ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಹಾಗೂ ರಿಚಾ ಘೋಷ್ ಬಾರಿಸಿದ ಅರ್ಧಶತಕ ನೆರವಿನಿಂದ ಟೀಮ್ ಇಂಡಿಯಾ ಮಹಿಳಾ ತಂಡ ಮುಂಬೈನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ 60 ರನ್‌ಗಳಿಂದ ಪ್ರವಾಸಿ ವೆಸ್ಟ್ ಇಂಡೀಸ್ ವನಿತೆಯರ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಸರಣಿಯಲ್ಲಿ ಭಾರತ 2-1 ರಿಂದ ಜಯ ಸಾಧಿಸಿದೆ. ಇನ್ನು ಟೂರ್ನಿಯಲ್ಲಿ ಸ್ಮೃತಿ ಮಂಧನಾ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ರಿಚಾ ಘೋಷ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ಮಹಿಳಾ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 217 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ವಿಂಡೀಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 157 ರನ್ ಸೇರಿಸಿ ಸೋಲು ಕಂಡಿತು.

- ಸ್ಮೃತಿ ಮಂಧನಾ ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದರು. ಇವರು ಮುಂಬೈನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಮೂರು ಪಂದ್ಯಗಳಲ್ಲಿ 64.33 ಸರಾಸರಿಯಲ್ಲಿ 193 ರನ್ ಗಳಿಸಿದರು. ದ್ವಿಪಕ್ಷೀಯ ಟಿ20 ಸರಣಿಗಳಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ದಾಖಲೆ ಸ್ಮೃತಿ ನಿರ್ಮಿಸಿದರು. ಈ ಮೊದಲು ಈ ದಾಖಲೆ ಭಾರತದ ಲೇಡಿ ತೆಂಡೂಲ್ಕರ್ ಖ್ಯಾತಿಯ ಮಿಥಾಲಿ ರಾಜ್ ಹೆಸರಲ್ಲಿತ್ತು. ಇವರು 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 192 ರನ್ ಸಿಡಿಸಿದ್ದರು.
- ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ್ತಿ ಎಂಬ ಕೀರ್ತಿ ಸಹ ಸ್ಮೃತಿ ಪಾಲಾಗಿದೆ. ಸ್ಮೃತಿ ಮಂಧನಾ ಅವರು 23 ಪಂದ್ಯಗಳಲ್ಲಿ 42.38 ಸರಾಸರಿಯಲ್ಲಿ 763 ರನ್ ಸಿಡಿಸಿದ್ದಾರೆ. ಈ ಮೂಲಕ ಸ್ಮೃತಿ ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು 21 ಪಂದ್ಯಗಳಲ್ಲಿ 720 ರನ್ ಗಳಿಸಿದ್ದಾರೆ.
- ಸ್ಮೃತಿ ಮಂಧಾನ ಒಂದು ಕ್ಯಾಲೆಂಡರ್ ವರ್ಷದಲ್ಲಿ ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು 50 ಪ್ಲಸ್ ಸ್ಕೋರ್ ಗಳಿಸಿದ ದಾಖಲೆ ಮಾಡಿದ್ದಾರೆ. ಅವರು ಮಿಥಾಲಿ ರಾಜ್ ಅವರನ್ನು ಹಿಂದೆ ಹಾಕಿದ್ದಾರೆ. ಮಿಥಾಲಿ 2018 ರಲ್ಲಿ ಏಳು ಬಾರಿ 50 ಪ್ಲಸ್ ಗಳಿಸಿದರು.

- ಮೂರನೇ ಪಂದ್ಯದಲ್ಲಿ ಸ್ಮೃತಿ ಮಂಧನಾ ಅವರು ಅರ್ಧಶತಕ ಬಾರಿಸುತ್ತಿದ್ದಂತೆ ದಾಖಲೆ ಬರೆದರು. ಇವರು 50ಕ್ಕೂ ಹೆಚ್ಚು ರನ್ ಗಳನ್ನು 30 ಬಾರಿ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಇವರು ನ್ಯೂಜಿಲೆಂಡ್ ಸ್ಟಾರ್ ಆಟಗಾರ್ತಿ ಸುಜಿ ಬೇಟ್ಸ್ ಅವರ ದಾಖಲೆ ಅಳಿಸಿದ್ದಾರೆ. ಸುಜಿ ಬೇಟ್ಸ್ 29 ಬಾರಿ ಈ ಸಾಧನೆ ಮಾಡಿದ್ದರು.
- ಸ್ಮೃತಿ ಮಂಧನಾ ಮೂರನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 77 ರನ್ ಸಿಡಿಸಿದ್ದು, ವಿಂಡೀಸ್ ವಿರುದ್ಧ ಗಳಿಸಿದ ಗರಿಷ್ಠ ರನ್ ಆಗಿದೆ. ಇವರು 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 74 ರನ್ಗಳ ಇನ್ನಿಂಗ್ಸ್ ಗಳಿಸಿದ್ದು ಬೆಸ್ಟ್ ಸಾಧನೆ ಆಗಿತ್ತು.
- ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಮತ್ತೊಂದು ದಾಖಲೆ ಬರೆದರು. ಇವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ವರ್ಷ 100 ಅಥವಾ ಅದಕ್ಕಿಂತ ಹೆಚ್ಚು ಬೌಂಡರಿಗಳನ್ನು ಸಿಡಿಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇವರು ಹೇಲಿ ಮ್ಯಾಥ್ಯೂಸ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಹೇಲಿ ಮ್ಯಾಥ್ಯೂಸ್ 14 ಪಂದ್ಯಗಳಲ್ಲಿ 99 ಬೌಂಡರಿ ಸಿಡಿಸಿದ್ದರು. ಈ ದಾಖಲೆಯನ್ನು ಸ್ಮೃತಿ ಅಳಿಸಿದರು. ಸ್ಮೃತಿ ಈ ವರ್ಷ 104 ಬೌಂಡರಿಗಳನ್ನು ಬಾರಿಸಿದ್ದಾರೆ.