ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 28 ರನ್‌ಗಳ ಸೋಲನ್ನು ಎದುರಿಸಬೇಕಾಯಿತು. ಈಗ ಎರಡನೇ ಪಂದ್ಯ ಫೆಬ್ರವರಿ 2 ರಿಂದ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಹೈದರಾಬಾದ್‌ನಲ್ಲಿ ಕಂಡಿದ್ದ ಸೋಲನ್ನು ಮರೆತು ಟೀಮ್ ಇಂಡಿಯಾ ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ. ಅಲ್ಲದೆ ರೋಹಿತ್ ಶರ್ಮಾ ಪಡೆ ಈ ಅಂಗಳಕ್ಕೆ ಪ್ರವೇಶಿಸುತ್ತಿದ್ದಂತೆ ವಿಶೇಷ ದಾಖಲೆಯನ್ನು ಬರೆಯಲಿದೆ.
ಈ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಕಟ್ಟಿ ಹಾಕಿ ಸರಣಿ ಸಮಬಲ ಗೊಳಿಸುವ ಇರಾದೆಯನ್ನು ಹೊಂದಿದೆ. ವಿಶಾಖಪಟ್ಟಣಂನ ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತದ ಟೆಸ್ಟ್ ದಾಖಲೆ ಉತ್ತಮವಾಗಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಬೆಸ್ಟ್ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಮಿಡ್ಲ್ ಆರ್ಡರ್‌ನಲ್ಲಿ ತಂಡಕ್ಕೆ ಆಧಾರವಾಗಬಲ್ಲ ಕೆಎಲ್ ರಾಹುಲ್ ಗಾಯದ ಕಾರಣ ಎರಡನೇ ಟೆಸ್ಟ್‌ನಿಂದ ಹೊರಗುಳಿದಿರುವುದು ತಂಡಕ್ಕೆ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು.

ಭಾರತ ತಂಡವು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ವಿಶಿಷ್ಟ ದಾಖಲೆಯನ್ನು ಮಾಡಲಿದೆ. ಏಕೆಂದರೆ ವಿಶಾಖಪಟ್ಟಣಂನಲ್ಲಿ ನಡೆಯುವ ಪಂದ್ಯದಲ್ಲಿ ಭಾರತವು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಆಲ್‌ರೌಂಡರ್ ರವೀಂದ್ರ ಜಡೇಜಾ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಅಥವಾ ಅಜಿಂಕ್ಯ ರಹಾನೆ ಇಲ್ಲದೆ ಅಂಗಳಕ್ಕೆ ಪ್ರವೇಶಿಸಲಿದೆ. ಕಳೆದ 4467 ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಸಂಭವಿಸಿಲ್ಲ. ಆರ್ ಅಶ್ವಿನ್ ಜೊತೆಗೆ ಈ ನಾಲ್ಕು ಆಟಗಾರರು ಕಳೆದ ದಶಕದಲ್ಲಿ ಈ ಸ್ವರೂಪದಲ್ಲಿ ಭಾರತ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿದ್ದರು.
ವಿಶಾಖಪಟ್ಟಣಂನ ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ತಂಡವು ಇಲ್ಲಿಯವರೆಗೆ ಯಾವುದೇ ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಈ ಕ್ರೀಡಾಂಗಣದಲ್ಲಿ ಇದುವರೆಗೆ 2 ಟೆಸ್ಟ್ ಪಂದ್ಯಗಳನ್ನು ಆಡಿರುವ ಟೀಮ್ ಇಂಡಿಯಾ ಎರಡರಲ್ಲೂ ಭರ್ಜರಿ ಜಯ ದಾಖಲಿಸಿದೆ. ವಿಶೇಷವೆಂದರೆ ಈ ಮೈದಾನದಲ್ಲಿ ಆಡಿದ ಎರಡೂ ಟೆಸ್ಟ್ ಪಂದ್ಯಗಳನ್ನು ಭಾರತ ತಂಡ 200ಕ್ಕೂ ಹೆಚ್ಚು ರನ್ ಗಳ ಅಂತರದಿಂದ ಗೆದ್ದುಕೊಂಡಿದೆ.

ಭಾರತ ತಂಡವು ನವೆಂಬರ್ 2016 ರಲ್ಲಿ ಇಂಗ್ಲೆಂಡ್ ವಿರುದ್ಧ ಈ ಮೈದಾನದಲ್ಲಿ ತನ್ನ ಮೊದಲ ಟೆಸ್ಟ್ ಆಡಿತು, ಇದರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಇನ್ನಿಂಗ್ಸ್ ಆಡುವಾಗ 167 ಮತ್ತು 81 ರನ್ ಗಳಿಸಿದರು. ಆ ಪಂದ್ಯದಲ್ಲಿ ಟೀಂ ಇಂಡಿಯಾ 246 ರನ್‌ಗಳ ಜಯ ಸಾಧಿಸಿತ್ತು. ಕಿಂಗ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಆದರೆ ಈ ಬಾರಿ ವಿಶಾಖಪಟ್ಟಣದಲ್ಲಿ ಕೊಹ್ಲಿ ಅನುಪಸ್ಥಿತಿ ಬಹುವಾಗಿ ಕಾಡಲಿದೆ.
ದೇಶೀಯ ಕ್ರಿಕೆಟ್‌ನಲ್ಲಿ ತನ್ನ ಆಲ್‌ರೌಂಡರ್ ಪ್ರದರ್ಶನದಿಂದ ಗಮನ ಸೆಳೆದಿರುವ ಉತ್ತರ ಪ್ರದೇಶದ ಸೌರಭ್ ಕುಮಾರ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಇವರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಶಿಸ್ತು ಬದ್ಧ ಸ್ಪಿನ್ ದಾಳಿ ಹಾಗೂ ಬ್ಯಾಟಿಂಗ್ ನಿಂದಲೇ ಸದ್ದು ಮಾಡಿದ್ದ ಆಟಗಾರ. ಸ್ಟಾರ್ ಆಲ್‌ರೌಂಡರ್ ಗಾಯಕ್ಕೆ ತುತ್ತಾಗಿ ಎರಡನೇ ಟೆಸ್ಟ್‌ನಿಂದ ಹೊರಗುಳಿದಿರುವುದುರಿಂದ ಸೌರಭ್ ಕುಮಾರ್‌ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಇವರು ಸಹ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗಬಲ್ಲರು. ಇನ್ನು ಸರ್ಫರಾಜ್ ಖಾನ್ ಅಥವಾ ರಜತ್ ಪಟಿದಾರರಲ್ಲಿ ಒಬ್ಬರು ಪದಾರ್ಪಣೆ ಪಂದ್ಯವನ್ನು ಆಡಬಹುದು ಇವರಲ್ಲಿ ಯಾರೇ ಪದಾರ್ಪಣೆ ಮಾಡಿದರೂ, ಮಿಡ್ಲ್ ಆರ್ಡರ್ ಸ್ಟ್ರೆಂತ್ ಆಗಲಿದೆ.