ಪಂದ್ಯದಲ್ಲಿ ತಿರುಗಿ ಬೀಳಲು ನಿರ್ಧರಿಸಿದ್ದೆವು: ವಿರಾಟ್ ಕೊಹ್ಲಿ
ಅಂತೂ ಇಂತೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದುಕೊಂಡಿದೆ. ಬೌಲರ್ ಗಳಿಗೆ ಅಪಾರ ನೆರವನ್ನಿತ್ತ ಪಿಚ್ ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನಡೆಸಿದ ರವಿಚಂದ್ರನ್ ಅಶ್ವಿನ್, ಮಂಗಳವಾರ ನಡೆದ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಎದುರಾಳಿಗಳ ಆರು ವಿಕೆಟ್ ಉರುಳಿಸುವ ಮೂಲಕ ಭಾರತದ 75 ರನ್ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.
ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ, ''ಪಂದ್ಯದಲ್ಲಿ ನಾವು ತಿರುಗಿಬೀಳಬೇಕೆಂದು ನಾವು ಮೊದಲೇ ನಿರ್ಧರಿಸಿದ್ದೆವು. ಪಂದ್ಯದ ಗೆಲವಿನ ಶ್ರೇಯಸ್ಸಿನ ಸಿಂಹಪಾಲು ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರಿಗೇ ಸಲ್ಲಬೇಕು. ಅವರಿಬ್ಬರ ಜಿಗುಟುತನದ ಬ್ಯಾಟಿಂಗ್ ನಿಂದಲೇ ನಾವು (ಭಾರತ) ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಮೊತ್ತ ಕಲೆಹಾಕಲು ಸಾಧ್ಯವಾಯಿತು ಎಂದರು.
ಇನ್ನು, ನಮ್ಮ ಗೆಲವಿನ ಹಿರಿಮೆಯು ಎರಡನೆಯದಾಗಿ ಅಶ್ವಿನ್ ಅವರಿಗೆ ಸಲ್ಲುತ್ತದೆ. ಆಸೀಸ್ ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಕೈಚಳಕ ಪ್ರದರ್ಶಿಸಿದ ಅವರು, ಪ್ರಮುಖ ವಿಕೆಟ್ ಗಳನ್ನು ಬೇಗನೇ ಕೆಡವಿ ಭಾರತದ ಗೆಲವಿನ ಹಾದಿಯನ್ನು ಮತ್ತಷ್ಟು ಸಲೀಸಾಗಿಸಿದರು ಎಂದು ಕೊಹ್ಲಿ ಕೊಂಡಾಡಿದ್ದಾರೆ.
ಪಂದ್ಯದ ಮೊದಲ ದಿನವೇ ತನ್ನ ಮೊದಲ ಇನಿಂಗ್ಸ್ ನಲ್ಲಿ ಕೇವಲ 189 ರನ್ ಗಳಿಗೆ ಆಲೌಟ್ ಆಗಿದ್ದ ಭಾರತ ತಂಡವು, ಈ ಪಂದ್ಯದಲ್ಲೂ ಸೋಲುವ ಭೀತಿಯಲ್ಲಿತ್ತು. ಆದರೆ, ಪಂದ್ಯದ ಮೂರನೇ ದಿನವಾದ ಸೋಮವಾರ ಭಾರತದ ಎರಡನೇ ಇನಿಂಗ್ಸ್ ವೇಳೆ ಕ್ರೀಸ್ ಗೆ ಕಚ್ಚಿಕೊಂಡು ಆಡಿದ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ 5ನೇ ವಿಕೆಟ್ ಗೆ 118 ರನ್ ಜತೆಯಾಟ ನೀಡುವ ಮೂಲಕ ಇನಿಂಗ್ಸ್ ಗೆ ಶಕ್ತಿ ತುಂಬಿದರು.
ಇವರಿಬ್ಬರ ಸಮಯೋಚಿತ ಬ್ಯಾಟಿಂಗ್ ಬೆಂಬಲದಿಂದಾಗಿ, ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ 274 ರನ್ ಗಳಷ್ಟು ಮೊತ್ತ ದಾಖಲಿಸಲು ಸಾಧ್ಯವಾಯಿತು. ಇದರ ನೆರವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡ ಸ್ಪಿನ್ನರ್ ಅಶ್ವಿನ್, ಸ್ಪಿನ್ ಬೌಲಿಂಗ್ ಗೆ ಅಗಾಧವಾಗಿ ನೆರವು ನೀಡುತ್ತಿದ್ದ ಪಿಚ್ ನಲ್ಲಿ ಮಿಂಚಿ ಭಾರತದ ಗೆಲವಿಗೆ ಕಾರಣರಾದರು.
ಅಂದಹಾಗೆ, ಈವರೆಗೆ ಚಿನ್ನಸ್ವಾಮಿ ಅಂಗಳದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಆಡಿರುವ ಟೆಸ್ಟ್ ಪಂದ್ಯಗಳ ಸಂಖ್ಯೆ ಆರು. ಈ ಪಂದ್ಯವೂ ಸೇರಿದಂತೆ ಭಾರತ ಈವರೆಗೆ ಅಲ್ಲಿ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, 2ರಲ್ಲಿ ಸೋಲು ಹಾಗೂ ಮತ್ತೆರಡು ಪಂದ್ಯಗಳು ಡ್ರಾ ಆಗಿವೆ.
ಹಾಲಿ ಟೆಸ್ಟ್ ಪಂದ್ಯದಲ್ಲಿ ಮಂಗಳವಾರದ ದಿನದಾಟದ ಕೆಲವಾರು ಫೋಟೋ ಝಲಕ್ ಇಲ್ಲಿವೆ.

ಅರ್ಧಶತಕದ ಸಂಭ್ರಮ
ಮಂಗಳವಾರದ ದಿನ ಅಜಿಂಕ್ಯ ರಹಾನೆಯವರು ಅರ್ಧ ಶತಕ ಸಿಡಿಸಿದಾಗ ತಮ್ಮ ಬ್ಯಾಟ್ ಎತ್ತಿ ಪ್ರೇಕ್ಷಕರತ್ತ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದು ಹೀಗೆ.

ಪೆವಿಲಿಯನ್ ನತ್ತ ಪೂಜಾರ
ಭಾರತದ 2ನೇ ಇನಿಂಗ್ಸ್ ನಲ್ಲಿ 92 ರನ್ ಗಳಿಸಿದ ಚೇತೇಶ್ವರ ಪೂಜಾರ ಅವರು, ಮಧ್ಯಮ ವೇಗಿ ಜೋಶ್ ಹ್ಯಾಜೆಲ್ ವುಡ್ ಅವರ ಬೌಲಿಂಗ್ ನಲ್ಲಿ ಮಿಚೆಲ್ ಮಾರ್ಷ್ ಗೆ ಕ್ಯಾಚಿತ್ತು ನಿರ್ಗಮಿಸಿದ್ದು ಹೀಗೆ.

ವೇಗಿ v/s ಸ್ಪಿನ್ನರ್
ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು, ಜೋಶ್ ಹ್ಯಾಜೆಲ್ ವುಡ್ ಅವರ ಬೌಲಿಂಗ್ ನಲ್ಲಿ ಬೌಲ್ಡ್ ಆಗಿದ್ದು ಹೀಗೆ.

ಜೋಶ್ ಜಾಲಿ
ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತು ಆಸೀಸ್ ಬೌಲರ್ ಗಳನ್ನು ಕಾಡಿದ್ದ ಚೇತೇಶ್ವರ ಪೂಜಾರ ಅವರ ವಿಕೆಟ್ ಉರುಳಿಸಿದ ಖುಷಿಯಲ್ಲಿ ಜೋಶ್ ಹ್ಯಾಜೆಲ್ ವುಡ್.

ಬೌಲರ್ ಗಳಿಗೆ ತಲೆನೋವು
ಮಂಗಳವಾರದ ದಿನದಾಟದಲ್ಲಿ ಭಾರತದ ಪರವಾಗಿ ಅರ್ಧಶತಕ ಸಿಡಿಸಿದ ಅಜಿಂಕ್ಯ ರಹಾನೆ ಅವರ ಬ್ಯಾಟಿಂಗ್ ವೈಖರಿಯಿದು.

ಚೆಂಡಿನತ್ತ ಪೂಜಾರ ದೃಷ್ಟಿ
ಉತ್ತಮವಾಗಿ ಆಡಿಯೂ ಶತಕ ವಂಚಿತರಾದ ಚೇತೇಶ್ವರ ಪೂಜಾರ ಅವರ ಬ್ಯಾಟಿಂಗ್ ಶೈಲಿಯಿದು. ಶತಕ ವಂಚಿರಾದರೇನಂತೆ, ಭಾರತದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಈ ರಾಜ್ ಕೋಟ್ ಕ್ರಿಕೆಟ್ ಪ್ರತಿಭೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications