ಟೀಮ್ ಇಂಡಿಯಾ ಮಹಿಳಾ ತಂಡ ಸುದೀರ್ಘ ಕಾಲದ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಜ್ಜಾಗಲಿದೆ. ಬಹುತೇಕ ನಾಲ್ಕು ತಿಂಗಳ ಅಂತರದ ಬಳಿಕ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸರಣಿಯಲ್ಲಿ ಭಾಗಿಯಾಗುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಜುಲೈನಲ್ಲಿ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡು ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ.
ಭಾರತದ ಮಹಿಳಾ ತಂಡ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದು ಫೆಬ್ರವರಿ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ. ಇನ್ನು ಏಕದಿನ ಸರಣಿಯನ್ನಾಡಿದ್ದು 2022ರ ಸೆಪ್ಟೆಂಬರ್‌ನಷ್ಟು ಹಿಂದೆ ಎಂಬುದನ್ನು ಗಮನಿಸಬೇಕಿದೆ. ಹಾಗಾಗಿ ಹರ್ಮನ್ ಪಡೆ ಮತ್ತೆ ಕಣಕ್ಕಿಳಿಯುವುದನ್ನು ನೋಡಲು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಉತ್ಸುಕರಾಗಿದ್ದಾರೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮಹಿಳಾ ವಿಭಾಗದ ಅಧ್ಯಕ್ಷ ಶಫಿಯುಲ್ ಆಲಂ ಚೌಧರಿ ನಡೆಲ್ ಈ ಸರಣಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಹೌದು, ನಾವು ಜುಲೈನಲ್ಲಿ ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ವಿರುದ್ಧ ವೈಟ್-ಬಾಲ್ ಸರಣಿಯನ್ನು ಆಡಲಿದ್ದೇವೆ ಮತ್ತು ಎಲ್ಲಾ ಪಂದ್ಯಗಳು ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ" ಎಂದು ಕ್ರಿಕ್ ಬಜ್ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.
ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಕೊನೆಯ ಬಾರಿಗೆ ಮಹಿಳಾ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಿದ್ದು 2012ರಷ್ಟು ಹಿಂದೆ. ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕ ತಂಡಗಳು ಅಂದು ಮುಖಾಮುಖಿಯಾಗಿದ್ದವು. ಸರಣಿಗಾಗಿ ಸಿದ್ಧಪಡಿಸಲಾದ ವೇಳಾಪಟ್ಟಿಯ ಪ್ರಕಾರ ಎಲ್ಲಾ ಪಂದ್ಯಗಳು ಹಗಲಿನಲ್ಲಿಯೇ ನಡೆಯಲಿದ್ದು ಬೆಳಿಗ್ಗೆ ಪಂದ್ಯ ಪ್ರಾರಂಭವಾಗಲಿದೆ. ಜುಲೈ 9 ರಿಂದ T20I ಸರಣಿಯೊಂದಿಗೆ ಈ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ. ಹೀಗಾಗಿ ಟೀಮ್ ಇಂಡಿಯಾ ಜುಲೈ 6 ರಂದು ಢಾಕಾಗೆ ತೆರಳಲಿದೆ. ಎರಡನೇ ಮತ್ತು ಮೂರನೇ ಟಿ20 ಜುಲೈ 11 ಮತ್ತು 13 ರಂದು ನಡೆಯಲಿದೆ.
ಇನ್ನು ಮೂರು ಪಂದ್ಯಗಳ ಏಕದಿನ ಸರಣಿ ಜುಲೈ 16ರಿಂದ ಆರಂಭವಾಗಲಿದ್ದು, ಎರಡನೇ ಪಂದ್ಯ ಜುಲೈ 19 ರಂದು ನಡೆಯಲಿದೆ. ಭಾರತದ ಬಾಂಗ್ಲಾದೇಶ ಪ್ರವಾಸವು ಜುಲೈ 22 ರಂದು ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ. ಟೀಮ್ ಇಂಡಿಯಾ 100 ದಿನಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರಬಹುದು ಆದರೆ ಮಾರ್ಚ್‌ನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) ನ ಉದ್ಘಾಟನಾ ಆವೃತ್ತಿಯಲ್ಲಿ ಎಲ್ಲಾ ಆಟಗಾರ್ತಿಯರು ಭಾಗಿಯಾಗಿದ್ದರು.