ನವದೆಹಲಿ, ಫೆ.2: ವಿಶ್ವಕಪ್ 2015ರಲ್ಲಿ ಆಡಲಿರುವ ಟೀಂ ಇಂಡಿಯಾಕ್ಕೆ ಸೇರಲು ಸಾಧ್ಯವಾಗದ ಒಂದು ಕಾಲದ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದರ್ ಸೆಹ್ವಾಗ್ ಅವರು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಮುಂಬರುವ ವಿಶ್ವಕಪ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತದ ಸಾಧನೆ ಗಮನಿಸಿದರೆ ವಿಶ್ವಕಪ್ ನಲ್ಲಿ ಉಪಾಂತ್ಯದ ತನಕ ತಲುಪುವುದು ಗ್ಯಾರಂಟಿ. ಅದರೆ, ಆಮೇಲೆ ಕಷ್ಟ ಎಂದಿದ್ದಾರೆ.
ಟೀಂ ಇಂಡಿಯಾ ಹೊರತು ಪಡಿಸಿದರೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ತಲುಪಬಹುದಾಗಿದೆ. ಅದರೆ, ಸೆಮಿಫೈನಲ್ ನಲ್ಲಿ ಭಾರತ ಹೇಗೆ ಆಡುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿಸುತ್ತದೆ. ಉತ್ತಮ ಪ್ರದರ್ಶನ ನೀಡಿದರೆ ಫೈನಲ್ ತಲುಪಬಹುದು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಇತ್ತೀಚಿನ ಸರಣಿಯಲ್ಲಿ ಒಂದು ಪಂದ್ಯವನ್ನು ಗೆಲ್ಲಲು ಭಾರತ ಸಾಧ್ಯವಾಗಲಿಲ್ಲ. ಅದರೆ, 2003ರ ವಿಶ್ವಕಪ್ ವೇಳೆಯಲ್ಲಿ ಇದೇ ಪರಿಸ್ಥಿತಿ ಇತ್ತು. ನ್ಯೂಜಿಲೆಂಡ್ ವಿರುದ್ಧ 2-5 ಸರಣಿ ಸೋಲು ಅನುಭವಿಸಿದರೂ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿತು ಎಂದಿದ್ದಾರೆ.
ಬಿಗ್ 92.7 ಎಫ್ ಎಂ ವಾಹಿನಿಯಲ್ಲಿ ಕ್ರಿಕೆಟ್ ಕಾ ಬಿಗ್ ಹೆಡ್ ಕ್ವಾರ್ಟರ್ ಎಂಬ ಹೆಸರಿನ ಕಾರ್ಯಕ್ರಮಕ್ಕೆ ಸೆಹ್ವಾಗ್ ಚಾಲನೆ ನೀಡಿದರು. ಇದರ ಜೊತೆಗೆ ಸದ್ಯಕ್ಕೆ ನಿವೃತ್ತಿ ಹೊಂದುತ್ತಿಲ್ಲ ಎಂದು ಸೆಹ್ವಾಗ್ ಘೋಷಿಸಿದರು.
36 ವರ್ಷ ವಯಸ್ಸಿನ ಸೆಹ್ವಾಗ್ ಅವರು ಇನ್ನು ಎರಡು ವರ್ಷವಾದರೂ ಕ್ರಿಕೆಟ್ ವೃತ್ತಿ ಮುಂದುವರೆಸುವೆ ಎಂದರು. ಈಗಿನ ಐದು ಜನ ಫೀಲ್ಡರ್ ನಿಯಮ ಬ್ಯಾಟ್ಸ್ ಮನ್ ಗಳಿಗೆ ತೊಂದರೆ ಉಂಟು ಮಾಡಲಿದೆ. ವಿಶ್ವಕಪ್ ನಲ್ಲಿ ಹೇಗೆ ನಿಯಮ ಅಳವಡಿಸಲಾಗುತ್ತದೆ ನೋಡಬೇಕು ಎಂದರು. (ಪಿಟಿಐ)