IND vs BAN 2nd T20: ಒಂದು ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿ ಗೆದ್ದ ಭಾರತ
ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ನೇತೃತ್ವದ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಕೊನೆಯ ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿಯನ್ನು ಭಾರತ ವಶಪಡಿಸಿಕೊಂಡಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಟೀಮ್ ಇಂಡಿಯಾ ನೀಡಿದ 222 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ ಕೇವಲ 135 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತ 86 ರನ್‌ಗಳ ಅಮೋಘ ಜಯ ದಾಖಲಿಸಿತು. ಬಾಂಗ್ಲಾದೇಶ ಪರ ಮಾಜಿ ನಾಯಕ ಮಹಮ್ಮದುಲ್ಲಾ 41 ರನ್ ಗಳಿಸುವ ಮೂಲಕ ಟಾಪ್ ಸ್ಕೋರರ್ ಆದರು. ಇನ್ನುಳಿದ ಯಾವುದೇ ಬ್ಯಾಟರ್ ಟೀಮ್ ಇಂಡಿಯಾ ಬೌಲಿಂಗ್ ದಾಳಿ ಎದುರು ಪ್ರತಿರೋಧ ತೋರಲಿಲ್ಲ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಭಾರತ ತನ್ನ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಸಂಜು ಸ್ಯಾಮ್ಸನ್ 10 ರನ್ ಗಳಿಸಿ ಔಟಾದರೆ, ಅಭಿಷೇಕ್ ಶರ್ಮಾ 15 ಮತ್ತು ಸೂರ್ಯಕುಮಾರ್ ಯಾದವ್ 8 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಇದಾದ ಬಳಿಕ ಬ್ಯಾಟಿಂಗ್‌ಗೆ ಬಂದ ರಿಂಕು ಸಿಂಗ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಇಬ್ಬರು ತಲಾ ಅರ್ಧಶತಕ ಬಾರಿಸಿ ಮಿಂಚಿದರು. ಈ ಇಬ್ಬರ ಅರ್ಧಶತಕಗಳ ನೆರವಿನಿಂದ ಭಾರತ 222 ರನ್ ಗಳ ಬೃಹತ್ ಸ್ಕೋರ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೇಸಿಂಗ್ ಆರಂಭಿಸಿದ ಬಾಂಗ್ಲಾದೇಶಕ್ಕೆ ಟೀಮ್ ಇಂಡಿಯಾ ಬೌಲರ್‌ಗಳು ಕಡಿವಾಣ ಹಾಕಿದರು.
ಟೀಮ್ ಇಂಡಿಯಾ ಬೌಲರ್‌ಗಳು ಒಂದರ ಹಿಂದೊಂದರಂತೆ ಬಾಂಗ್ಲಾದೇಶದ ವಿಕೆಟ್ ಕಬಳಿಸುವ ಮೂಲಕ ಸರಣಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಮಹಮ್ಮದುಲ್ಲಾ ಹೊರತುಪಡಿಸಿ ಬಾಂಗ್ಲಾದೇಶದ ಯಾವುದೇ ಬ್ಯಾಟರ್ 20ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಮಹಮ್ಮದುಲ್ಲಾ 39 ಎಸೆತಗಳಲ್ಲಿ 41 ರನ್‌ಗಳ ಇನ್ನಿಂಗ್ಸ್ ಆಡಿದರು. ಬಾಂಗ್ಲಾದೇಶದ ನಾಯಕ ನಜ್ಮುಲ್ ಹಸನ್ ಶಾಂಟೊ (11) ಲಿಟನ್ ದಾಸ್ (14), ಪ್ರವೇಜ್ ಹಸನ್ (16), ತೌಹೀದ್ ಹೃದಯ (2) ತಂಡದ ಗೆಲುವಿಗೆ ಶ್ರಮಿಸಲಿಲ್ಲ.
ಭಾರತ 7 ಬೌಲರ್‌ಗಳ ಪ್ರಯೋಗ
ಬಾಂಗ್ಲಾದೇಶ ವಿರುದ್ದದ ಎರಡನೇ ಟಿ20 ಪಂದ್ಯದಲ್ಲಿ ಭಾರತದ 7 ಬೌಲರ್‌ಗಳು ಬೌಲಿಂಗ್ ಮಾಡಿದರು. ಅಚ್ಚರಿ ಎಂದರೆ ಎಲ್ಲಾ ಬೌಲರ್‌ಗಳು ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಮತ್ತು ನಿತೀಶ್ ರೆಡ್ಡಿ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆಲ್‌ರೌಂಡರ್ ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ವೇಗದ ಬೌಲರ್‌ಗಳಾದ ಅರ್ಷದೀಪ್ ಸಿಂಗ್ ಮತ್ತು ಮಯಾಂಕ್ ಯಾದವ್ ತಲಾ ಒಂದು ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications