ICC Women's World Cup Semi Final: ದಾಖಲೆಯ ಮೊತ್ತ ಚೇಸ್ ಮಾಡಿದ ಭಾರತ ಫೈನಲ್‌ಗೆ
ಭಾರತ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಿದೆ. ನವಿ ಮುಂಬೈನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಫೈನಲ್‌ಗೆ ಪ್ರವೇಶ ಪಡೆದಿದೆ. ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಹರ್ಮನ್ ಪ್ರೀತ್ ಕೌರ್ ಪಡೆ ಸೊಗಸಾದ ಪ್ರದರ್ಶನ ನೀಡಿ ಮತ್ತೊಮ್ಮೆ ಫೈನಲ್‌ಗೆ ಪ್ರವೇಶಿಸಿತು. ಈ ಮೂಲಕ ಭಾರತ ಪ್ರಶಸ್ತಿ ಗೆಲ್ಲುವ ಆಸೆ ಚಿಗುರಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಕ್ರಿಕೆಟ್ ಮೈದಾನದಲ್ಲಿ ದಿನವೂ ಹೊಸ ದಾಖಲೆಗಳು ನಿರ್ಮಾಣವಾಗುತ್ತವೆ. ಇನ್ನು ಹಲವು ದಾಖಲೆಗಳು ಇತಿಹಾಸದ ಪುಟದಲ್ಲಿ ಸ್ಥಾನ ಪಡೆಯುತ್ತದೆ. ಅಂತಹದ್ದೇ ಇನಿಂಗ್ಸ್‌ನ್ನು ಗುರುವಾರ ಭಾರತದ ಮಹಿಳಾ ಪಡೆ ಇತಿಹಾಸ ನಿರ್ಮಿಸಿದೆ. ಭಾರತ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ದಾಖಲೆಯ ರನ್ ಚೇಸ್ ಮಾಡಿ ಅಬ್ಬರಿಸಿದೆ. ಭಾರತದ ಪರ ಭರವಸೆಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿ ಗೆಲುವಿನಲ್ಲಿ ಮಿಂಚಿದರು. ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಜೆಮಿಮಾ ದಾಖಲೆಯ ಮೊತ್ತವನ್ನು ಚೇಸ್ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.

ಭಾರತ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್‌ಗೆ ಅರ್ಹತೆ ಪಡೆದಿದೆ. ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ದಾಖಲೆಯ ರನ್ ಚೇಸ್ ಮಾಡಿದೆ. ಈ ಮೊದಲು 2025ರಲ್ಲಿ ಆಸ್ಟ್ರೇಲಿಯಾ ಇದೇ ವಿಶ್ವಕಪ್‌ನ ಲೀಗ್ ಹಂತದ ಪಂದ್ಯದಲ್ಲಿ 331 ರನ್ ಚೇಸ್ ಮಾಡಿತ್ತು. ಈ ದಾಖಲೆಯನ್ನು ಭಾರತ ಈಗ ಅಳಿಸಿ ಹಾಕಿ, ಹೊಸ ಇತಿಹಾಸ ನಿರ್ಮಿಸಿದೆ.
ಶತಕದ ಜೊತೆಯಾಟ
ಮಹತ್ವದ ಪಂದ್ಯದಲ್ಲಿ ಶೆಫಾಲಿ ವರ್ಮಾ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಸ್ಮೃತಿ ಮಂಧಾನ ಸಹ 24 ರನ್‌ಗಳಿಗೆ ಔಟ್ ಆದರು. ಮೂರನೇ ವಿಕೆಟ್‌ಗೆ ಹರ್ಮನ್ ಪ್ರೀತ್ ಕೌರ್ ಹಾಗೂ ಜೆಮಿಮಾ ರೊಡ್ರಿಗಾಸ್ ಜೋಡಿ 176 ಎಸೆತಗಳಲ್ಲಿ 167 ರನ್ ಸಿಡಿಸಿ ತಂಡಕ್ಕೆ ಆಧಾರವಾಯಿತು. ಹರ್ಮನ್ ಪ್ರಿತ್ 10 ಬೌಂಡರಿ, 2 ಸಿಕ್ಸರ್ ಸಹಾಯದಿಂದ 89 ರನ್ ಬಾರಿಸಿದ್ದಾಗ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ 24, ರಿಚಾ ಘೋಷ್ 26, ಅಮನ್‌ಜೋತ್ ಕೌರ್ ಅಜೇಯ 15 ರನ್ ಬಾರಿಸಿದರು.
ಜೆಮಿಮಾ ಶತಕ
25 ವರ್ಷದ ಜೆಮಿಮಾ ರೋಡ್ರಿಗಸ್ ತಮ್ಮ ವೃತ್ತಿ ಜೀವನದ ಸ್ಮರಣೀಯ ಇನಿಂಗ್ಸ್ ಕಟ್ಟಿ ಬೀಗಿದರು. ಇವರು 134 ಎಸೆತಗಳಲ್ಲಿ 14 ಬೌಂಡರಿ ನೆರವಿನಿಂದ ಅಜೇಯ 127 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಭಾರತ 48.3 ಓವರ್‌ಗಳಲ್ಲಿ 5 ವಿಕೆಟ್‌ಗೆ 341 ರನ್ ಬಾರಿಸಿ ಫೈನಲ್‌ಗೆ ಅರ್ಹತೆ ಪಡೆಯಿತು.

ಆಸ್ಟ್ರೇಲಿಯಾ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸತತ 15 ಪಂದ್ಯಗಳನ್ನು ಗೆದ್ದ ದಾಖಲೆಗೆ ಬ್ರೇಕ್ ಬಿದ್ದಿತು. 2017ರಲ್ಲಿ ಭಾರತವೇ ಆಸ್ಟ್ರೇಲಿಯಾವನ್ನು ಸೆಮಿಫೈನಲ್ ಪಂದ್ಯದಲ್ಲಿ ಮಣಿಸಿ, ಫೈನಲ್‌ಗೆ ಪ್ರವೇಶ ಪಡೆದಿತ್ತು. ಈಗ ಇಂತಹದ್ದೇ ಸಾಧನೆಯನ್ನು ಭಾರತ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications