿಥ್ಯ ವಹಿಸಿರುವ ಚುಟುಕು ಕ್ರಿಕೆಟ್ ಸಮರ ಆರಂಭವಾಗಲಿದೆ.
ಟೀಮ್ ಇಂಡಿಯಾದಲ್ಲಿ ವಿಶ್ವದ ಟಾಪ್ ಆಟಗಾರರಿದ್ದರೂ 2011ರ ನಂತರ ಯಾವುದೇ ಐಸಿಸಿ ಟ್ರೋಪಿಗಳನ್ನು ಗೆದ್ದಿಲ್ಲ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಗುಂಪು 'A' ನಲ್ಲಿದೆ. ಹಾಲಿ ರನ್ನರ್ ಆಪ್ ಪಾಕಿಸ್ತಾನವನ್ನು ಹೊರತುಪಡಿಸಿ, ಐರ್ಲೆಂಡ್, ಅಮೆರಿಕ ಮತ್ತು ಕೆನಡಾ ವಿರುದ್ಧ ಟೀಮ್ ಇಂಡಿಯಾ ಸುಲಭ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದೆ.
ಬಳಿಕ ಸೂಪರ್-8 ರಲ್ಲಿ ಟೀಮ್ ಇಂಡಿಯಾಗೆ ನಿಜವಾದ ಸವಾಲು ಎದುರಿಸಲಿದೆ. ಏಕೆಂದರೆ ಇಲ್ಲಿ ಬಲಿಷ್ಠ ತಂಡಗಳೊಂದಿಗೆ ಸ್ಪರ್ಧಿಸಬೇಕಾಗಿದೆ. ಹೀಗಾಗಿ ಟೀಮ್ ಇಂಡಿಯಾಗೆ ಸವಾಲಾಗಿರುವ ತಂಡಗಳ ಮಾಹಿತಿ ಇಲ್ಲಿದೆ.

2021ರಲ್ಲಿ ಪ್ರಶಸ್ತಿ ಗೆದ್ದಿರುವ ಆಸ್ಟ್ರೇಲಿಯಾ ತಂಡದಲ್ಲಿ ಅನುಭವಿ ಆಟಗಾರರೇ ತುಂಬಿದ್ದಾರೆ. ಕ್ಯಾಮರೂನ್ ಗ್ರೀನ್ ಅವರು ತಂಡದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಕೈಕ ಆಟಗಾರ. ಜೋಶ್ ಇಂಗ್ಲಿಷ್, ಟಿಮ್ ಡೇವಿಡ್ ಮತ್ತು ನಾಥನ್ ಎಲ್ಲಿಸ್ 30 ವರ್ಷ ವಯಸ್ಸಿನವರು.
ನಾಯಕ ಮಿಚೆಲ್ ಮಾರ್ಷ್ ಹೊರತುಪಡಿಸಿ, ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ ಮತ್ತು 30 ವರ್ಷಕ್ಕಿಂತ ಮೇಲ್ಪಟ್ಟ ಪ್ಯಾಟ್ ಕಮ್ಮಿನ್ಸ್ ಇದ್ದಾರೆ. ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಗೆದ್ದಿತ್ತು. ಇಷ್ಟೆಲ್ಲಾ ಆದರೂ ಪ್ಯಾಟ್ ಅವರಿಗೆ ಈ ಬಾರಿ ಟಿ20 ನಾಯಕತ್ವ ಸಿಕ್ಕಿಲ್ಲ.
ಅವರಿಗಿಂತ ಒಂದು ವರ್ಷ ದೊಡ್ಡವರಾದ ಮಾರ್ಷ್ ಟಿ20 ವಿಶ್ವಕಪ್‌ನಲ್ಲಿ ಕಾಂಗೂರು ಪಡೆಯನ್ನು ಮುನ್ನೆಡೆಸುತ್ತಿದ್ದಾರೆ. ಈ ತಂಡದ ಬಹುತೇಕ ಆಟಗಾರರು 4 ವರ್ಷಗಳ ಕಾಲ ಜೊತೆಗಿದ್ದು, ಎಲ್ಲಾ ಮಾದರಿಯಲ್ಲೂ ಪ್ರಶಸ್ತಿ ಗೆದ್ದಿರುವ ಸಾಧನೆ ಮಾಡಿದ್ದಾರೆ. ಐಸಿಸಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಲಘುವಾಗಿ ಪರಿಗಣಿಸಿದ ತಪ್ಪನ್ನು ಟೀಮ್ ಇಂಡಿಯಾ ಮಾಡಬಾರದು.

ಹಾಲಿ ಚಾಂಪಿಯನ್ ಇಂಗ್ಲೆಂಡ್ ಇತ್ತೀಚಿನ ದಿನಗಳಲ್ಲಿ ಸೀಮಿತ ಓವರ್‌ಗಳಲ್ಲಿ (ಏಕದಿನ ಮತ್ತು ಟಿ20) ತನ್ನ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಿದೆ. ಯಾವುದೇ ಪರಿಸ್ಥಿತಿಯಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಬಲ್ಲ ಆಟಗಾರರು ತಂಡದಲ್ಲಿದ್ದಾರೆ.
ಜೋಸ್ ಬಟ್ಲರ್ ನೇತೃತ್ವದ ತಂಡವು ಕೊನೆಯ ಬಾರಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಹೀಗಿರುವ ತಂಡದಲ್ಲಿ ಬಹುತೇಕ ಆಟಗಾರರು ಅನುಭವಿಗಳಾಗಿದ್ದು, ಕೊನೆಯ ಬಾರಿ ಟಿ20 ವಿಶ್ವಕಪ್‌ನಲ್ಲಿ ಕಣಕ್ಕೀಳಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ಸಜ್ಜಾಗಿದೆ.

ಕೇನ್ ವಿಲಿಯಮ್ಸನ್ ಯಾವಾಗಲೂ ನ್ಯೂಜಿಲೆಂಡ್ ತಂಡವನ್ನು ವಿಶ್ವಕಪ್ ಫೈನಲ್ಸ್ ಮತ್ತು ಸೆಮಿಫೈನಲ್‌ಗೆ ಕೊಂಡೊಯ್ಯವಲ್ಲಿ ಯಶಸ್ವಿಯಾಗಿದ್ದಾರೆ. ನ್ಯೂಜಿಲೆಂಡ್ ಕೂಡ ಭಾರತಕ್ಕೆ ಸವಾಲಾಗಿದೆ. 2019ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತವನ್ನು ನ್ಯೂಜಿಲೆಂಡ್ ಸೋಲಿಸಿದೆ.
ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡೆವೊನ್ ಕಾನ್ವೇ, ಮೈಕಲ್ ಬ್ರೇಸ್‌ವೆಲ್, ಮಿಚ್ ಸ್ಯಾಂಟ್ನರ್ ಮತ್ತು ಜೇಮ್ಸ್ ನೀಶಮ್ ಅಂತಹ 30 ವರ್ಷ ದಾಟಿದ ಅನೇಕ ಹಿರಿಯ ಆಟಗಾರರನ್ನು ವಿಲಿಯಮ್ಸನ್ ತಮ್ಮ ಆಡುವ 11ರ ಬಳಗದಲ್ಲಿ ಹೊಂದಿದ್ದಾರೆ.
ಕಳೆದ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಆಡಿದ ತಂಡಕ್ಕಿಂತ ಈ ತಂಡ ಭಿನ್ನವಾಗಿಲ್ಲ. ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ಯಾವಾಗಲೂ ಭಾರತಕ್ಕೆ ತೊಂದರೆ ನೀಡುತ್ತಲೇ ಬಂದಿದೆ. ಹೀಗಾಗಿ ರೋಹಿತ್ ಶರ್ಮಾ ಬಳಗ ಈ ತಂಡವನ್ನು ಹೇಗೆ ಮಣಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಕಳೆದ ಋತುವಿನಲ್ಲಿ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡವು ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದರು. ಈ ಬಾರಿಯೂ ಪಾಕಿಸ್ತಾನ ಅದೇ ಬಲಿಷ್ಠ ತಂಡವಾಗಿ ಬಂದಿದೆ. ಆದರೆ ಇತ್ತೀಚೆಗೆ ಚುಟುಕು ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡದಿಂದ ಹೇಳಿಕೊಳ್ಳುವಂತ ಪ್ರದರ್ಶನ ಬಂದಿಲ್ಲ.
ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಮೇಲೆ ಪಿಸಿಬಿ ಒಲವು ತೋರಿಸಿದೆ. ಹೀಗಾಗಿ ಮೊಹಮ್ಮದ್ ಅಮೀರ್ ಮತ್ತು ಇಮಾದ್ ವಾಸಿಮ್ ತಂಡಕ್ಕೆ ಮರಳಲಿದ್ದಾರೆ. ಅಜಂ ಖಾನ್, ಅಬ್ರಾರ್ ಅಹಮದ್ ಮತ್ತು ಸ್ಯಾಮ್ ಅಯೂಬ್ ಸೇರ್ಪಡೆ ಕೂಡ ತಂಡಕ್ಕೆ ಬಲ ತಂದಿದೆ.
2021ರ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸಿತ್ತು. ಇದರಿಂದಾಗಿ ಭಾರತ ಸೂಪರ್-12ರಲ್ಲಿಯೇ ಹೊರಬೀಳಬೇಕಾಯಿತು. ಬಳಿಕ 2022ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿತ್ತು.
ಆದರೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಅದ್ಭುತ ಇನ್ನಿಂಗ್ಸ್‌ನಿಂದ ಟೀಮ್ ಇಂಡಿಯಾ ಗೆದ್ದಿತ್ತು. ಹೀಗಾಗಿ ಯಾವುದೇ ಸುತ್ತಿನಲ್ಲೂ ಪಾಕಿಸ್ತಾನ ತಂಡವನ್ನು ಹಗುರವಾಗಿ ಭಾರತ ಪರಿಗಣಿಸುವಂತಿಲ್ಲ.

ವೆಸ್ಟ್ ಇಂಡೀಸ್ ತಂಡವು ಟಿ20 ಕ್ರಿಕೆಟ್‌ನಲ್ಲಿ ಯಾವಾಗಲೂ ಉತ್ತಮ ಪ್ರದರ್ಶನ ನೀಡುತ್ತ ಬಂದಿದೆ. ಈ ಬಾರಿ ಟೂರ್ನಿಯ ಆತಿಥ್ಯವನ್ನೂ ವೆಸ್ಟ್ ಇಂಡೀಸ್ ವಹಿಸಿದೆ. ಇಂತಹ ಪರಿಸ್ಥಿತಿಯಲ್ಲಿ ವಿಂಡೀಸ್ ಯಾವುದೇ ತಂಡಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು.
ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿರುವ ವಿಂಡೀಸ್ ತಂಡ ಈ ಬಾರಿ ಹಲವು ಮ್ಯಾಚ್ ವಿನ್ನರ್ ಆಟಗಾರರನ್ನು ಹೊಂದಿದೆ. ಪವರ್ ಹಿಟ್ಟಿಂಗ್‌ಗೆ ಹೆಸರುವಾಸಿಯಾಗಿರುವ ವೆಸ್ಟ್ ಇಂಡೀಸ್ ಆಟಗಾರರು ಯಾವುದೇ ರೀತಿಯ ಬೌಲಿಂಗ್ ಅನ್ನು ಧೂಳಿಪಟ ಮಾಡಬಲ್ಲರು.
2016ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತವನ್ನು ಸೋಲಿಸಿತ್ತು. ಈ ಸೋಲಿನ ನೋವು ಇಂದಿಗೂ ವಿರಾಟ್ ಕೊಹ್ಲಿ ಅವರ ಮನಸ್ಸಿನಲ್ಲಿದೆ. ಈ ಬಗ್ಗೆ ಸ್ವತಃ ಕೊಹ್ಲಿ ಅವರು ಹೇಳಿಕೊಂಡಿದ್ದಾರೆ. ಇದರಿಂದ ಈ ಬಾರಿ ವಿಂಡೀಸ್ ತಂಡವನ್ನು ಹೇಗೆ ಟೀಮ್ ಇಂಡಿಯಾ ಎದುರಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.