Women's T20 World Cup: ಭಾರತ-ಇಂಗ್ಲೆಂಡ್ ಮುಖಾಮುಖಿ: ಗೆದ್ದರೆ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತ

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಇಂದು ಭಾರತ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಸೆಣೆಸಲಿದೆ. ಉಭಯ ತಂಡಗಳು ಇದುವರೆಗೂ ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಅಜೇಯವಾಗಿ ಉಳಿದಿವೆ.
ಶನಿವಾರ ನಡೆಯುವ ಪಂದ್ಯದಲ್ಲಿ ಗೆಲ್ಲುವ ತಂಡ ಬಹುತೇಕ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಎರಡೂ ತಂಡಗಳಿಗೆ ಇದು ಪ್ರತಿಷ್ಠೆಯ ಪಂದ್ಯವಾಗಿರುವುದರಿಂದ ಗೆಲುವಿಗಾಗಿ ರೋಚಕ ಹಣಾಹಣಿ ನಿರೀಕ್ಷೆ ಮಾಡಲಾಗಿದೆ.
ಭಾರತ ಈಗಾಗಲೇ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಕೂಡ ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಸಾಧಿಸಿ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಉತ್ತಮ ರನ್ ರೇಟ್ ಹೊಂದಿರುವ ಕಾರಣ ಇಂಗ್ಲೆಂಡ್ ಮೊದಲನೇ ಸ್ಥಾನವನ್ನು ಅಲಂಕರಿಸಿದೆ.
ಬಿ ಗುಂಪಿನಲ್ಲಿ ಭಾರತಕ್ಕೆ ಇರುವ ಕಠಿಣ ಎದುರಾಳಿ ಇಂಗ್ಲೆಂಡ್ ಒಂದೇ ಆಗಿದೆ. ಈ ಪಂದ್ಯದ ನಂತರ ಅದು ಐರ್ಲೆಂಡ್ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಫೆಬ್ರವರಿ 20ರಂದು ಆಡಲಿದೆ.

ಉತ್ತಮ ಲಯದಲ್ಲಿದೆ ಭಾರತ
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಬಲಿಷ್ಠವಾಗಿದೆ. ಅದರಲ್ಲೂ ಮೊದಲ ಎರಡು ಪಂದ್ಯಗಳಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ ಭಾರತ ತಂಡ ಗೆಲುವು ಸಾಧಿಸಿದೆ. ರಿಚಾ ಘೋಷ್ ಉತ್ತಮ ಫಾರ್ಮ್‌ನಲ್ಲಿದ್ದು, ಭಾರತ ತಂಡಕ್ಕೆ ಗೆಲುವಿನ ರನ್ ಗಳಿಸುತ್ತಿದ್ದಾರೆ.
ಬೌಲಿಂಗ್‌ನಲ್ಲಿ ದೀಪ್ತಿ ಶರ್ಮಾ ಮತ್ತು ರೇಣುಕಾ ಠಾಕೂರ್ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ನೀಡಿದ ಪ್ರದರ್ಶನವನ್ನೇ ಇಂಗ್ಲೆಂಡ್ ವಿರುದ್ಧ ನೀಡಿದರೆ ಭಾರತ ಮತ್ತೊಂದು ಗೆಲುವನ್ನು ತನ್ನದಾಗಿಸಿಕೊಳ್ಳಬಹುದಾಗಿದೆ.
ಭಾರತದ ಸ್ಪಿನ್ ದಾಳಿಯನ್ನು ಎದುರಿಸುವುದು ಇಂಗ್ಲೆಂಡ್ ತಂಡಕ್ಕೆ ಸವಾಲಾಗಿದೆ. ಉಭಯ ತಂಡಗಳು ಮುಖಾಮುಖಿಯಾಗಿರುವ ಕೊನೆಯ 10 ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ 6 ಬಾರಿ ಜಯ ಸಾಧಿಸಿದ್ದು, ಭಾರತ 4 ಬಾರಿ ಗೆದ್ದಿದೆ.

ಬ್ಯಾಟಿಂಗ್‌ಗೆ ನೆರವಾಗುವ ಪಿಚ್
ಸೇಂಟ್ ಜಾರ್ಜ್ ಪಾರ್ಕ್ ಪಿಚ್ ಬ್ಯಾಟಿಂಗ್ ಮಾಡಲು ಹೆಚ್ಚಿನ ನೆರವು ನೀಡುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್ ಗಳಿಸಿದರೆ ಗೆಲುವು ಸುಲಭವಾಗುತ್ತದೆ. ಪಂದ್ಯದ ಅಂತಿಮ ಹಂತದಲ್ಲಿ ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ಸಿಗಲಿದೆ.
ಭಾರತೀಯ ಕಾಲಮಾನ ಸಂಜೆ 6.30ಕ್ಕೆ ಪಂದ್ಯ ಆರಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರವಾಗಲಿದೆ. ಡಿಸ್ನಿ ಹಾಟ್‌ಸ್ಟಾರ್ ಒಟಿಟಿ ವೇದಿಕೆಯಲ್ಲಿ ಕೂಡ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಸ್ಮೃತಿ ಮಂದಾನ, ಶಫಾಲಿ ವರ್ಮಾ, ದೇವಿಕಾ ವೈದ್ಯ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಶಿಖಾ ಪಾಂಡೆ, ರಾಧಾ ಯಾದವ್, ರೇಣುಕಾ ಸಿಂಗ್ ಠಾಕೂರ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್.
ಇಂಗ್ಲೆಂಡ್: ಸೋಫಿಯಾ ಡಂಕ್ಲಿ, ಡೇನಿಯಲ್ ವ್ಯಾಟ್, ಆಲಿಸ್ ಕ್ಯಾಪ್ಸೆ, ನಟಾಲಿ ಸ್ಕಿವರ್, ಹೀದರ್ ನೈಟ್ (ನಾಯಕಿ), ಆಮಿ ಜೋನ್ಸ್ (ವಿಕೆಟ್ ಕೀಪರ್), ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟೋನ್, ಚಾರ್ಲಿ ಡೀನ್, ಸಾರಾ ಗ್ಲೆನ್, ಲಾರೆನ್ ಬೆಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications