IND vs SL T20: ಹರ್ಮನ್ ಪ್ರೀತ್ ಅರ್ಧಶತಕ: ಭಾರತಕ್ಕೆ 15 ರನ್ ಜಯ, ಕ್ಲೀನ್ ಸ್ವೀಪ್ ಸಾಧನೆ
ತಿರುವನಂತಪುರಂ: ನಾಯಕಿ ಹರ್ಮನ್ ಪ್ರೀತ್ ಕೌರ್ (68 ರನ್) ಬಾರಿಸಿದ ಅರ್ಧಶತಕ ಹಾಗೂ ಆಲ್‌ರೌಂಡರ್ ಅಮನ್ ಜೋತ್ ಕೌರ್ ಅವರ ಸ್ಥಿರ ಪ್ರದರ್ಶನದ ಬಲದಿಂದ ಟೀಮ್ ಇಂಡಿಯಾ 5ನೇ ಟಿ20 ಪಂದ್ಯವನ್ನು 15 ರನ್‌ಗಳಿಂದ ಗೆದ್ದು, ಐದು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆರಂಭ ಕಳಪೆಯಾಗಿತ್ತು. ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಶೆಫಾಲಿ ವರ್ಮಾ 5 ರನ್‌ಗಳಿಗೆ ಆಟ ಮುಗಿಸಿದರು. ಚೊಚ್ಚಲ ಬಾರಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶವನ್ನು ಪಡೆದ ಜಿ ಕಮಲಿನಿ 12 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಹರ್ಲಿನ್ ಡಿಯೋಲ್ 13, ರಿಚಾ ಘೋಷ್ 5, ದೀಪ್ತಿ ಶರ್ಮಾ 7 ರನ್ ಬಾರಿಸಿದರು.

77 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕಿ ಹರ್ಮನ್ ಪ್ರೀತ್ ಕೌರ್ ಹಾಗೂ ಅಮನ್‌ಜೋತ್ ಕೌರ್ ಸೊಗಸಾದ ಜೊತೆಯಾಟವನ್ನು ನೀಡಿದರು. ಈ ಜೋಡಿ 6ನೇ ವಿಕೆಟ್‌ಗೆ 38 ಎಸೆತಗಳಲ್ಲಿ 61 ರನ್‌ಗಳ ಜೊತೆಯಾಟವನ್ನು ನೀಡಿತು. ಅಮನ್‌ಜೋತ್ ಕೌರ್ 1 ಬೌಂಡರಿ, 1 ಸಿಕ್ಸರ್ ನೆರವಿನಿಂದ 21 ರನ್ ಬಾರಿಸಿ ಔಟ್ ಆದರು. ನಾಯಕಿ ಹರ್ಮನ್ ಪ್ರೀತ್ ಕೌರ್ 43 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ 68 ರನ್ ಬಾರಿಸಿ ಮಿಂಚಿದರು. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 175 ರನ್ ಸೇರಿಸಿತು.
ಹಸಿನಿ ಪೆರೆರಾ ಅರ್ಧಶತಕ
ಶ್ರೀಲಂಕಾ ತಂಡದ ಭರವಸೆಯ ಆಟಗಾರ್ತಿ ಹಸಿನಿ ಪೆರೆರಾ ಜವಾಬ್ದಾರಿಯುತ ಆಟವನ್ನು ಆಡಿದರು. ಆದರೆ ನಾಯಕಿ ಚಮರಿ ಅಟಪಟ್ಟು (2) ರನ್ ಕಲೆ ಹಾಕುವಲ್ಲಿ ವಿಫಲರಾದರು. 2ನೇ ವಿಕೆಟ್‌ಗೆ ಇಮೇಷಾ ದುಲಾನಿ ಹಾಗೂ ಹಸಿನಿ ಪೆರೆರಾ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 56 ಎಸೆತಗಳಲ್ಲಿ 79 ರನ್ ಸೇರಿಸಿತು. ಈ ವೇಳೆ 8 ಬೌಂಡರಿ ಸೇರಿದಂತೆ 50 ರನ್ ಬಾರಿಸಿದ ಇಮೇಷಾ ದುಲಾನಿ ಅವರಿಗೆ ಅಮನ್‌ಜೋತ್ ಕೌರ್ ಖೆಡ್ಡಾ ತೋಡಿದರು. ಆರಂಭಿಕ ಆಟಗಾರ್ತಿ ಹಸಿನಿ ಪೆರೆರಾ 42 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 65 ರನ್ ಬಾರಿಸಿ ಶ್ರೀ ಚರಣಿಗೆ ವಿಕೆಟ್ ಒಪ್ಪಿಸಿದರು. ರಶ್ಮಿಕಾ ಸೆವ್ವಾಂಡಿ ಕೆಳ ಕ್ರಮಾಂಕದಲ್ಲಿ 14 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಭಾರತದ ಪರ ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಸ್ನೇಹಾ ರಾಣಾ, ವೈಷ್ಣವಿ ಶರ್ಮಾ, ಶ್ರೀ ಚರಣಿ, ಅಮನ್‌ಜೋತ್ ಕೌರ್ ತಲಾ ಒಂದು ವಿಕೆಟ್ ಪಡೆದು ಬೀಗಿದರು. ದೀಪ್ತಿ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications