ಭಾರತ ವನಿತಾ ಕ್ರಿಕೆಟ್ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿದ ಅರೋತೆ

ನವದೆಹಲಿ, ಜಲೈ 10: ವನಿತಾ ವರ್ಲ್ಡ್ ಟಿ20 ಕ್ರಿಕೆಟ್ ಗೆ ಇನ್ನು 5 ತಿಂಗಳಿದೆಯಷ್ಟೆ. ಆದರೆ ಅಷ್ಟರಲ್ಲಾಗಲೇ ಭಾರತ ವನಿತಾ ಕ್ರಿಕೆಟ್ ತಂಡದ ಕೋಚ್ ತುಷಾರ್ ಅರೋತೆ ಅವರು ಜವಾಬ್ದಾರಿಯಿಂದ ಕೆಳಗಿಳಿದಿದ್ದಾರೆ. ಏಷ್ಯಕಪ್ ಕ್ರಿಕೆಟ್ ನಲ್ಲಿ ತಂಡದ ಸೋಲಿನ ಬಗ್ಗೆ ಅಪಶ್ರುತಿ ಕೇಳಿಬಂದ ಹಿನ್ನೆಲೆಯಲ್ಲಿ ತುಷಾರ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆಯಾದರೂ ತುಷಾರ್, ಇದಕ್ಕೆ ವಯಕ್ತಿಕ ಕಾರಣ ಎಂದಿದ್ದಾರೆ.
ತಾನು ಕೋಚ್ ಸ್ಥಾನದಿಂದ ಕೆಳಗಿಳಿಯುತ್ತಿರುವುದಕ್ಕೆ ಮೊದಲ ಕಾರಣ 'ವೈಯಕ್ತಿಕ'ವೆಂದು ಅರೋತೆ ಹೇಳಿದ್ದರೂ ಕೆಲ ಆಟಗಾರರೊಂದಿಗೆ ಸಂಬಂಧ ಚೆನ್ನಾಗಿಲ್ಲದಿರುವುದು ಇನ್ನೊಂದು ಕಾರಣವೆಂದು ಅವರೇ ಹೇಳಿಕೊಂಡಿದ್ದಾರೆ. ಹಾಗಾಗಿಯೇ ವನಿತಾ ಕ್ರಿಕೆಟ್ ತಂಡದ ಉತ್ತಮ ಭವಿಷ್ಯಕ್ಕಾಗಿ ತಾನು ಕೆಳಗಿಳಿಯುವುದು ಉತ್ತಮವೆಂದು ಭಾವಿಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತುಷಾರ್ ಹೇಳಿದ್ದಾರೆ.
ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಏಷ್ಯಕಪ್ ಫೈನಲ್ ನಲ್ಲಿ ಭಾರತ ವನಿತಾ ತಂಡ ಸೋತಿತ್ತು. ಈ ವೇಳೆ ಪ್ರಮುಖ ಆಟಗಾರ್ತಿ ಮತ್ತು ಅರೋತೆ ಮಧ್ಯೆ ವೈಮನಸ್ಸು ಉಂಟಾಗಿರುವ ಬಗ್ಗೆ ಆರೋಪವೂ ಕೇಳಿಬಂದಿತ್ತು. ಅವೆಲ್ಲದಕ್ಕೂ ಲಿಂಕ್ ಎಂಬಂತೆ ಅರೋತೆ ಇಂದು ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಭಾರತೀಯ ಕ್ರಿಕೆಟ್ ಸಮಿತಿಯ ಆಡಳಿತಾಧಿಕಾರಿ, ವನಿತಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಡಯಾನಾ ಎಡುಲ್ಜಿ ಅವರನ್ನು ಕಳೆದ ವಾರ ಅರೋತೆ ಭೇಟಿಯಾಗಿದ್ದರು. ಆಗಲೇ ಅರೋತೆ ಅವರು ಕೋಚ್ ಜವಾಬ್ದಾರಿಯಿಂದ ಹೊರಬರುವ ಗಾಳಿಸುದ್ದಿಗೆ ಪುಷ್ಟಿ ಬಂದಂತಾಗಿತ್ತು. ಈ ಎಲ್ಲಾ ವಿಚಾರಗಳನ್ನು ಗಮನಿಸಿರುವ ಬಿಸಿಸಿಐ, ಅರೋತೆ ನೀಡಿರುವ ರಾಜೀನಾಮೆ ಪತ್ರವನ್ನು ಪರಿಗಣಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications